ಮಡಿಕೇರಿ: ಕಳೆದ ಬಾರಿ ಪ್ರವಾಹದಲ್ಲಿ ಮನೆ ಮಠಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ಸಂತ್ರಸ್ತರು ಇದೀಗ ಕೊರೊನಾ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ, ಕುಂಬಾರಗುಂಡಿ ಬರಡಿ, ವಿರಾಜಪೇಟೆ ತಾಲೂಕಿನ ಕರಡಿಗೋಡು, ಗುಹ್ಯ ಸೇರಿದಂತೆ ಹಲವು ಗ್ರಾಮಗಳ ಸಾವಿರಾರು ಕುಟುಂಬಗಳು ಊಟಕ್ಕೂ ವ್ಯವಸ್ಥೆ ಇಲ್ಲದೆ ಪರದಾಡುತ್ತಿವೆ. ಕೇವಲ ಕೂಲಿ ನಂಬಿ ಬದುಕುತ್ತಿದ್ದ ಸಂತ್ರಸ್ತರ ಸ್ಥಿತಿ ಶೋಚನೀಯವಾಗಿದೆ. ಇದ್ದ ಮನೆಯೂ ಪ್ರವಾಹದಲ್ಲಿ ಕೊಚ್ಚಿ ಹೋಗಿ ಬೀದಿಪಾಲಾಗಿದ್ದ ಇವರಿಗೆ ಕನಿಷ್ಠ ಒಪ್ಪೊತ್ತಿನ ಊಟಕ್ಕೂ ಏನು ಮಾಡುವುದೆಂಬ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
Advertisement
ಕೈಯಲ್ಲಿದ್ದ ಹಣವು ಖರ್ಚಾಗಿ ಹೋಗಿದ್ದು, ಸಾಲ ಮಾಡಿ ಇಷ್ಟು ದಿನ ಬದುಕಿದ್ದೇವೆ. ಮುಂದಿನ ಸ್ಥಿತಿ ಏನು ಎಂಬ ಆತಂಕ ಎದುರಾಗಿದೆ. ಸರ್ಕಾರದಿಂದ 20 ಕೆ.ಜಿ. ಅಕ್ಕಿ ಬಿಟ್ಟರೆ ಮತ್ತೇನು ಕೊಟ್ಟಿಲ್ಲ. ಹೀಗೆ ಮುಂದುವರಿದರೆ ನಮ್ಮ ಸ್ಥಿತಿ ದುಸ್ಥರವಾಗಲಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದು ಒಂದೆಡೆಯಾದರೆ ಮತ್ತೊಂದೆಡೆ ಪುನಃ ಮಳೆಗಾಲ ಆರಂಭವಾಗುತ್ತಿದ್ದು, ಇಂದಿಗೂ ಮನೆಗಳ ನಿರ್ಮಾಣ ಕಾರ್ಯವಾಗಿಲ್ಲ. ನಾವು ಮುಂದೆ ಜೀವನ ಸಾಗಿಸುವುದಾದರೆ ಹೇಗೆ ಎಂತ ಆತಂಕದಲ್ಲಿದ್ದಾರೆ.
Advertisement
Advertisement
ಪ್ರವಾಹ ಇಳಿದು ಹಲವು ತಿಂಗಳ ಬಳಿಕ ಸರ್ಕಾರ ಸಂತ್ರಸ್ಥರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತಿತ್ತು. ಆದರೆ ಕೊರೊನಾ ಮಹಾಮಾರಿಯಿಂದಾಗಿ ಇದೀಗ ಯಾವುದೇ ಕೆಲಸಗಳು ಆಗದೆ ಸಂತ್ರಸ್ತರ ಮನೆಗಳ ನಿರ್ಮಾಣ ಕಾರ್ಯವೂ ಸ್ಥಗಿತಗೊಂಡಿದೆ. ಮಳೆಗಾಲ ಆರಂಭವಾಗುತ್ತಿರುವುದರಿಂದ ಜಿಲ್ಲಾಡಳಿತ ನಮಗೆ ಸೂರಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.