ಉಡುಪಿ: 11 ಯುವತಿಯರ ಜೊತೆ ಹೋಂ ಗಾರ್ಡ್ ಒಬ್ಬ ತೆಗೆದುಕೊಂಡಿರುವ ಸೆಲ್ಫೀ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸ್ ಇಲಾಖೆಯಲ್ಲಿದ್ದು, ಈ ರೀತಿಯ ಫೋಟೋ ತೆಗೆದುಕೊಂಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಟೀಕೆ ವ್ಯಕ್ತವಾಗಿದೆ. ಈತ ಉಡುಪಿಯ ಕಾನ್ ಸ್ಟೇಬಲ್ ಎಂಬ ಮಾಹಿತಿಯೂ ಅದರ ಜೊತೆಗಿದೆ. ಅದಕ್ಕೆ ಪೂರಕವಾಗಿ ಠಾಣೆಯೊಳಗೆ ಇತರ ಪೊಲೀಸರ ಜೊತೆಗೂ ಈತ ಸೆಲ್ಫೀ ತೆಗೆಸಿಕೊಂಡಿದ್ದಾನೆ.
ಈ ಬಗ್ಗೆ ವಿಚಾರಣೆ ನಡೆಸಿರುವ ಸ್ಥಳೀಯ ಪೊಲೀಸರು, ಈತ ಕಾರ್ಕಳ ತಾಲೂಕಿನ ಸುಜೀತ್ ಶೆಟ್ಟಿ ಎಂದು ಗುರುತಿಸಿದ್ದಾರೆ. ಈತ ಪೊಲೀಸ್ ಅಲ್ಲ. ಓರ್ವ ಹೋಂಗಾರ್ಡ್ ಹಾಗೂ ಈತ ಉಡುಪಿಯ ಶಿರ್ವ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿಯಿದೆ. ಈತನ ಈ ಫೊಟೋಗಳಿಂದ ಪೊಲೀಸ್ ಇಲಾಖೆಯ ಮಾನ ಹರಾಜಾಗಿದ್ದು, ಇವನನ್ನು ಕಾಪು ಠಾಣೆಗೆ ಕರೆಸಿಕೊಂಡು ಪೊಲೀಸರು ಇಂದು ತನಿಖೆಗೆ ಒಳಪಡಿಸುವ ಸಾಧ್ಯತೆಯೂ ಇದೆ ಎಂದು ಎಸ್.ಪಿ ಲಕ್ಷ್ಮಣ ನಿಂಬರ್ಗಿ ಮಾಹಿತಿ ನೀಡಿದ್ದಾರೆ.
ಆದರೆ ಈವರೆಗೆ ಯಾವ ಯುವತಿಯರಿಂದಲೂ ಈತನ ವಿರುದ್ಧ ದೂರು ಬಂದಿಲ್ಲ. ಅವರೆಲ್ಲರೂ ಯಾರು ಎಂಬುದರ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಫೋಟೋಗಳು ವೈರಲ್ ಆಗಿರುವುದು ಸತ್ಯವಾಗಿದೆ. ಸರತಿ ಸಾಲಲ್ಲಿ ಹುಡುಗಿಯರಿಗೆ ಕೈಕೊಟ್ಟಿದ್ದಾನಾ ಎಂಬ ಪ್ರಶ್ನೆಗಳಿಗೆ ಪೊಲೀಸರೇ ಉತ್ತರ ಕೊಡಬೇಕಾಗಿದೆ.