ಬೆಂಗಳೂರು: ನೀವು ಏನು ಮಾಡ್ತಿರೋ ಗೊತ್ತಿಲ್ಲ. ನಗರದಲ್ಲಿ ರೌಡಿಸಂ ಸ್ಟಾಪ್ ಆಗಬೇಕು. ಅವರು ರೌಡಿಸಂ ಬಿಡಬೇಕು, ಇಲ್ಲವೇ ರಾಜ್ಯ ಬಿಡಬೇಕು. ಆ ಕೆಲಸ ಆಗಲೇಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಖಡಕ್ಕಾಗಿ ಹೇಳಿದ್ದಾರೆ.
ಇಂದು ನಗರದ ವಿಕಾಸಸೌಧದ ಸಭೆಯಲ್ಲಿ ಪಾರದರ್ಶಕತೆ ದೃಷ್ಟಿಯಿಂದ ಮಾಧ್ಯಮಗಳ ಸಮ್ಮುಖದಲ್ಲೇ ಮಾತನಾಡಿದ ಅವರು, ಸಾರ್ವಜನಿಕರಿಗೆ ತೊಂದರೆ ಕೊಡುವವರ ವಿರುದ್ಧ ಮುಲಾಜಿಲ್ಲದೆ ರೌಡಿ ಶೀಟ್ ತೆರೆಯಿರಿ. ಚಿಕ್ಕ ವಯಸ್ಸಿನವರು ಹಾಗೂ ಸಣ್ಣಾಪುಟ್ಟ ಗಲಾಟೆ ಮಾಡಿದವರಿಗೆ ರೌಡಿಶೀಟ್ ಹಾಕಿ ತೊಂದರೆ ಕೊಡಬೇಡಿ. ಬುದ್ಧಿ ಹೇಳಿ ಸರಿಮಾಡಿ ಎಂದರು.
Advertisement
ಮಹಿಳಾ ಕಾಲೇಜುಗಳ ಬಳಿ ಬೀದಿ ಕಾಮಣ್ಣರ ಮೇಲೆ ಕಣ್ಣಿಡಿ. ಪಿಜಿಗಳಲ್ಲಿ ಕಾನೂನು ಪಾಲನೆ ಸರಿಯಾಗಿರಬೇಕು. ಇಲ್ಲದಿದ್ದರೆ ಪಿಜಿ ಮಾಲೀಕರ ಮೇಲೆ ದೂರು ದಾಖಲಿಸಿ. ನಗರ ಪೊಲೀಸ್ ಕಮೀಷನರ್ ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳು ರಾತ್ರಿ ಗಸ್ತು ತಿರುಗಬೇಕು ಎಂದು ಹೇಳಿದರು.
Advertisement
ನನ್ನ ಕ್ಷೇತ್ರದಲ್ಲೇ ಬೆಳಗ್ಗೆ 8 ಗಂಟೆಗೆ ಬಾರ್ ಓಪನ್ ಆಗುತ್ತೆ, ಹಾಗಾಗಬಾರದು. ಸಮಯ ಪಾಲನೆ ಸರಿಯಾಗಬೇಕು. ಅವರಿಗೆ ಅವಧಿ ಮೀರಿ ಬಾಗಿಲು ತೆರೆದಿದ್ದರೆ ಬಾರ್ ಮಾಲೀಕರನ್ನು ಕರೆತಂದು ಠಾಣೆಯಲ್ಲಿ ಕೂರಿಸಿ ಎಲ್ಲಾ ಸರಿಯಾಗುತ್ತೆ. ವಿದೇಶಿಗರು ಇರುವ ಕಡೆ ಕಾನೂನು ಸುವ್ಯವಸ್ಥೆ ಬಗ್ಗೆ ಗಮನ ಹರಿಸಿ. ನೀವು ಎಷ್ಟು ಚೆನ್ನಾಗಿ ಬೇಕಾದ್ರೂ ಕೆಲಸ ಮಾಡಿ. ನಾನೇನು ಹಸ್ತಕ್ಷೇಪ ಮಾಡಲ್ಲ. ಆದರೆ ನೀವು ತಪ್ಪು ಮಾಡಿದರೆ ಕ್ಷಮಿಸಲ್ಲ. ಯಾವ ಇನ್‍ಫ್ಲುಯೆನ್ಸ್ ನನ್ನ ಹತ್ರ ನಡೆಯಲ್ಲ. ದೂರು ನೀಡಿದ ಕೂಡಲೇ ಎಫ್‍ಐಆರ್ ಹಾಕಬೇಕು. ತಡ ಮಾಡಂಗಿಲ್ಲ ಎಂದು ಖಡಕ್ಕಾಗಿ ಹೇಳಿದರು.
