ಈಗಿನ ಮಕ್ಕಳು ಹಾಗೂ ವಿದ್ಯಾರ್ಥಿಗಳ ಪೈಕಿ ಅನೇಕರು ಮಾದಕ ವ್ಯಸನದ ದಾಸರಾಗುತ್ತಿದ್ದಾರೆ. ಈ ಕುರಿತು ಪ್ರತಿನಿತ್ಯ ಮಾಧ್ಯಮಗಳು, ಪತ್ರಿಕೆಗಳು ವರದಿ ಮಾಡುತ್ತಲೇ ಇರುತ್ತವೆ. ಆದರೂ ಕ್ಯಾರೇ ಎನ್ನದೇ ವಿದ್ಯಾರ್ಥಿಗಳು ತಮ್ಮ ಪಾಡಿಗೆ ತಾವು ಮಾದಕ ವಸ್ತುಗಳ ಮೊರೆಹೋಗುತ್ತಿದ್ದಾರೆ. ಅದರಲ್ಲೂ ಶ್ರೀಮಂತರ ಮಕ್ಕಳು ದುಡ್ಡಿದೆ ಎಂದು ಸ್ಟೈಲ್ ಮಾಡಲು ಹೋಗಿ ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇತ್ತೀಚಿಗೆ ತ್ರಿಪುರಾ ಜರ್ನಲಿಸ್ಟ್ ಯೂನಿಯನ್, ವೆಬ್ ಮೀಡಿಯಾ ಫೋರಮ್ ಮತ್ತು ಟಿಎಸ್‌ಎಸಿಎಸ್ (TSACS) ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರದಲ್ಲಿ ಆತಂಕಕಾರಿ ವಿಷಯವೊಂದು ಹೊರಬಿದ್ದಿದೆ. ತ್ರಿಪುರಾದಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ HIV ವೈರಸ್ ಪತ್ತೆಯಾಗಿದ್ದು, 47 ಮಂದಿ ವಿದ್ಯಾರ್ಥಿಗಳು ಏಡ್ಸ್‌ಗೆ ಬಲಿಯಾಗಿದ್ದಾರೆ ಎಂದು ತ್ರಿಪುರಾ (Tripura) ರಾಜ್ಯದ ಏಡ್ಸ್ ನಿಯಂತ್ರಣ ಸೊಸೈಟಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಕಾರಣವೇನು? ವಿದ್ಯಾರ್ಥಿಗಳಲ್ಲಿ HIV ಸೋಂಕು ಹೇಗೆ ಬಂತು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
HIV ಎಂದರೇನು?
HIV (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಒಂದು ರೀತಿಯ ವೈರಸ್ ಆಗಿದೆ. ಅದು ದೇಹವನ್ನು ಪ್ರವೇಶಿಸಿದಾಗ ಅದನ್ನು HIV ಸೋಂಕು ಎಂದು ಕರೆಯಲಾಗುತ್ತದೆ. ಸಮಯಕ್ಕೆ ಸರಿಯಾಗಿ ರೋಗನಿರ್ಣಯ ಮಾಡದಿದ್ದರೆ ಅಥವಾ ಚಿಕಿತ್ಸೆಯನ್ನು ಪ್ರಾರಂಭಿಸದಿದ್ದರೆ, ರೋಗವು ಕ್ರಮೇಣ ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ಸೋಂಕಿನ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವು ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದಾಗಿ ಏಡ್ಸ್ ರೋಗ ಉಂಟಾಗುತ್ತದೆ.
Advertisement
Advertisement
ತ್ರಿಪುರಾದ ವಿದ್ಯಾರ್ಥಿಗಳಲ್ಲಿ HIV ಕಂಡುಬಂದಿದ್ದು ಹೇಗೆ?
ತ್ರಿಪುರಾ ರಾಜ್ಯದ 220 ಶಾಲೆಗಳು ಹಾಗೂ 24 ಕಾಲೇಜು ಮತ್ತು ವಿವಿಗಳಲ್ಲಿ ವಿದ್ಯಾರ್ಥಿಗಳು ಇಂಜೆಕ್ಷನ್ ಮೂಲಕ ಮಾದಕ ವಸ್ತುಗಳನ್ನು ತೆಗೆದುಕೊಳ್ಳುವುದು ಪತ್ತೆಯಾಗಿದೆ ಎಂದಿರುವ ತ್ರಿಪುರಾ ಏಡ್ಸ್ ನಿಯಂತ್ರಣ ಸೊಸೈಟಿ, HIV ಸೋಂಕು ಹರಡಲು ಇದೂ ಕಾರಣ ಆಗಿರಬಹುದು ಎಂದು ಊಹಿಸಿದೆ.
