ನೀವು ಹಲವಾರು ನಾಗರೀಕತೆಗಳ ಬಗ್ಗೆ ಇತಿಹಾಸದ ಪುಟಗಳಲ್ಲಿ ಕೇಳಿರಬಹುದು. ಓದಿರಬಹುದು. ಆದ್ರೆ, ಇಂದು ನಾವು ನಿಮಗೆ ಹೇಳೋಕೆ ಹೊರಟಿರೋ ಈ ನಗರ ಇಂದಿಗೂ ಅನೇಕ ವಿಸ್ಮಯಗಳಿಗೆ ಸಾಕ್ಷಿಯಾಗಿ ನಮ್ಮೆಲ್ಲರ ಕಣ್ಣ ಮುಂದೆ ನಿಲ್ಲುತ್ತೆ. ಅನೇಕ ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡು ಜಾಗತಿಕ ಇತಿಹಾಸಕಾರರ ಅಧ್ಯಯನಕಾರರಿಗೆ ನಿರಂತರ ಆಹಾರವಾಗ್ತಾನೇ ಇದೆ. ಅಂತಹಾ ನಗರಿಗಳಲ್ಲಿ ಇಂಕಾ ನಾಡು ಅಂತಾ ಕರೆಸಿಕೊಳ್ಳುವ ಪೆರು ದೇಶ ಕೂಡಾ ಒಂದು.
ಈ ದೇಶದ ಚರಿತ್ರೆಯನ್ನು ಕೆದಕ್ತಾ ಹೋದಂತೆ ಅನೇಕ ವಿಸ್ಮಯಗಳು, ನಿಗೂಢಗಳು ಧುತ್ತನೆ ಕಣ್ಣ ಮುಂದೆ ತೆರೆದುಕೊಳ್ಳುತ್ತವೆ. ಅದರಲ್ಲಿ ಮೋಚೆ ಅನ್ನೋ ಸಮುದಾಯದ ಆಚರಣೆಗಳು, ಜೀವನ ವಿಧಾನ ವಿಚಿತ್ರ ಹಾಗೂ ವಿಶಿಷ್ಟವೆನಿಸುತ್ತೆ. ಇವರು ತಮ್ಮ ಕಾಲಾನಂತರ ಬಿಟ್ಟು ಹೋಗಿರೋ ಕಥೆಗಳು, ಕುರುಹುಗಳು ಒಂದು ರೋಚಕ ಅಧ್ಯಾಯದ ರೀತಿ ಭಾಸವಾಗುತ್ತೆ.
Advertisement
ಪೆರು ಅಂದ ತಕ್ಷಣ ಈ ಇಂಕಾ ಅನ್ನೋ ವಿಶಿಷ್ಟ ಸಮುದಾಯದ ಜನ ನೆನಪಾಗೋದು ಸಹಜಾನೇ. ಯಾಕಂದ್ರೆ, ಇಂಕಾ ಅನ್ನೋ ಈ ಬುಡಕಟ್ಟು ಸಮುದಾಯದ ರಾಜರ ಶೌರ್ಯ ಪರಾಕ್ರಮಗಳೇ ಅಂಥದ್ದು. ಸಣ್ಣಪುಟ್ಟ ಬುಡಕಟ್ಟು ರಾಜ್ಯಗಳನ್ನು ಗೆದ್ದು, ಆಂಡೀಸ್ ಸಾರಸಂಪತ್ತನ್ನೆಲ್ಲ ಹೀರಿ, 12-15ನೇ ಶತಮಾನದ ನಡುವೆ ಉತ್ತುಂಗ ತಲುಪಿದ ವಿಸ್ತಾರ ಸಾಮ್ರಾಜ್ಯ ಇವರದ್ದಾಗಿತ್ತು. ಇಂಕಾಗಳು ಒಳ್ಳೆಯ ಆಡಳಿತಗಾರರು, ದಕ್ಷ ಕಾರ್ಯನಿರ್ವಾಹಕರು ಅನ್ನೋ ಖ್ಯಾತಿಗೆ ಭಾಜನರಾಗಿದ್ರು.
Advertisement
Advertisement
10 ಸಾವಿರ ವರ್ಷ ಹಿಂದಿನಿಂದ ಮನುಷ್ಯ ವಾಸದ ಸ್ಥಳವಾಗಿರುವ ಪೆರು ದೇಶದ ಚರಿತ್ರೆ ಬರೀ 500 ವರ್ಷ ಹಳೆಯದು ಅನ್ನೋದೇ ವಿಚಿತ್ರವೆನಿಸುತ್ತೆ. ವಸಾಹತುಶಾಹಿಗಳ ಯಜಮಾನಿಕೆಗೆ ಸಾವಿರಾರು ಸ್ಥಳೀಯ ಭಾಷೆಗಳು, ಕುರುಹುಗಳು ಮಾಯವಾದ ನೆಲ ಇದು. ಈ ಕಾರಣದಿಂದಲೇ ಇಂಕಾ ನಾಡು ಅಂತಾ ಕರೆಯಲಾಗೋ ಈ ಪೆರು ದೇಶ ಹಲವಾರು ಅಜ್ಞಾತ, ಅಳಿದುಹೋದ ಭಾಷೆ, ಕುಲಗಳ ಕೊಲಾಜ್ ರೀತಿ ಗೋಚರವಾಗುತ್ತದೆ.
