ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ 5 ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ.
ಮಂಗಳೂರು, ಉಳ್ಳಾಲ, ಮುಲ್ಕಿ, ಬಂಟ್ವಾಳ ಹಾಗೂ ಮೂಡಬಿದಿರೆ ತಾಲೂಕಿಗೆ ರಜೆ ಘೋಷಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಉಳಿದೆಡೆ ತಹಶೀಲ್ದಾರ್ ಗಳಿಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಅಧಿಕಾರ ನೀಡಿದ್ದಾರೆ.
ಮಳೆ ಪರಿಸ್ಥಿತಿ ನೋಡಿಕೊಂಡು ಆಯಾ ತಾಲೂಕು ತಹಶೀಲ್ದಾರ್ ಗಳು ರಜೆ ಘೋಷಿಸುವಂತೆ ಸೂಚನೆ ನೀಡಿದ್ದಾರೆ. ಸದ್ಯ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ದ.ಕ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಸೋಮವಾರ ಸಂಜೆ ವೇಳೆಗೆ ಸುಮಾರು ಎರಡು ಗಂಟೆಗಳ ಕಾಲ ಸುರಿದ ಭಾರೀ ಮಳೆ (Heavy Rain In Dakshina Kannada) ಜನ ಜೀವನವನ್ನೇ ಅಸ್ತವ್ಯಸ್ತವನ್ನಾಗಿಸಿತ್ತು. ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ನಗರದ ಹೆಬ್ಬಾಗಿಲು ಎಂದೆನಿಸಿಕೊಂಡಿರುವ ಪಂಪ್‍ವೆಲ್ ಸರ್ಕಲ್‍ನಲ್ಲಿ ಪಕ್ಕದ ಚರಂಡಿ ತುಂಬಿ ರಸ್ತೆ ಜಲಾವೃತವಾಗಿತ್ತು. ಸುಮಾರು ಅರ್ಧ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ನಿಂತಿದ್ದವು.
ಪಂಪ್‍ವೆಲ್ ಸರ್ಕಲ್‍ನಲ್ಲಿ (Pumpwell Circle) ರಾಷ್ಟ್ರೀಯ ಹೆದ್ದಾರಿಗೆ ಫ್ಲೈಓವರ್ ಆದಾಗಿನಿಂದ ಈ ಸಮಸ್ಯೆ ಇದೆ. ಫ್ಲೈಓವರ್‍ನ ಅಡಿ ಭಾಗದಲ್ಲಿ ನಗರಕ್ಕೆ ಹೋಗೋ ವಾಹನಗಳಿಗೆ ರಸ್ತೆಯಿದ್ದು ಅಲ್ಲೇ ಸಮೀಪದಲ್ಲಿ ಚರಂಡಿ ಇದೆ. ಈ ಚರಂಡಿಯ ಒಂದು ಭಾಗ ಎತ್ತರವಿದ್ದು ಇನ್ನೊಂದು ಭಾಗ ಕೆಳಗಿದೆ. ಹೀಗಾಗಿ ನೀರು ಹರಿದು ಹೋಗಬೇಕಿದ್ದ ಭಾಗದಲ್ಲಿ ಎತ್ತರ ಇರೋದ್ರಿಂದ ನೀರು ರಸ್ತೆಗೆ ನುಗ್ಗಿ ಬರುತ್ತದೆ. ಕಳೆದ ಐದಾರು ವರ್ಷದಿಂದ ಈ ಸಮಸ್ಯೆ ಇದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕೂತಿದ್ದಾರೆ. ಹೀಗಾಗಿ ಈ ಸಮಸ್ಯೆ ಪ್ರತೀ ವರ್ಷದ ಮೊದಲ ಮಳೆಗೆ ಇದ್ದೇ ಇರುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನ ಆಗಿಲ್ಲ.
Web Stories