Advertisement
ಈ ಸಂಬಂಧ ತ್ರಿಪುರಾ ರಾಜ್ಯಾದ್ಯಂತ ಸುಮಾರು 164 ಆರೋಗ್ಯ ಸಂಸ್ಥೆಗಳಿಂದ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದು, ಸಮಗ್ರ ತನಿಖೆ ಬಳಿಕ ಹೆಚ್ಚಿನ ಮಾಹಿತಿ ಹೊರ ಬೀಳಲಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಪ್ರತಿದಿನ ಐದರಿಂದ ಏಳು ಹೊಸ HIV ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಟಿಎಸ್‌ಎಸಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಮೇ 2024ರ ವೇಳೆಗೆ ತ್ರಿಪುರಾದ ART (ಆಂಟಿರೆಟ್ರೋವೈರಲ್ ಥೆರಪಿ) ಕೇಂದ್ರ ಒಟ್ಟು 8,729 HIV ಸೋಂಕಿತ ವ್ಯಕ್ತಿಗಳನ್ನು ನೋಂದಾಯಿಸಿವೆ. ಅದರಲ್ಲಿ 4,570 ಪುರುಷರು, 1,103 ಮಹಿಳೆಯರು ಮತ್ತು ಒಬ್ಬರು ಮಂಗಳಮುಖಿ ಒಳಗೊಂಡಿದ್ದಾರೆ. HIV ಸೋಂಕಿತರ ಪೈಕಿ 5,674 ಜನರು ಜೀವಂತವಾಗಿದ್ದಾರೆ ಎಂದು TSACS ಅಧಿಕಾರಿ ಬಹಿರಂಗಪಡಿಸಿದ್ದಾರೆ.
ಎಲ್ಲರೂ ಶ್ರೀಮಂತರ ಮನೆ ಮಕ್ಕಳು:
ಏಡ್ಸ್ ಸೋಂಕಿಗೆ ತುತ್ತಾಗಿರುವ ವಿದ್ಯಾರ್ಥಿಗಳ ಪೈಕಿ ಬಹುತೇಕರು ಶ್ರೀಮಂತರ ಮನೆ ಮಕ್ಕಳು. ಈ ವಿದ್ಯಾರ್ಥಿಗಳ ಪೋಷಕರು ಸ್ಥಿತಿವಂತರು. ಸಾಕಷ್ಟು ಮನೆಗಳಲ್ಲಿ ತಂದೆ – ತಾಯಿ ಇಬ್ಬರಿಗೂ ಸರ್ಕಾರಿ ನೌಕರಿ ಇದೆ. ಪೋಷಕರು ತಮ್ಮ ಮಕ್ಕಳಿಗೆ ಸಾಕಷ್ಟು ಹಣ ನೀಡುತ್ತಾರೆ. ಮಕ್ಕಳ ಎಲ್ಲ ಬೇಕು, ಬೇಡಗಳನ್ನೂ ಈಡೇರಿಸುತ್ತಾರೆ. ಹೀಗಾಗಿ, ಮಕ್ಕಳ ಕೈನಲ್ಲಿ ಸಾಕಷ್ಟು ಹಣ ಓಡಾಡುವ ಕಾರಣ ಅವರು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ.
ಈ ವಿದ್ಯಾರ್ಥಿಗಳು ಮಾದಕ ವಸ್ತುಗಳನ್ನ ತಮ್ಮ ರಕ್ತನಾಳಗಳಿಗೆ ಚುಚ್ಚುಮದ್ದಿನ ಮೂಲಕ ತೆಗೆದುಕೊಳ್ಳುತ್ತಾರೆ. ಒಬ್ಬರು ಬಳಸುವ ಇಂಜೆಕ್ಷನ್ ನೀಡಲ್ ಅನ್ನೇ ಬಹುತೇಕರು ಬಳಕೆ ಮಾಡುತ್ತಿದ್ದ ಕಾರಣ ಸುಲಭವಾಗಿ ಎಚ್‌ಐವಿ ಏಡ್ಸ್ ರೋಗಾಣು ಹರಡಿದೆ ಎಂದು ವೈದ್ಯರು ವಿವರಿಸಿದ್ದಾರೆ.
ಉನ್ನತ ಹುದ್ದೆ ಹೊಂದಿರುವ ಶ್ರೀಮಂತ ಪೋಷಕರು ತಮ್ಮ ಮಕ್ಕಳ ಬೇಡಿಕೆಯನ್ನು ಪೂರೈಸುವ ಸಲುವಾಗಿ ಅವರ ಕೈಗೆ ಹೆಚ್ಚೆಚ್ಚು ಹಣ ನೀಡುತ್ತಾರೆ. ಆದರೆ ಮಕ್ಕಳು ಅದನ್ನು ಒಳ್ಳೆಯ ವಿಷಯಕ್ಕೆ ಬಳಸಿಕೊಳ್ಳದೇ ಈ ರೀತಿಯ ಚಟಗಳನ್ನು ಕಲಿತು ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ. ಪೋಷಕರು ತಮ್ಮ ಮಕ್ಕಳು ಕೆಟ್ಟ ಚಟಗಳ ದಾಸರಾಗಿದ್ದಾರೆ ಎಂದು ತಿಳಿದುಕೊಳ್ಳುವ ಹೊತ್ತಿಗಾಗಲೇ ಕಾಲ ಮೀರಿರುತ್ತದೆ. ಇದರಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿಯೂ ಬರಬಹುದು.
HIV ಹರಡುವುದು ಹೇಗೆ?
ಲೈಂಗಿಕ ಸಂಪರ್ಕ, ರಕ್ತ ವರ್ಗಾವಣೆ,ಸೂಜಿಗಳು ಅಥವಾ ಸಿರಿಂಜಿಗಳನ್ನು ಹಂಚಿಕೊಳ್ಳುವುದು, ಗರ್ಭಾವಸ್ಥೆಯಲ್ಲಿ, ಹೆರಿಗೆಯ ಸಮಯದಲ್ಲಿ ಅಥವಾ ಹಾಲುಣಿಸುವ ಸಮಯದಲ್ಲಿ ತಾಯಿಯಿಂದ ಮಗುವಿಗೆ HIV ಹರಡುವ ಸಾಧ್ಯತೆಗಳು ಹೆಚ್ಚು.
ರೋಗಲಕ್ಷಣಗಳೇನು?
ಚಳಿ, ಗಂಟಲು ಕೆರತ, ಹುಣ್ಣುಗಳು, ದೇಹದ ನೋವು, ಸ್ನಾಯು ನೋವು, ಸುಸ್ತು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಈ ರೋಗಲಕ್ಷಣಗಳು ಒಂದೂವರೆ ತಿಂಗಳವರೆಗೆ ಇರುತ್ತದೆ. ಏಡ್ಸ್ ಸಂಭವಿಸಿದಾಗ, ಎಲ್ಲಾ ರೀತಿಯ ಸೋಂಕುಗಳು ರೋಗಿಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತವೆ ಮತ್ತು ಈ ಹಂತದಲ್ಲಿ ಅಸಂಖ್ಯಾತ ರೋಗಲಕ್ಷಣಗಳನ್ನು ಕಾಣಬಹುದು.
ಏಡ್ಸ್ HIV ಸೋಂಕಿನ ಅಂತಿಮ ಮತ್ತು ಅತ್ಯಂತ ಗಂಭೀರ ಹಂತವಾಗಿದೆ. ಏಡ್ಸ್ ಹೊಂದಿರುವ ಜನರು ಕೆಲವು ಬಿಳಿ ರಕ್ತ ಕಣಗಳ ಕಡಿಮೆ ಎಣಿಕೆಗಳನ್ನು ಹೊಂದಿರುತ್ತಾರೆ ಮತ್ತು ತೀವ್ರವಾಗಿ ಹಾನಿಗೊಳಗಾದ ಪ್ರತಿರಕ್ಷಣಾ ವ್ಯವಸ್ಥೆಗಳನ್ನು ಹೊಂದಿರುತ್ತಾರೆ.
ಏಡ್ಸ್ ತೂಕ ನಷ್ಟ, ತೀವ್ರ ಸುಸ್ತು, ಬಾಯಿ ಅಥವಾ ಜನನಾಂಗದ ಹುಣ್ಣುಗಳು, ಜ್ವರ, ರಾತ್ರಿ ಬೆವರುವಿಕೆ ಮತ್ತು ಚರ್ಮದ ಬಣ್ಣದಲ್ಲಿ ವ್ಯತ್ಯಾಸ ಆಗಲು ಕಾರಣವಾಗಬಹುದು.
ಚುಂಬನ ಮತ್ತು ತಬ್ಬಿಕೊಳ್ಳುವುದರಿಂದ HIV ಬರುತ್ತಾ?
