– ಮೈಕ್ರೋ ಕ್ಯಾಮ್ ಬಳಸಿ ಎಟಿಎಂನ ಮಾಹಿತಿ ಕದಿಯುತ್ತಿದ್ದ ವಿದೇಶಿ ಕಳ್ಳ
ಹಾಸನ: ವಿದೇಶದಿಂದ ಭಾರತಕ್ಕೆ ಬರುವ ವಿದ್ಯಾರ್ಥಿಗಳು ಮೋಜಿನ ಜೀವನಕ್ಕೆ ಹೇಗೆ ಹೈಟೆಕ್ ಕಳ್ಳತನ ಮಾಡುವ ಕೃತ್ಯಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ ಈ ಪ್ರಕರಣ ಉದಾಹರಣೆಯಾಗಿ ನಮ್ಮ ಮುಂದಿದೆ. ಹೌದು ಹಾಸನ ಜಿಲ್ಲೆಯ ಹೊಳೇನರಸೀಪುರದಲ್ಲಿ ಎಟಿಎಂ ಒಂದರಲ್ಲಿ ಕಾರ್ಡ್‍ಗಳ ಮಾಹಿತಿ ಕದಿಯುವ ಕದೀಮನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಎಟಿಎಂ ಬಳಕೆದಾರರೆ ಎಚ್ಚರ ಎಚ್ಚರ ಎನ್ನುವಂತಿದೆ ಇವನ ಹೈಟೆಕ್ ಕಳ್ಳತನ.
ತಾಂಝೇನಿಯಾ ಮೂಲದ ಮೈಸೂರಿನ ಮಹಾರಾಜ ಕಾಲೇಜಿನ ಬಿಕಾಂ ವಿದ್ಯಾರ್ಥಿ ಆಂಡ್ರ್ಯೂ ರೆನಾಟಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸುಮ್ಮನೆ ತನ್ನ ಪಾಡಿಗೆ ಓದಿಕೊಂಡಿದ್ದರೆ, ಶಿಕ್ಷಣದ ಬಳಿ ತನ್ನ ದೇಶ ಸೇರಿಕೊಳ್ಳುತ್ತಿದ್ದ. ಹುಡುಗಿಯರ ಚಟಕ್ಕೆ ಬಿದ್ದ ಆಂಡ್ರೂಗೆ ಹಣದ ಕೊರತೆ ಉಂಟಾಗಿತ್ತು. ಎಟಿಎಂನಿಂದ ಹಣ ಕದಿಯುವುದು ಹೇಗೆ ಎಂಬುದನ್ನು ಯುಟ್ಯೂಬ್ ನಲ್ಲಿ ಹುಡುಕಾಡಿ ಕೊನೆಗೆ ಒಂದು ಹೈಟೆಕ್ ಕಳ್ಳತನದ ಪ್ಲಾನ್ ಮಾಡಿದ್ದ.
ಏನದು ಪ್ಲಾನ್?
ಅದೂ ಕೂಡ ಹೆಚ್ಚು ಕಷ್ಟವೂ ಪಡದ ಕಳ್ಳತನ. ಸಿಸಿಟಿವಿಯಲ್ಲಿ ಸೆರೆಯಾದರೂ ಪರವಾಗಿಲ್ಲ ಅಲ್ಲಿ ಕಳ್ಳತನದ ಸುಳಿವು ಸಿಗಲ್ಲ. ಆ ರೀತಿ ಕಳ್ಳತನ ಮಾಡೋದರಲ್ಲಿ ಎಕ್ಸಪರ್ಟ್ ಆಗಿದ್ದನು. ಎಟಿಎಂನ ಕೀಬೋರ್ಡ್ ಇರುವ ಸ್ಥಳದಲ್ಲಿ ಒಂದು ಮೈಕ್ರೋ ಕ್ಯಾಮರಾ, ಕಾರ್ಡ್ ಸ್ವೈಪ್ ಮಾಡುವ ಸ್ಥಳದಲ್ಲಿ ಒಂದು ಸ್ಕ್ಯಾನರ್ ಡಿವೈಸ್, ಇಷ್ಟೆ ಇವನ ಬಂಡವಾಳ. ವಾರಕ್ಕೊಮ್ಮೆ ಅಲ್ಲಿಗೆ ಬಂದು ಅದರಲ್ಲಿರೋ ಮೆಮೋರಿ ಕಾರ್ಡ್ ತೆಗೆದುಕೊಂಡು ಹೋಗಿ, ಗ್ರಾಹಕರ ಎಟಿಎಂ ಕಾರ್ಡ್ ಮಾಹಿತಿ ಬಳಸಿ ಬೇಕಾದಾಗ ತನ್ನ ಮೋಜಿಗೆ ಹಣ ತೆಗೆದುಕೊಳ್ಳುತ್ತಿದ್ದನು. ಯಾರಿಗೂ ಅನುಮಾನವೂ ಬಾರದಂತೆ ಮೂರು ತಿಂಗಳಿಂದ ನಡೆಯುತ್ತಿತ್ತು ಎನ್ನಲಾಗಿದೆ.
ಆಂಡ್ರೂ ಎಟಿಎಂನಿಂದ ಹಣ ಕದಿಯಲು ಯು ಟ್ಯೂಬ್‍ನಿಂದ ಮಾಹಿತಿ ಸಂಗ್ರಹಿಸಿ, ಕಳ್ಳತನಕ್ಕೆ ಬೇಕಾದ ಮೈಕ್ರೋ ಕ್ಯಾಮರಾ, ಚಿಪ್‍ಗಳು, ಡಿವೈಸ್‍ಗಳನ್ನ ಚೈನಾದಿಂದ ತರೆಸಿಕೊಂಡಿದ್ದನು. ಮೈಸೂರಿನಲ್ಲಿ ಕೆನರಾ ಬ್ಯಾಂಕ್‍ನ ಎಟಿಎಂಗಳಲ್ಲಿ ಸಾಕಷ್ಟು ಹಣ ಕದ್ದಿದ್ದನು. ಒಂದೇ ಕಡೆ ಕದ್ದಲ್ಲಿ ಅನುಮಾನ ಬರುತ್ತೆ ಅನ್ನೋ ಕಾರಣಕ್ಕೆ ಬೇರೆ ನಗರಗಳಲ್ಲಿ ಕೃತ್ಯ ಎಸಗುತ್ತಿದ್ದನು. ಅಂತೆಯೇ ಹೊಳೇನರಸೀಪುರದ ಎಟಿಎಂನಲ್ಲಿ ಗ್ರಾಹಕರ ಹಣ ಲಪಟಾಯಿಸಿದ್ದ. ಈ ಬಗ್ಗೆ ದೂರು ಬಂದು ತನಿಖೆ ನಡೆಸಿದಾಗ ಎಟಿಎಂನಲ್ಲಿ ರಹಸ್ಯ ಡಿವೈಸ್ ಪತ್ತೆಯಾಗಿತ್ತು. ಈ ಬೆನ್ನಲ್ಲೇ ಖತರ್ನಾಕ್ ಹೈಟೆಕ್ ಫಾರಿನ್ ಕಳ್ಳ ಸಿಕ್ಕಿಬಿದ್ದಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv