ತುಮಕೂರು: ಬಿ.ಎಸ್ ಯಡಿಯೂರಪ್ಪ (B.S Yediyurappa) ಅವರು ಸಿಐಡಿ (CID) ವಿಚಾರಣೆಗೆ ಹಾಜರಾಗಿಲ್ಲ. ಅಗತ್ಯವಿದ್ದರೆ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (G.Parameshwara )ಹೇಳಿದ್ದಾರೆ.
ತುಮಕೂರಿನಲ್ಲಿ (Tumakur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 17 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ವಿರುದ್ಧದ ಪ್ರಕರಣದ ವಿಚಾರವಾಗಿ ಪ್ರತಿಕ್ರಿಸಿದ್ದಾರೆ. ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ನೀಡಿದೆ. ಇಲ್ಲಿಯವರೆಗೂ ಅವರು ವಿಚಾರಣೆಗೆ ಹಾಜರಾಗಿಲ್ಲ. ಜೂ.15ರ ಒಳಗೆ ಚಾರ್ಜ್‍ಶೀಟ್ ಫೈಲ್ ಮಾಡಬೇಕು. ಇಷ್ಟರಲ್ಲೇ ಚಾರ್ಜ್‍ಶೀಟ್ ಫೈಲ್ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಪೋಕ್ಸೋ ಕೇಸ್ – ಯಡಿಯೂರಪ್ಪ ಬಂಧನಕ್ಕೆ ಸಿಐಡಿ ಸಿದ್ಧತೆ!
ಈಗ ಯಡಿಯೂರಪ್ಪ ಅವರ ಹೇಳಿಕೆ ದಾಖಲಿಸಬೇಕು. ಅದಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊಲೀಸರು ಅವರ ಕೆಲಸ ಮಾಡುತ್ತಿದ್ದಾರೆ. ಅಗತ್ಯವಿದ್ದರೆ ಅವರನ್ನು ಬಂಧಿಸಲಾಗುವುದು. ಸ್ವಾಭಾವಿಕವಾಗಿ ಅವರು ಜಾಮೀನು ಅರ್ಜಿ ಹಾಕಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ವಾಲ್ಮೀಕಿ ನಿಗಮದ ಹಗರಣದ ವಿಚಾರವಾಗಿ, ಪ್ರಕರಣದಲ್ಲಿ ಭಾಗಿಯಾದವರನ್ನು ಎಸ್‍ಐಟಿ ಅಧಿಕಾರಿಗಳು ಬಂದಿಸಿದ್ದಾರೆ. ಹೈದ್ರಾಬಾದ್‍ನಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.
ನಟ ದರ್ಶನ್‍ರನ್ನು ಬಂಧಿಸಲಾಗಿರುವ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ಬಳಿ, ಎಸಿಪಿ ಭರತ್ ರೆಡ್ಡಿ ಮಾಧ್ಯಮವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಮಾಹಿತಿ ಪಡೆದು, ಹಲ್ಲೆ ಆಗಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ನಟ ದರ್ಶನ್ ಮನೆ ಬಳಿ ಪೊಲೀಸ್ ಬಿಗಿ ಬಂದೋಬಸ್ತ್