ಬೆಂಗಳೂರು: ಬಿಜೆಪಿ ನಮ್ಮನ್ನು ಟೀಕೆ ಮಾಡುತ್ತಿತ್ತು. ಈಗ ಬಿಜೆಪಿಯೂ ಗ್ಯಾರಂಟಿ ಘೋಷಣೆ ಮಾಡುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ವಾಗ್ದಾಳಿ ನಡೆಸಿದ್ದಾರೆ.
ಪಂಚರಾಜ್ಯಗಳ ಎಕ್ಸಿಟ್ ಪೋಲ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಲ್ಕು ರಾಜ್ಯಗಳಲ್ಲಿ ನಾವು ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿ ಕೆಲಸ ಮಾಡಿದ್ದೇವೆ. ಸಾಮಾನ್ಯ ಜನರಿಗೆ ಬಿಜೆಪಿಯಿಂದ (BJP) ಯಾವುದೇ ನೆರವು ಸಿಕ್ಕಿಲ್ಲ. ಈ ರಾಜ್ಯಗಳ ಜನರ ಭರವಸೆ ನಮಗೆ ಮತ್ತೆ ಸಿಗುವ ನಿರೀಕ್ಷೆ ಇದೆ. ನಾವು ನಾಲ್ಕೂ ಕಡೆ ಗೆಲ್ಲುವ ಭರವಸೆ ಇದೆ. ಗ್ರಾಮೀಣ ಭಾಗದಲ್ಲಿ, ಸಾಮಾನ್ಯ ಜನರಿಗೆ ಅನುಕೂಲ ಆಗಲು ಗ್ಯಾರಂಟಿ ತಂದೆವು ಎಂದರು.
ರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿಯವರೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ (Congress) ಯಶಸ್ಸು ಸಿಕ್ಕ ನಂತರ ಈಗ ಪಂಚರಾಜ್ಯಗಳಲ್ಲೂ ಯಶಸ್ಸು ಸಿಕ್ಕಿದೆ. ಪಂಚರಾಜ್ಯಗಳಲ್ಲಿ ಈ ಹಿಂದೆ ನಮಗೆ ಜನರ ಒಲವು ಅಷ್ಟಾಗಿ ಇರಲಿಲ್ಲ. ಈಗ ಮತ್ತೆ ನಾವು ಜನರ ವಿಶ್ವಾಸ ಗಳಿಸಿದ್ದೇವೆ. ಇನ್ಮುಂದೆ ಲೋಕಸಭೆ ಚುನಾವಣೆಯಲ್ಲೂ ಗ್ಯಾರಂಟಿಗಳ ಘೋಷಣೆ ಹೆಚ್ಚಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ರಾಜಸ್ಥಾನಕ್ಕೆ ಕಿಂಗ್ ಮೇಕರ್ ಆಗ್ತಾರಾ ಡಿಕೆ ಶಿವಕುಮಾರ್?
ಕೇಂದ್ರದಿಂದ ಬರ ಪರಿಹಾರ ವಿಳಂಬಕ್ಕೆ ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರದಿಂದ ಇನ್ನೂ ಬರ ಪರಿಹಾರ ಬಂದಿಲ್ಲ. ಕೃಷ್ಣಬೈರೇಗೌಡ, ಚಲುವರಾಯ ಸ್ವಾಮಿ ಎರಡೆರಡು ಸಲ ದೆಹಲಿಗೆ ಹೋಗಿ ಬಂದರೂ ಅಪಾಯಿಂಟ್ಮೆಂಟ್ ಸಿಕ್ಕಿಲ್ಲ. ಮೊನ್ನೆ ಕೇಂದ್ರದ ಹಣಕಾಸು ಸಚಿವರ ಭೇಟಿ ಮಾಡಿ ಕೃಷ್ಣಬೈರೆಗೌಡ ಮತ್ತು ಚಲುವರಾಯ ಸ್ವಾಮಿ ಎಲ್ಲ ಹೇಳಿ ಬಂದಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ಯಾವುದೇ ಸಹಾಯ ಸಿಕ್ತಿಲ್ಲ. ಕಷ್ಟದ ಸಂದರ್ಭದಲ್ಲೂ ಮುಖ್ಯಮಂತ್ರಿಗಳು ರೈತರಿಗೆ ಎರಡು ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ಕಿಡಿಕಾರಿದರು.