ನವದೆಹಲಿ: ವಿಮಾನಯಾನ (Flights) ಸಂಸ್ಥೆಗಳಿಗೆ ನಕಲಿ ಬಾಂಬ್ ಬೆದರಿಕೆ ಕರೆಗಳು (Bomb Threats) ಹೆಚ್ಚುತ್ತಿರುವ ಹಿನ್ನಲೆ ವಿಮಾನ ಭದ್ರತಾ ನಿಯಮಗಳಲ್ಲಿ ತಿದ್ದುಪಡಿ ಮಾಡಿ, ಕಠಿಣ ಕಾನೂನು ತರಲು ಯೋಚಿಸುತ್ತಿದ್ದೇವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು (Rammohan Naidu) ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಈ ವಿಷಯದ ಕುರಿತು ಹಲವಾರು ಸಭೆಗಳನ್ನು ನಡೆಸಿದ್ದೇವೆ ಮತ್ತು ನಿಯಮಗಳು, ನಿಬಂಧನೆಗಳಿಗೆ ತಿದ್ದುಪಡಿಗಳು ಅಗತ್ಯವೆಂದು ತೀರ್ಮಾನಿಸಿದ್ದೇವೆ. ನಾಗರಿಕ ಸುರಕ್ಷತೆಯ ಬಗ್ಗೆ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹದ ವಿಮಾನಯಾನ ಕಾಯ್ದೆ ತರಲಿದ್ದೇವೆ. ಹುಸಿ ಬಾಂಬ್ ಕರೆ ಮಾಡುವವರ ವಿರುದ್ದ ನೊ ಪ್ಲೈ, ದಂಡ ಮತ್ತು ಜೈಲು ಶಿಕ್ಷೆಯಂತಹ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಪಪಡಿಸಿದರು.
ಕಳೆದ ಕೆಲವು ದಿನಗಳಲ್ಲಿ 75ಕ್ಕೂ ಹೆಚ್ಚು ವಿಮಾನಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಬೆದರಿಕೆ ಸಂದೇಶಗಳನ್ನು ಸ್ವೀಕರಿಸಿವೆ. ಶನಿವಾರವಷ್ಟೇ 30ಕ್ಕೂ ಹೆಚ್ಚು ವಿಮಾನಗಳಿಗೆ ಇಂತಹ ಸಂದೇಶಗಳು ಬಂದಿವೆ. ಏರ್ ಇಂಡಿಯಾ, ಇಂಡಿಗೋ, ಆಕಾಶ್ ಏರ್, ವಿಸ್ತಾರಾ, ಸ್ಪೈಸ್ ಜೆಟ್, ಸ್ಟಾರ್ ಏರ್ ಮತ್ತು ಅಲಯನ್ಸ್ ವಿಮಾನಗಳಿಗೆ ಬೆದರಿಕೆ ಕರೆಗಳು ಬಂದಿವೆ ಎಂದು ತಿಳಿಸಿದರು.
ಈ ನಕಲಿ ಬೆದರಿಕೆಗಳಲ್ಲಿ ʻಬಾಂಬ್‌ಗಳುʼ, ʻರಕ್ತವು ಎಲ್ಲೆಡೆ ಹರಡುತ್ತದೆʼ, ʻಸ್ಫೋಟಕ ಸಾಧನಗಳುʼ, ʻಇದು ತಮಾಷೆಯಲ್ಲ, ನೀವೆಲ್ಲರೂ ಸಾಯುತ್ತೀರಿʼ ಮತ್ತು ʻಬಾಂಬ್ ರಖ್ವಾ ದಿಯಾʼ ಎಂಬಂತಹ ಕೆಲವು ಸಂದೇಶಗಳ ಸಾಲುಗಳು ಮತ್ತು ಪದಗಳನ್ನು ಪೊಲೀಸರು ಕಂಡುಕೊಂಡಿದ್ದಾರೆ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದ 17 ವರ್ಷದ ಬಾಲಕನನ್ನು ಈ ಹಿಂದೆ ಬಂಧಿಸಲಾಗಿತ್ತು. ಕೆಲವು ಕರೆಗಳಿಗೆ ಆತನೇ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ. ಆದಾಗ್ಯೂ, ಹೆಚ್ಚಿನ ಬೆದರಿಕೆಗಳ ಮೂಲವನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ. ಈ ಬಗ್ಗೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಶನಿವಾರ ನವದೆಹಲಿಯಲ್ಲಿ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದೆ ಎಂದು ತಿಳಿಸಿದರು.