ಪರಸ್ಪರ ಚುಂಬಿಸುವುದು ಮತ್ತು ತಬ್ಬಿಕೊಳ್ಳುವುದರಿಂದ HIV ಬರುವುದಿಲ್ಲ. ಆದರೆ ನಿಮ್ಮ ಬಾಯಲ್ಲಿ ಹುಣ್ಣು ಅಥವಾ ಒಸಡುಗಳಲ್ಲಿ ರಕ್ತಸ್ರಾವ ಆಗಿದ್ದು, ನೀವು ಬಾಯಿಗೆ ಬಾಯಿ ಕೊಟ್ಟು ಚುಂಬಿಸುವುದರಿಂದ HIV ಸೋಂಕು ಉಂಟಾಗುವ ಸಾಧ್ಯತೆಗಳಿವೆ.
ಇನ್ನು HIV/AIDS ಹೊಂದಿರುವ ವ್ಯಕ್ತಿಯನ್ನು ಸ್ಪರ್ಶಿಸುವುದು ಅಥವಾ ತಬ್ಬಿಕೊಳ್ಳುವುದು, ಸಾರ್ವಜನಿಕ ಸ್ನಾನಗೃಹಗಳು ಅಥವಾ ಈಜುಕೊಳಗಳನ್ನು ಬಳಸುವುದು, HIV/AIDS ಹೊಂದಿರುವ ಯಾರೊಂದಿಗಾದರೂ ಕಪ್, ಪಾತ್ರೆಗಳನ್ನು ಹಂಚಿಕೊಳ್ಳುವುದರಿಂದರಿಂದಲೂ ಯಾವುದೇ ರೀತಿಯ ಸೋಂಕು ತಗುಲುವುದಿಲ್ಲ.
ಚಿಕಿತ್ಸೆ ಏನು?
ಡಾ.ಉಮಂಗ್ ಅಗರ್ವಾಲ್ ಪ್ರಕಾರ, ಏಡ್ಸ್‌ಗೆ ಯಾವುದೇ ಚಿಕಿತ್ಸೆ ಇಲ್ಲ ಎಂಬುದು ಸುಳ್ಳು. ವಾಸ್ತವವಾಗಿ, ನಿರಂತರವಾಗಿ ಎಚ್ಐವಿ ಚಿಕಿತ್ಸೆಯನ್ನು ತೆಗೆದುಕೊಳ್ಳುವುದರಿಂದ, ಈ ವೈರಸ್ ಅನ್ನು ನಿಯಂತ್ರಣದಲ್ಲಿ ಇರಿಸಬಹುದು. ಅದರ ಚಿಕಿತ್ಸೆಯನ್ನು ಮುಂದುವರಿಸುವ ಮೂಲಕ, ಏಡ್ಸ್ ಅನ್ನು ತಪ್ಪಿಸಬಹುದು.
HIV ಯ ಚಿಕಿತ್ಸೆಯನ್ನು ಆಂಟಿರೆಟ್ರೋವೈರಲ್ ಥೆರಪಿ (ART) ಎಂದು ಕರೆಯಲಾಗುತ್ತದೆ. HIV ಹೊಂದಿರುವ ಪ್ರತಿಯೊಬ್ಬರಿಗೂ ART ಅನ್ನು ಶಿಫಾರಸು ಮಾಡುತ್ತಾರೆ. HIV ಇರುವವರು ಆದಷ್ಟು ಬೇಗ ಔಷಧಿಗಳನ್ನು ತೆಗೆದುಕೊಳ್ಳಬೇಕು. ಆಂಟಿರೆಟ್ರೋವೈರಲ್ ಥೆರಪಿ HIV ಅನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ HIV ಯೊಂದಿಗಿನ ಜನರು ದೀರ್ಘ, ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಅಲ್ಲದೇ HIV ಪ್ರಸರಣದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
ಚಿಕಿತ್ಸೆಯನ್ನು ಮಧ್ಯದಲ್ಲಿ ಬಿಡುವುದರಿಂದ ಏಡ್ಸ್ ಮರುಕಳಿಸುವಿಕೆಗೆ ಕಾರಣವಾಗಬಹುದು. ಎಚ್ಐವಿ ಚಿಕಿತ್ಸೆಯನ್ನು ಸಮಯಕ್ಕೆ ಪ್ರಾರಂಭಿಸಿದರೆ, ಇತ್ತೀಚಿನ ದಿನಗಳಲ್ಲಿ ಹಲವಾರು ಔಷಧಿಗಳಿವೆ. ಇದು ರೋಗಿಯನ್ನು ಏಡ್ಸ್‌ಗೆ ಬಲಿಯಾಗದಂತೆ ತಡೆಯುತ್ತದೆ.