ಸಿಎಎ ವಿರೋಧಿಸುವವರಿಗೆ ನಂಕಾನಾ ಸಾಹಿಬ್ ಮೇಲೆ ನಡೆದ ದಾಳಿಯೇ ಉತ್ತರ: ಅಮಿತ್ ಶಾ

Public TV
1 Min Read
amit shah

ನವದೆಹಲಿ: ಸಿಎಎ ವಿರೋಧಿಸುತ್ತಿರುವವರಿಗೆ ಪಾಕಿಸ್ತಾನದಲ್ಲಿನ ಗುರುದ್ವಾರದ ನಂಕಾನಾ ಸಾಹಿಬ್ ಮೇಲೆ ನಡೆದಿರುವ ದಾಳಿಯೇ ಉತ್ತರ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ದೆಹಲಿಯಲ್ಲಿ ನಡೆದ ಬಿಜೆಪಿ ಅಭಿಯಾನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ರಾಹುಲ್, ಸೋನಿಯಾ ಗಾಂಧಿ ಹಾಗೂ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸಿಎಎಯನ್ನು ವಿರೋಧಿಸುತ್ತಿದ್ದಾರೆ. ಅವರು ಪಾಕಿಸ್ತಾನದಲ್ಲಿನ ಗುರುದ್ವಾರದ ನಂಕಾನಾ ಸಾಹಿಬ್ ಮೇಲೆ ದಾಳಿ ನಡೆದಿದ್ದನ್ನು ಅರಿಯಬೇಕು. ಅಲ್ಲದೆ ಯಾರು ಸಿಎಎ ವಿರೋಧಿಸುತ್ತಿದ್ದಾರೋ ಅವರೆಲ್ಲರಿಗೂ ಇದು ಸೂಕ್ತ ಉತ್ತರ ಎಂದು ತಿಳಿಸಿದರು.

ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿಯವರು ಜನತೆಯನ್ನು ಪ್ರಚೋದಿಸುತ್ತಿದ್ದಾರೆ. ಅಲ್ಲದೆ ನಿಮ್ಮ ಪೌರತ್ವವನ್ನು ಕಳೆದುಕೊಳ್ಳುತ್ತೀರಿ ಎಂದು ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಿ, ಪ್ರಚೋದಿಸುತ್ತಿದ್ದಾರೆ. ಆದರೆ ಅಲ್ಪಸಂಖ್ಯಾತರು ಈ ಕುರಿತು ತಲೆ ಕೆಡಿಸಿಕೊಳ್ಳಬೇಕಿಲ್ಲ. ಅಲ್ಲದೆ ಸಿಎಎಯಿಂದ ಅಲ್ಪಸಂಖ್ಯಾತರು ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

1984ರ ಸಿಖ್ ವಿರೋಧಿ ಗಲಭೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಂಕಾನಾ ಸಾಹಿಬ್‍ನಲ್ಲಿ ಏನಾಯಿತು? ಸಿಖ್ಖರ ಮೇಲೆ ದಾಳಿ ನಡೆಸಿದ ರೀತಿ ನೋಡಿ. ಈ ರೀತಿಯಾದಾಗ ನಮ್ಮ ಸಿಖ್ ಸಹೋದರರು ಭಾರತವಿಲ್ಲದಿದ್ದರೆ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಸುಳ್ಳು ಭರವಸೆ ನೀಡುವುದರ ಮೂಲಕವೇ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. 5 ವರ್ಷ ಆಡಳಿತ ನಡೆಸಿದರೂ ಅವರು ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.

ದೇಶಾದ್ಯಂತ ಸಿಎಎ ವಿರೋಧಿ ಹೋರಾಟಗಳು ನಡೆಯುತ್ತಿವೆ. ಇದರ ಮಧ್ಯೆಯೇ ಪಾಕಿಸ್ತಾನದಲ್ಲಿನ ಗುರುದ್ವಾರದ ಸಿಖ್ಖರ ಪವಿತ್ರ ಕ್ಷೇತ್ರ ನಂಕಾನಾ ಸಾಹೀಬ್ ಮೇಲೆ ಮುಸ್ಲಿಂ ಗುಂಪೊಂದು ದಾಳಿ ನಡೆಸಿ, ಕಲ್ಲು ತೂರಾಟ ನಡೆಸಿದೆ. ಇದು ತೀವ್ರ ಸಂಚಲನ ಸೃಷ್ಟಿಸಿದೆ. ಈ ಕುರಿತು ಸಿಖ್ ಸಮುದಾಯದವರು ದೇಶದಲ್ಲಿನ ಪಾಕಿಸ್ತಾನದ ರಾಯಭಾರಿ ಕಚೇರಿ ಮುಂಭಾಗ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *