– ಕೇರಳ, ಯುಪಿ ಮಾದರಿಯಲ್ಲಿ ಕಾನೂನು ಕ್ರಮ ಜಾರಿ
– ಶೀಘ್ರವೇ ಸುಗ್ರೀವಾಜ್ಞೆ ಸಾಧ್ಯತೆ
ಬೆಂಗಳೂರು: ಪೊಲೀಸರು, ಆರೋಗ್ಯ ಇಲಾಖೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಅದರಲ್ಲೂ ಕೇರಳ ಮತ್ತು ಉತ್ತರಪ್ರದೇಶ ರಾಜ್ಯಗಳ ಮಾದರಿಯಲ್ಲಿ ಕಾನೂನು ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಚಿಂತನೆ ಮಾಡಿದ್ದು, ಶೀಘ್ರವೇ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಯಿದೆ.
ಸರ್ಕಾರದ ತರಲಿರುವ ಹೊಸ ಕಾನೂನಿನಲ್ಲಿ ಏನೇನು ಇರಲಿದೆ?
* ಯುಪಿ ಹಾಗೂ ಕೇರಳ ರಾಜ್ಯಗಳ ಸುಗ್ರೀವಾಜ್ಞೆಯಲ್ಲಿನ ಉಪಯುಕ್ತ ಅಂಶಗಳು ರಾಜ್ಯದ ಕಾನೂನಿನಲ್ಲಿ ತರಲಾಗುತ್ತಿದೆ.
* ಸರ್ಕಾರದ ಸಿಬ್ಬಂದಿ ಕರ್ತವ್ಯಕ್ಕೆ ಧಕ್ಕೆ ಉಂಟು ಮಾಡಿದರೆ ಕನಿಷ್ಠ ಎರಡು ವರ್ಷ ಜೈಲು.
* ಆಶಾ ಕಾರ್ಯಕರ್ತೆಯರಿಗೆ, ಪೊಲೀಸರಿಗೆ, ವೈದ್ಯರ ಕಾರ್ಯಾಚರಣೆಗೆ ಅಡ್ಡಿಪಡಿಸಿದರೆ ಗುಂಡಾ ಕಾಯ್ದೆ ಪ್ರಯೋಗ.
* ಸೋಂಕು ಹರಡುವವರಿಗೆ ಹಾಗೂ ಪ್ರಚೋದನೆ ನೀಡುವವರ ವಿರುದ್ಧ ಗೂಂಡಾ ಕಾಯ್ದೆ ಬಳಕೆ.
* ತಪ್ಪಿತಸ್ಥರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ನಷ್ಟ ಭರಿಸಿಕೊಳ್ಳುವುದು.
* ಸೋಶಿಯಲ್ ಮಿಡಿಯಾದಲ್ಲಿ ಸುಳ್ಳು ಸುದ್ದಿ ಪ್ರಚಾರ ಮಾಡುವವರ ವಿರುದ್ಧ ಗೂಂಡಾ ಕಾಯ್ದೆ.
ಹೊಸ ಕಾನೂನಿನ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇರಳ, ಉತ್ತರಪ್ರದೇಶ ಮಾದರಿಯಲ್ಲಿ ಸುಗ್ರೀವಾಜ್ಞೆ ಅಂತಿಮವಾಗಿದೆ. ಕಾನೂನು ಇಲಾಖೆ ಜೊತೆ ಚರ್ಚೆ ಮಾಡಿ ಆದೇಶ ಹೊರಡಿಸುತ್ತೇವೆ. ಹೆಚ್ಚು ಸೆಕ್ಷೆನ್‍ಗಳನ್ನು ಹಾಕುವುದು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದನ್ನ ಸುಗ್ರೀವಾಜ್ಞೆಯಲ್ಲಿ ಸೇರಿಸುತ್ತೇವೆ ಎಂದು ತಿಳಿಸಿದರು.
ಪಾದರಾಯನಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈಗಾಗಲೇ ಪಾದರಾಯನಪುರ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ. ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚಿಸಿದ್ದೇನೆ. ವರದಿ ಬಂದ ಬಳಿಕ ಮತ್ತಷ್ಟು ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ರಂಜಾನ್ ಹಿನ್ನೆಯೆಯಲ್ಲಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಲಾಗಿದೆ. ವಕ್ಫ್ ಬೋರ್ಡ್ ಕೂಡ ನಿರ್ದೇಶನ ನೀಡಿದೆ. ಹೀಗಾಗಿ ವಕ್ಫ್ ಬೋರ್ಡ್ ನಿರ್ದೇಶನ ಪಾಲಿಸಬೇಕು. ಇದನ್ನ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.
ಕೊರೊನಾಗೆ ಬಲಿಯಾದ ಮಹಿಳೆಯ ಅಂತ್ಯಕ್ರಿಯೆಯಲ್ಲಿ ಶಾಸಕ ಜಮೀರ್ ಅಹ್ಮದ್ ಭಾಗವಹಿಸಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯೂ ಜಮೀರ್ ಮೇಲಿದೆ. ಈ ಕಾರ್ಯಕ್ರಮದಲ್ಲಿ ಗರಿಷ್ಠ 20 ಮಂದಿ ಭಾಗವಹಿಸಲು ಅನುಮತಿಯಿದೆ. ಹೀಗಾಗಿ ಶವಸಂಸ್ಕಾರದಲ್ಲಿ ಜಮೀರ್ ಪಾಲ್ಗೊಂಡಿದ್ದಾರೆ ಎಂದು ಉತ್ತರಿಸಿದರು.