ಇಸ್ರೋ ರಾಕೆಟ್‌ನಲ್ಲಿ ಚೀನಾ ಧ್ವಜ – ಭಾರತದ ಸಾಧನೆ ಒಪ್ಪಿಕೊಳ್ಳಲು ಡಿಎಂಕೆಗೆ ಆಗಲ್ಲ ಎಂದ ಮೋದಿ

Public TV
2 Min Read
Modi Stalin China Flag ISRO DMK

ಚೆನ್ನೈ: ತಮಿಳುನಾಡಿನಲ್ಲಿರುವ ಆಡಳಿತರೂಢ ಡಿಎಂಕೆ ಇಸ್ರೋ (ISRO) ರಾಕೆಟ್‌ನಲ್ಲಿ ಚೀನಾ ಧ್ವಜವನ್ನು (China Flag) ಮುದ್ರಿಸಿ ದೊಡ್ಡ ಯಡವಟ್ಟು ಮಾಡಿಕೊಂಡಿದೆ.

ಇಂದು ತಮಿಳುನಾಡಿನ (Tamil Nadu) ತೂತುಕುಡಿ ಜಿಲ್ಲೆಯ ಕುಲಶೇಖರಪಟ್ಟಣಂನಲ್ಲಿ ಇಸ್ರೋದ ಎರಡನೇ ಉಡಾವಣಾ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶಂಕುಸ್ಥಾಪನೆ ನೆರವೇರಿಸಿದರು.

ಈ ಕಾರ್ಯಕ್ರಮ ಸಂಬಂಧ ತಮಿಳುನಾಡು ಮಂತ್ರಿ ಅನಿತಾ ರಾಧಾಕೃಷ್ಣ ಮುದ್ರಣ ಮಾಧ್ಯಮಗಳಿಗೆ ಜಾಹೀರಾತು (Advertisement) ನೀಡಿದ್ದರು. ಈ ಜಾಹೀರಾತಿನಲ್ಲಿ ಮೋದಿ, ಸಿಎಂ ಸ್ಟಾಲಿನ್‌, ಕನಿಮೋಳಿ ಮತ್ತು ಉದಯನಿಧಿ ಮಾರನ್‌ ಫೋಟೋದ ಜೊತೆ ರಾಕೆಟ್‌ ಫೋಟೋವನ್ನು ಮುದ್ರಿಸಲಾಗಿತ್ತು. ಅಷ್ಟೇ ಅಲ್ಲದೇ ಇಸ್ರೋ ರಾಕೆಟ್‌ನ ತುದಿಯಲ್ಲಿ ಚೀನಾದ ಧ್ವಜವನ್ನು ಮುದ್ರಿಸಿದ್ದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.  ಇದನ್ನೂ ಓದಿ: ಮ್ಯಾಟ್ರಿಮೋನಿ ವರನನ್ನು ಅರಸಿ ಬಂದ ಪೋಷಕರಿಗೆ ಪಂಗನಾಮ – 250ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದ ಆರೋಪಿ ಅಂದರ್‌

ತಿರುನಲ್ವೇಲಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಮೋದಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ (India) ಪ್ರಗತಿಯನ್ನು ಒಪ್ಪಿಕೊಳ್ಳಲು ಡಿಎಂಕೆಗೆ (DMK) ಆಗುತ್ತಿಲ್ಲ. ಜನರು ಪಾವತಿಸುವ ತೆರಿಗೆಯಿಂದ ಅವರು ಜಾಹೀರಾತುಗಳನ್ನು ನೀಡುತ್ತಾರೆ. ಆದರೆ ಅದರಲ್ಲಿ ಭಾರತದ ಬಾಹ್ಯಾಕಾಶದ ಚಿತ್ರವನ್ನು ಸೇರಿಸುವುದಿಲ್ಲ. ಭಾರತದ ಬಾಹ್ಯಾಕಾಶ ಯಶಸ್ಸನ್ನು ಪ್ರಪಂಚದ ಮುಂದೆ ತೋರಿಸಲು ಅವರು ಬಯಸುವುದಿಲ್ಲ. ಜಾಹೀರಾತಿನಲ್ಲಿ ಚೀನಾ ಧ್ವಜವನ್ನು ಹಾಕುವ ಮೂಲಕ ನಮ್ಮ ವಿಜ್ಞಾನಿಗಳನ್ನು, ನಮ್ಮ ಬಾಹ್ಯಾಕಾಶ ಕ್ಷೇತ್ರವನ್ನು ಮತ್ತು ಜನರ ತೆರಿಗೆ ಹಣವನ್ನು ಅವಮಾನಿಸಲಾಗಿದೆ. ಈ ಕೆಲಸಕ್ಕೆ ಡಿಎಂಕೆಗೆ ಶಿಕ್ಷೆ ನೀಡುವ ಸಮಯ ಈಗ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ಜನರಿಗಾಗಿ ಕೆಲಸ ಮಾಡದ ಡಿಎಂಕೆ ಈಗ ಅದರ ಕ್ರೆಡಿಟ್‌ ಪಡೆಯಲು ಮುಂದಾಗಿದೆ. ಇಲ್ಲಿಯವರೆಗೆ ನಮ್ಮ ಯೋಜನೆಗಳಿಗೆ ಅವರು ಸ್ಟಿಕ್ಟರ್‌ ಅಂಟಿಸುತ್ತಿದ್ದರು. ಈಗ ಆ ಮಿತಿಯನ್ನು ದಾಟಿದ್ದು ಇಸ್ರೋ ಉಡಾವಣಾ ಕೇಂದ್ರದ ಶ್ರೇಯಸ್ಸು ಪಡೆಯಲು ಚೀನಾದ ಸ್ಟಿಕ್ಕರ್‌ ಅಂಟಿಸಲಾಗಿದೆ ಎಂದು ಕುಟುಕಿದರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಮುನ್ನ I.N.D.I.A ಒಕ್ಕೂಟದಲ್ಲಿ ಒಡಕು – ಚೂರನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್‌?

ಚೀನಾದ ಧ್ವಜ ಇರುವ ಜಾಹೀರಾತಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಸಂಸದೆ ಕನಿಮೋಳಿ, ವಿನ್ಯಾಸ ಮಾಡಿದ ವ್ಯಕ್ತಿಗೆ ಈ ಚಿತ್ರ ಎಲ್ಲಿಂದ ಸಿಕ್ಕಿದೆ ಅಂತ ಗೊತ್ತಿಲ್ಲ. ಭಾರತ ಇಲ್ಲಿಯವರೆಗೆ ಚೀನಾ ತನ್ನ ಶತ್ರು ದೇಶ ಎಂದೂ ಎಲ್ಲೂ ಘೋಷಣೆ ಮಾಡಿಲ್ಲ. ಪ್ರಧಾನಿಯವರು ಚೀನಾದ ಪ್ರಧಾನಿಯನ್ನು ಆಹ್ವಾನಿಸಿ ಮಹಾಬಲಿಪುರಂಗೆ ಹೋಗಿರುವುದನ್ನು ನಾನು ನೋಡಿದ್ದೇನೆ. ಸತ್ಯವನ್ನು ಒಪ್ಪಿಕೊಳ್ಳಲು ಬಯಸುವುದಿಲ್ಲ ಎಂಬ ಕಾರಣಕ್ಕೆ ಸಮಸ್ಯೆಯನ್ನು ಬೇರೆಡೆಗೆ ತಿರುಗಿಸಲು ಕಾರಣಗಳನ್ನು ಹುಡುಕುತ್ತಿದ್ದೀರಿ ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.

 

Share This Article