ರಶ್ಮಿಕಾ ಮಂದಣ್ಣಗೆ (Rashmika Mandanna) ಭದ್ರತೆ ನೀಡುವಂತೆ ಕೊಡವ ಸಮುದಾಯ ಆಗ್ರಹಿಸಿದೆ. ನಮ್ಮ ಸಮುದಾಯದ ಹೆಣ್ಣುಮಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್‌ಗೆ ಕೊಡವ ಸಂಘಟನೆಯಿಂದ ಪತ್ರ ಬರೆಯಲಾಗಿದೆ. ಈ ಕುರಿತು ಗೃಹ ಸಚಿವ ಜಿ.ಪರಮೇಶ್ವರ್ (G. Parameshwara) ಪ್ರತಿಕ್ರಿಯಿಸಿ, ಈವರೆಗೂ ಯಾವುದೇ ಪತ್ರ ಬಂದಿಲ್ಲ ಎಂದಿದ್ದಾರೆ.
ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಅವರು, ನಮ್ಮ ಕೊಡಗು ಮೂಲದ ರಶ್ಮಿಕಾ ಮಂದಣ್ಣಗೆ ಭದ್ರತೆ ನೀಡುವಂತೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಈ ಕುರಿತು ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿ, ಈವರೆಗೂ ಯಾವುದೇ ಪತ್ರ ಬಂದಿಲ್ಲ. ಇದರ ಬಗ್ಗೆ ಕಚೇರಿಯಲ್ಲಿ ವಿಚಾರಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:‘ಕಿಸ್ಸಿಕ್’ ಬೆಡಗಿ ಶ್ರೀಲೀಲಾಗೆ ಖುಲಾಯಿಸಿದ ಅದೃಷ್ಟ- ನಟಿಗೆ ಬಿಗ್ ಆಫರ್
ಇತ್ತೀಚಿಗೆ ಶಾಸಕ ರವಿ ಗಣಿಗ ಅವರು ರಶ್ಮಿಕಾ ವಿರುದ್ಧ ನೀಡಿದ್ದ ಹೇಳಿಕೆಯ ಬೆನ್ನಲ್ಲೇ ಕೊಡವ ನ್ಯಾಷನಲ್ ಕೌನ್ಸಿಲ್ ನಟಿಯ ಪರ ನಿಂತಿದೆ. ರಶ್ಮಿಕಾ ಮಂದಣ್ಣ ಅವರು ನಮ್ಮ ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿದವರು. ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆ ಮೂಲಕ ಅವರಿಂದು ಭಾರತೀಯ ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ, ನಟಿಯ ಜನಪ್ರಿಯತೆ ಹಾಗೂ ಕಲಾಪ್ರತಿಭೆಯನ್ನ ತಿಳಿಯದ ಕೆಲವರು ವಿನಾಕಾರಣ ಟೀಕೆ ಮಾಡುವ ಮೂಲಕ ಅವರಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಇದು ಘೋರ ಮಾತ್ರವಲ್ಲದೆ ಬೆದರಿಕೆಗೆ ಸಮ ಎಂದು ಪತ್ರದಲ್ಲಿ ದೂರಿದ್ದಾರೆ.
ರಶ್ಮಿಕಾ ಮಂದಣ್ಣ ಭಾರತೀಯ ಚಲನಚಿತ್ರರಂಗಕ್ಕೆ ಸಿಕ್ಕಿರುವ ಅಪೂರ್ವ ಕೊಡುಗೆ. ಅವರು ಶ್ರೇಷ್ಠ ನಟಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ನಟಿ ಸ್ವಂತ ನಿರ್ಧಾರ ಹಾಗೂ ಆಕೆಯ ಆಯ್ಕೆಗಳ ಸ್ವಾತಂತ್ರ‍್ಯದ ಹಕ್ಕನ್ನು ನಾವೆಲ್ಲರೂ ಗೌರವಿಸಬೇಕು. ಅದನ್ನು ಬಿಟ್ಟು ಯಾರೋ ಒಬ್ಬರ ಸೂಚನೆಯಂತೆ, ನಿರೀಕ್ಷೆಯಂತೆ ಇರಬೇಕು ಎಂದು ಒತ್ತಡ ಹೇರಬಾರದು. ರಶ್ಮಿಕಾ ಅವರು ಕೊಡವ ಸಮಾಜಕ್ಕೆ ಸೇರಿರುವ ಕಾರಣದಿಂದಲೇ ಹೀಗೆಲ್ಲ ನಡೆದುಕೊಳ್ಳುತ್ತಿದ್ದಾರೆ ಎಂಬ ಅರ್ಥ ಬರುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.