ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿನ ದಾಂಧಲೆ ಪ್ರಕರಣವು ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಥರನೇ ಆಗಿದ್ದು, ಘಟನೆ ಹದ್ದುಬಸ್ತಿಗೆ ತರಲು ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಹೊಸಪೇಟೆಯಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಲಭೆ ಕುರಿತು ಸಂದೇಶ ಪೋಸ್ಟ್ ಮಾಡಿದ್ದವನು ಸೇರಿದಂತೆ 25ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದಾದ ನಂತರ ಒಂದು ಗುಂಪು ಪೊಲೀಸ್ ಠಾಣೆ ಎದುರು ಜಮಾವಣೆಗೊಂಡಿದ್ದು, ಪೊಲೀಸ್ ವಾಹನಗಳನ್ನೇ ಧ್ವಂಸಗೊಳಿಸಿದ್ದಾರೆ. ಘಟನೆಯನ್ನು ನಿಯಂತ್ರಿಸುವ ವೇಳೆ ಕೆಲ ಪೊಲೀಸರೂ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೊಲೀಸ್ ವಾಹನಗಳೇ ಟಾರ್ಗೆಟ್ – ದಿಡ್ಡಿ ಹನುಮಂತ ದೇಗುಲಕ್ಕೂ ಕಲ್ಲೇಟು
ನಿನ್ನೆ ರಾತ್ರಿ ಒಬ್ಬ ಯುವಕ ತನ್ನ ಮೊಬೈಲ್ ವಾಟ್ಸಪ್‌ನ ಸ್ಟೇಟಸ್‌ನಲ್ಲಿ ವಿವಾದಿತ ಪೋಸ್ಟ್ ಹಾಕಿದ್ದರಿಂದಾಗಿ ಗಲಭೆ ಹೊತ್ತಿಕೊಂಡಿದೆ. ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲೇ ಇದೆ. ಈಗಾಗಲೇ ಪೋಸ್ಟ್ ಹಾಕಿದ ವ್ಯಕ್ತಿ ಸೇರಿದಂತೆ 25ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾನೂನು ಕೈಗೆತ್ತಿಕೊಳ್ಳುವವರು ಯಾವುದೇ ಧರ್ಮದವರಾದರೂ ಬಿಡುವ ಮಾತೇ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೊಂದು ವ್ಯವಸ್ಥಿತ ಸಂಚು ಇದ್ದಂತೆ ಮೇಲ್ನೋಟಕ್ಕೆ ಕಾಣುತ್ತದೆ. ನನಗೆ ಬಂದ ಮಾಹಿತಿ ಪ್ರಕಾರ ಅಲ್ಲಿ ಮೊದಲೇ ಒಂದು ಲೋಡ್ ಕಲ್ಲು ಸಂಗ್ರಹವಾಗಿತ್ತು. ಕಲ್ಲು ತೂರಾಟದ ವೇಳೆ ಕೆಲ ಪೊಲೀಸ್ ಗಾಯಗೊಂಡಿದ್ದಾರೆ. ಓರ್ವ ಪಿಎಸ್‌ಐ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೊಂದು ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ತರವಾದ ಘಟನೆಯಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಪೋಸ್ಟ್ – ಹುಬ್ಬಳ್ಳಿಯಲ್ಲಿ ಮುಸ್ಲಿಂ ಪುಂಡರಿಂದ ದಾಂಧಲೆ
ಘಟನೆ ವೇಳೆ ಅಲ್ಲಾಹು ಅಕ್ಬರ್ ಘೋಷಣೆ: ಇನ್ನೂ ಈ ದಾಂಧಲೆಯ ಬಗ್ಗೆ ಸ್ಥಳೀಯ ನಿವಾಸಿಗಳು ಪಬ್ಲಿಕ್ ಟಿವಿಯೊಂದಿಗೆ ತಮ್ಮ ಆತಂಕವನ್ನು ಹೇಳಿಕೊಂಡಿದ್ದಾರೆ. ಏಕಾಏಕಿ ಮನೆಗಳ ಮುಂದೆ ಬಂದು ಅಲ್ಲಾಹು ಅಕ್ಬರ್ ಅಂತ ಘೋಷಣೆ ಕೂಗಲು ಶುರು ಮಾಡಿದ್ದರು. ನಂತರ ಕಾರಿನ ಗಾಜು ಹೊಡಿದು, ಅಂಗಡಿ ಮುಂಗಟ್ಟಿಗೆ ಕಲ್ಲು ತೂರಿದ್ದಾರೆ. ಪೊಲೀಸರು ಬರೋದು ಹತ್ತು ನಿಮಿಷ ತಡವಾಗಿದ್ರೆ ಪುಂಡರು ಮನೆಗಳಿಗೇ ನುಗ್ಗುತ್ತಿದ್ದರು ಎಂದು ಸತ್ಯಾಸತ್ಯತೆಗಳನ್ನು ಬಿಚ್ಚಿಟ್ಟಿದ್ದಾರೆ.