ಧಾರವಾಡ: ರಸ್ತೆ ದಾಟುತ್ತಿದ್ದಾಗ ಕಾರ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ರಾಷ್ಟ್ರಮಟ್ಟದ ಹಾಕಿ ಆಟಗಾರ್ತಿ ಸುಜಾತಾ ಕೇರಾಳಿ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಧಾರವಾಡ ತಾಲೂಕಿನ ಮಾದನಭಾವಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಸುಜಾತಾ ಕೇರಾಳಿ ಅವರ ಜೊತೆಗೆ ಇದ್ದ ತಂದೆ ಮಲ್ಲಿಕಾರ್ಜುನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿದೆ.
ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಜಾತಾ ಕೇರಾಳಿ ಸ್ವಗ್ರಾಮ ಮಾದನಬಾವಿಗೆ ಬಂದಿದ್ದರು. ತಂದೆಯ ಜೊತೆಗೆ ಇಂದು ಸಂಬಂಧಿಕರೊಬ್ಬರ ಮದುವೆಗೆ ಹೋಗುತ್ತಿದ್ದಾಗ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಎಂಎಚ್ 44 ಎಎಲ್ 6977 ನಂಬರ್ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸುಜಾತಾ ಕೇರಾಳಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತಂದೆ ಮಲ್ಲಿಕಾರ್ಜುನ್ ಅವರಿಗೆ ಗಾಯವಾಗಿದೆ.
ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ಸ್ಥಳಕ್ಕೆ ಜನರು ಬಂದಿದ್ದಾರೆ. ಇದರಿಂದ ಗಾಬರಿಗೊಂಡ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಆಬುಲೆನ್ಸ್ ಗೆ ಕರೆ ಮಾಡಿ, ಮಲ್ಲಿಕಾರ್ಜುನ್ ಅವರನ್ನು ಹುಬ್ಬಳ್ಳಿಯ ಕಿಮ್ಸ್ಗೆ ರವಾನಿಸಿದ್ದಾರೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.