ಹಾವೇರಿ: ಝಿರೋ ಟ್ರಾಫಿಕ್ ಬೇಡ ಹಾಗೂ ಜಿಲ್ಲೆಗೆ ಭೇಟಿ ನೀಡಿದಾಗೊಮ್ಮೆ ಗಾರ್ಡ್ ಆಫ್ ಆನರ್ ಬೇಡ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ತಮ್ಮ ಟ್ವಿಟ್ಟರ್, ಫೇಸ್‍ಬುಕ್ ಖಾತೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಸಚಿವರು, ‘ಝಿರೋ ಟ್ರಾಫಿಕ್‍ನಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಝಿರೋ ಟ್ರಾಫಿಕ್ ಬೇಡ. ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಿಗೆ ಶುಕ್ರವಾರ ಭೇಟಿ ನೀಡಿದ್ದಾಗ ಝಿರೋ ಟ್ರಾಫಿಕ್‍ನಿಂದ ಸಾರ್ವಜನಿಕರಿಗೆ ಉಂಟಾದ ಸಮಸ್ಯೆಯನ್ನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.
Advertisement
#ಪೋಲಿಸ್ ಇಲಾಖೆ ನೀಡಿದ #ಜೀರೋಟ್ರಾಫಿಕ್ ನಿಂದ ಸಾಮಾನ್ಯ ಜನರಿಗೆ ತುಂಬಾ ತೊಂದರೆಗಳಾಗಿದ್ದು ಕಂಡುಬಂದಿದ್ದು ಈ ಕುರಿತು ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳಗೆ ಮಾತನಾಡಿ ನಾನು ಹೋಗುವ ಮಾರ್ಗದಲ್ಲಿ ಇನ್ನುಮುಂದೆ #ZeroTraffic ನೀಡಬೇಡಿ ಹಾಗೂ ಪ್ರತಿಬಾರಿ ಭೇಟಿನೀಡಿದಾಗ ಇಲಾಖೆಯಿಂದ ನೀಡುವ ಗಾರ್ಡ್ ಆಫ್ ಹಾನರ್ ವನ್ನು ಬೇಡವೆಂದು ಸೂಚಿಸಿದ್ದೇನೆ.
— Basavaraj S Bommai (@BSBommai) August 30, 2019
Advertisement
ಝಿರೋ ಟ್ರಾಫಿಕ್ ಜೊತೆಗೆ ಜಿಲ್ಲೆಗೆ ಭೇಟಿ ನೀಡಿದಾಗ ಪ್ರತಿ ಬಾರಿಯೂ ಗಾರ್ಡ್ ಆಫ್ ಹಾನರ್ ಸಲ್ಲಿಸುವುದು ಬೇಡ. ಈ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
Advertisement
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಝಿರೋ ಟ್ರಾಫಿಕ್‍ನಿಂದಾಗಿ ಮಾಜಿ ಡಿಸಿಎಂ ಪರಮೇಶ್ವರ್ ಅವರು ವಿವಾದಕ್ಕೆ ಗುರಿಯಾಗಿದ್ದರು. ಈ ವಿಚಾರವಾಗಿ ಎಚ್ಚೆತ್ತುಕೊಂಡ ಬಿಜೆಪಿ ಹೈಕಮಾಂಡ್, ತಮ್ಮ ಉಪ ಮುಖ್ಯಮಂತ್ರಿಗಳಿಗೆ ಝಿರೋ ಟ್ರಾಫಿಕ್ ಸೌಲಭ್ಯ ಪಡೆಯದಂತೆ ಖಡಕ್ ಸೂಚನೆ ನೀಡಿದೆ.
Advertisement
ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ ಹಾಗೂ ಲಕ್ಷ್ಮಣ ಸವದಿ ಅವರು ಝಿರೋ ಟ್ರಾಫಿಕ್ ತೆಗೆದುಕೊಳ್ಳಬಾರದು. ಝಿರೋ ಟ್ರಾಫಿಕ್‍ನಿಂದ ಸಂಚಾರ ಅಸ್ತವ್ಯಸ್ತವಾಗಲಿದೆ. ಅಷ್ಟೇ ಅಲ್ಲದೆ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ. ಇದರಿಂದಾಗಿ ಜನರಿಗೆ ಕೆಟ್ಟ ಸಂದೇಶ ಹೋಗಿ ಪಕ್ಷಕ್ಕೆ ಮುಜುಗರ ಆಗಲಿದೆ ಎಂದು ಬಿಜೆಪಿ ಹೈಕಮಾಂಡ್ ಇತ್ತೀಚೆಗಷ್ಟೇ ಎಚ್ಚರಿಕೆ ನೀಡಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಡಿಸಿಎಂ ಸಿ.ಎನ್.ಅಶ್ವಥ್ ನಾರಾಯಣ ಅವರು, ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಝಿರೋ ಟ್ರಾಫಿಕ್ ವ್ಯವಸ್ಥೆಯ ಅನುಕೂಲವನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದರು.