ರಾಮನಗರ: ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಪರ ಪ್ರತಿಭಟನೆ, ಜಿಲ್ಲೆಯಲ್ಲಿ ಬಂದ್ ವಾತಾವರಣ ಇರುವ ಹಿನ್ನೆಲೆ ಇಂದು ರಾಮನಗರದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ರಾಮನಗರ ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿರುವುದಾಗಿ ಆದೇಶ ಹೊರಡಿಸಿದ್ದಾರೆ. ಡಿಕೆಶಿ ಅವರ ಬಂಧನವನ್ನು ಖಂಡಿಸಿ ಅವರ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದು, ಹಲವೆಡೆ ಹಿಂಸಾಚಾರ ಕೂಡ ನಡೆದಿದೆ. ಈ ಹಿನ್ನೆಲೆ ಮುಜಾಗೃತ ಕ್ರಮವಾಗಿ ಈ ಘಟನೆಗಳಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂದು ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
Advertisement
Advertisement
ಕಳೆದ ರಾತ್ರಿಯಿಂದಲೂ ರಾಜ್ಯದ ಹಲವು ಜಲ್ಲೆಗಳಲ್ಲಿ ಡಿಕೆಶಿ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ, ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ಬಸ್ಸುಗಳಿಗೆ ಕಲ್ಲು ತೂರಿ ಹಾನಿ ಮಾಡಿದ್ದಾರೆ. ಜೊತೆಗೆ ಒಂದು ಕೆಎಸ್‍ಆರ್‌ಟಿಸಿ ಬಸ್ಸಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ.
Advertisement
ಈ ಹಿನ್ನೆಲೆ ಈಗಾಗಲೇ ಕನಕಪುರದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಅಲ್ಲದೆ ರಾಮನಗರದ ಹಲವು ಕಡೆ ಪ್ರತಿಭಟನಾಕಾರರು ಟಯರ್‍ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇದೆಲ್ಲಾ ಬಿಜೆಪಿಯ ಕುತಂತ್ರ, ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಇಡಿ ಸಂಸ್ಥೆಯನ್ನು ಬಳಸಿಕೊಂಡು ಕಾಂಗ್ರೆಸ್ಸಿನ ಪ್ರಬಲ ನಾಯಕನನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಎಂದು ಕೈ ನಾಯಕರು ಆರೋಪಿಸುತ್ತಿದ್ದಾರೆ.