– ಕಲಬುರಗಿ, ಬೀದರ್, ಯಾದಗಿರಿಯಲ್ಲೂ ಮಳೆ
ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ ಕಳೆದ ಎರಡು ದಿನಗಳಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಬೀದರ್ ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶದನ್ವಯ ಡಿಡಿಪಿಐ ಸಲೀಂ ಪಾಷಾ ಅವರು, ಸೋಮವಾರ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಸೋಮವಾರವೂ ಧಾರಾಕಾರ ಮಳೆ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಈಗಾಗಲೇ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ರಾಜ್ಯದಲ್ಲೂ ಹಲವೆಡೆ ಮಳೆಯ ಅವಾಂತರ:
ಆಂಧ್ರ-ತೆಲಂಗಾಣಗೆ ಹೊಂದಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲೂ ಭಾರೀ ಮಳೆಯಾಗ್ತಿದೆ. ಕಲಬುರಗಿ, ಯಾದಗಿರಿ, ಬೀದರ್ ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಅವಾಂತರಗಳಾಗಿವೆ. ಕಲಬುರಗಿಯ ಪಿಡಿಎ ಕಾಲೇಜ್ ಮುಂಭಾಗದ ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಕಾಗಿಣಾ ನದಿ ಉಕ್ಕೇರಿದ ಪರಿಣಾಮ ತಟದಲ್ಲಿನ ಉತ್ತರಾಧಿ ಮಠಕ್ಕೆ ನೀರು ನುಗ್ಗಿದೆ.
ಜಯತೀರ್ಥರ ಮೂಲ ಬೃಂದಾವನ ಜಲಾವೃತವಾಗಿದೆ. ನೀರು ತುಂಬಿದ ಮಠ ಅವರಣದಲ್ಲೇ ಅರ್ಚಕರು ಪೂಜೆ ಮಾಡಿದ್ದಾರೆ. ಯಾದಗಿರಿಯ ದೋರನಹಳ್ಳಿ, ವಂಕಸಂಬ್ರ ಜಲಾವೃತವಾಗಿದೆ. ಮನೆಗಳಿಗೆ ನೀರು ನುಗ್ಗಿ ಜನ ಪರದಾಡಿದ್ರು. ಬೀದರ್‌ನಲ್ಲಿ ಭಾರೀ ಮಳೆಗೆ ರಸ್ತೆಗಳು, ಸ್ಕೂಲ್ ಮೈದಾನಗಳು ಕೆರೆಯಂತಾಗಿವೆ. ಖಾಸಗಿ ಕಾಲೇಜೊಂದು ಮಳೆಯಲ್ಲೇ ಕ್ರೀಡಾಕೂಟ ಆಯೋಜಿಸಿ ಅಮಾನವೀಯತೆ ಮೆರೆದಿದೆ. ಮಳೆ-ಕೆಸರಿನಲ್ಲಿ ಬಿದ್ದು ಹಲವರು ಗಾಯಗೊಂಡಿದ್ದಾರೆ. ಇತ್ತ ಉಡುಪಿಯಲ್ಲಿ ಆಕಸ್ಮಿಕವಾಗಿ ಸಮುದ್ರದ ಪಾಲಾಗ್ತಿದ್ದ ಮೀನುಗಾರರೊಬ್ಬರನ್ನು ಸ್ಥಳೀಯರು ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ.