ಚಿಕ್ಕಬಳ್ಳಾಪುರ: ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದ ಮಹಿಳೆ ಮನೆಯಿಂದ ಹೊರಗಡೆ ಬಂದಿದ್ದು, ಇದನ್ನು ಕಂಡ ಅಕ್ಕಪಕ್ಕದ ನಿವಾಸಿಗಳ ನಡುವೆ ಗಲಾಟೆ ನಡೆದಿದೆ. ಬಳಿಕ ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಮಹಿಳೆಯನ್ನು ಆಸ್ಪತ್ರೆಯ ಕ್ವಾರಂಟೈನ್ ವಾರ್ಡ್‍ಗೆ ಶಿಫ್ಟ್ ಮಾಡಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ನಗರದ ನಿವಾಸಿಯೊಬ್ಬರು ಅಜ್ಮೇರ್ ಗೆ ತೆರಳಿ ವಾಪಸ್ಸಾಗಿದ್ದರು. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಹೋಂ ಕ್ವಾರಂಟೈನ್ ಸೂಚಿಸಲಾಗಿತ್ತು. ಆದರೆ ಆ ಮಹಿಳೆಯ ಮನೆ ವಠಾರದಲ್ಲಿರುವ ಕಾರಣ ಮನೆಯಿಂದ ಹೊರಗಡೆ ಬಂದು ಓಡಾಡುತ್ತಿದ್ದರು ಎನ್ನಲಾಗಿದೆ.
Advertisement
Advertisement
ತಮ್ಮ ಚಿಕ್ಕ ಮಗಳು ಮನೆಯಿಂದ ಹೊರಗೆ ಬಂದಾಗ ಬೀದಿಗೆ ಸಹ ಬಂದಿದ್ದಾರೆ. ಹೀಗಾಗಿ ಅಕ್ಕಪಕ್ಕದ ನಿವಾಸಿಗಳು ಅವರ ಜೊತೆ ವಾಗ್ವಾದ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಗೆ ಮನೆಯಿಂದ ಹೊರಗಡೆ ಬಾರದಂತೆ ಬುದ್ದಿವಾದ ಹೇಳಿದ್ದಾರೆ.
Advertisement
ಕೊನೆಗೆ ಅಕ್ಕಪಕ್ಕದ ನಿವಾಸಿಗಳು ಮಹಿಳೆಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಪಟ್ಟು ಹಿಡಿದ ಕಾರಣ ಸ್ಥಳಕ್ಕೆ ಬಂದ ತಾಲೂಕು ಆರೋಗ್ಯಾಧಿಕಾರಿ ಮಹಿಳೆ, ಆಕೆಯ ಮಗ ಹಾಗೂ ಚಿಕ್ಕ ಮಗಳನ್ನು ಜಿಲ್ಲಾಸ್ಪತ್ರೆಯ ಕ್ವಾರಂಟೈನ್ ವಾರ್ಡಿಗೆ ಶಿಫ್ಟ್ ಮಾಡಲಾಗಿದೆ. ಈ ವೇಳೆ ಮಹಿಳೆಯ ಸಂಬಂಧಿಕರು ಹಾಗೂ ಸ್ಥಳೀಯ ನಿವಾಸಿಗಳ ನಡುವೆ ಗಲಾಟೆ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.