Advertisement
ಇನ್ಸ್ ಪೆಕ್ಟರ್‍ಗಳು ಸ್ಟ್ರಿಕ್ಟ್ ಆಗಿ ಇದ್ದರೆ ಆ ಲಿಮಿಟ್ಸ್‍ನಲ್ಲಿ ಯಾವುದೇ ಅಪರಾಧ ಚಟುವಟಿಕೆ ನಡೆಯಲ್ಲ. ಇನ್ಸ್ ಪೆಕ್ಟರ್‍ಗಳೇ ಜವಬ್ದಾರಿ ತಗೊಂಡು ಎಲ್ಲಾ ನಿಯಂತ್ರಣ ಮಾಡಿ. ಮಕ್ಕಳು ಮಾದಕವ್ಯಸನಕ್ಕೆ ಬಲಿ ಆಗದಂತೆ ನೋಡಿಕೊಳ್ಳಿ. ನಮ್ಮ ಮಕ್ಕಳು ಅಥವಾ ನಿಮ್ಮ ಮಕ್ಕಳು ಹಾಗಾದರೆ ನಮಗೆ ನೋವಾಗುತ್ತದೆ ಅಲ್ವ. ಹಾಗೆ ಬೇರೆಯವರ ಮಕ್ಕಳು ಹಾಗಾದ್ರೆ ಅವರ ತಂದೆ ತಾಯಿಗೆ ನೋವಾಗುತ್ತೆ. ಹಾಗಾಗದಂತೆ ನೋಡಿಕೊಳ್ಳಿ. ಕೆ.ಆರ್.ಮಾರ್ಕೆಟ್ ಮುಂತಾದ ಕಡೆ ಇರುವ ಹಫ್ತಾ ವಸೂಲಿಗೆ ಬ್ರೇಕ್ ಹಾಕಿ ಅಂದ್ರು.
Advertisement
ಒಸಿ, ಮಟ್ಕಾ, ಗಾಂಜಾ ಯಾವುದೇ ದಂಧೆ ಇರಲಿ ಮಟ್ಟಹಾಕಿ. ಹಫ್ತಾ ವಸೂಲಿ ನೂರಕ್ಕೆ ನೂರರಷ್ಟು ನಿಲ್ಲಬೇಕು. ಹಫ್ತಾ ವಸೂಲಿ ಮಾಡುವವರನ್ನು ಒದ್ದು ಒಳಗೆ ಹಾಕಿ. ನಗರದಲ್ಲಿ ಭಿಕ್ಷುಕರ ನಿಯಂತ್ರಣ ಮಾಡಿ. ಪೊಲೀಸರು ಮನಸ್ಸು ಮಾಡಿದ್ರೆ ಒಂದೇ ದಿನದಲ್ಲಿ ಭಿಕ್ಷಾಟನೆ ನಿಲ್ಲಿಸಬಹುದು. ತೃತೀಯ ಲಿಂಗಿಗಳು ಭಿಕ್ಷಾಟನೆ ಮಾಡಿದ್ರೂ ಕ್ರಮ ಕೈಗೊಳ್ಳಿ ಎಂದರು.