Advertisement
ಪೆರುವಿನಲ್ಲಿ ಈಗಲೂ ಕೆಚುವಾ, ಉರಾರಿನಾ, ಮಾತ್ಸೆ, ಮಾಟಿ, ಕೊರುಬೊ, ಬೋರಾ, ಚಿಂಚಾ, ಹ್ವಾಂಬಿಟೊ, ಜಿಗಿಟಾ… ಹೀಗೆ ನೂರಾರು ಸ್ಥಳೀಯ ಕುಲಗಳು ಕಾಣಸಿಗುತ್ತವೆ. ಆದ್ರೆ, ವಿಶೇಷ ಏನ್ ಗೊತ್ತಾ, ಒಂದಾನೊಂದು ಕಾಲದಲ್ಲಿ ಅಲ್ಲಿ 2000ಕ್ಕೂ ಹೆಚ್ಚು ಅಲೆಮಾರಿ ಬುಡಕಟ್ಟುಗಳು ನೆಲೆ ಕಂಡುಕೊಂಡಿದ್ವು. ಆದ್ರೆ, ಸ್ಪ್ಯಾನಿಷ್ ಆಕ್ರಮಣವಾದ ಬಳಿಕ ಸುಮಾರು 1,500 ಕುಲಗಳು ಹೇಳ ಹೆಸರಿಲ್ಲದಂತೆ ನಶಿಸಿಹೋದ್ವು. ಕಲೆ, ವಿಜ್ಞಾನ, ನಿರ್ಮಾಣ, ಸಮಾಜ ರಚನೆಗಳಲ್ಲಿ ಉತ್ತುಂಗ ಹಂತ ತಲುಪಿದ್ರೂ, ಕೊನೆಗೆ ಗತವೈಭವದಲ್ಲಿ ಹೆಸರಿಗಷ್ಟೇ ಉಳಿದುಕೊಂಡ್ವು. ಮೊದಲ ಸಹಸ್ರಮಾನದಲ್ಲಿ ಆಗಿಹೋದ ಇಂತಹಾ ಒಂದು ಅಪೂರ್ವ ಬುಡಕಟ್ಟು ಜನಾಂಗವೇ ಮೋಚೆ.
ಮೋಚೆಗಳು ಕ್ರಿಸ್ತ ಶಕ 100ರಿಂದ 800ರ ಅವಧಿಯಲ್ಲಿ ಪೆರುವಿನ ಉತ್ತರ ಭಾಗದಲ್ಲಿ 250 ಮೈಲುಗಳಷ್ಟು ಕಡಲತೀರ ಹಾಗೂ 50 ಮೈಲುಗಳಷ್ಟು ಒಳನಾಡು ಪ್ರದೇಶವನ್ನು ನೆಲೆ ಮಾಡಿಕೊಂಡು ಬದುಕಿದ ದೊಡ್ಡ ಸಮುದಾಯ. ನೀರಾವರಿ, ಸ್ಮಾರಕ ನಿರ್ಮಾಣ, ಪಿಂಗಾಣಿ ಹಾಗೂ ಲೋಹಶಿಲ್ಪಕ್ಕೆ ಮೋಚೆ ಜನಾಂಗ ಹೆಸರುವಾಸಿಯಾಗಿತ್ತು. ಕೊಂಚ ಭಿನ್ನವಾದ ಎರಡು ಭಾಷೆ, ಸಂಸ್ಕೃತಿಗಳನ್ನು ಹೊಂದಿದ್ದ, ತಮ್ಮದೇ ಅನನ್ಯ ಶಿಲ್ಪಕಲೆ, ಸಂಗೀತ, ಕೃಷಿ ವಿಧಾನವನ್ನು ಅಭಿವೃದ್ಧಿಪಡಿಸಿಕೊಂಡಿದ್ದ ಜನಾಂಗ ಅವರದ್ದು. ಅಂದ ಹಾಗೆ, ಈ ಮೋಚೆ ಜನಾಂಗದ ಕುರಿತಾಗಿ ತಿಳಿದುಬಂದದ್ದೇ ಒಂದು ಆಕಸ್ಮಿಕ. ಮಚುಪಿಚು ಅನ್ನೋ ಸುಂದರ ನಗರಿಯ ಅವಶೇಷಗಳು ಸಿಕ್ಕಿದ ಬಳಿಕ ಪುರಾತತ್ವ ವಿಭಾಗದವ್ರು ಇನ್ನಷ್ಟು ಚುರುಕಾದ್ರು. ಆಗ ಪ್ರಸಿದ್ಧವಾಗಿದ್ದ ಪೆರುವಿನ ಅಳಿದುಳಿದ ಪುರಾತತ್ವ ಅವಶೇಷಗಳ ಕುರಿತಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಸಕ್ತಿ ಹೆಚ್ಚತೊಡಗಿತ್ತು. ಆಗ, ಟ್ರುಜಿಲೊ ಬಳಿಯ ಒಂದು ಮಣ್ಣುದಿಬ್ಬ ಉತ್ಖನನಕಾರರನ್ನು ಸೆಳೆಯಿತು. ಅದು ಮೋಚೆ ನದಿಯ ಪಾತ್ರ ಬದಲಾಯಿಸಿ ಸ್ಪ್ಯಾನಿಷ್ ಆಕ್ರಮಣಕಾರರು ಲೂಟಿ ಹೊಡೆದಿದ್ದ ಸೂರ್ಯ ದೇವಾಲಯವಾಗಿತ್ತು.
ಸಾಮಾನ್ಯ ಕಣ್ಣುಗಳಿಗೆ 50 ಮೀಟರ್ ಎತ್ತರದ ನೈಸರ್ಗಿಕ ದಿಬ್ಬದಂತೆ ಕಾಣುತ್ತಿದ್ದ ದಿಬ್ಬವಾಗಿತ್ತಿದು. ಉತ್ಖನನ ಮಾಡ್ತಾ ಹೋದಂತೆ, ಇದು ನೂರಾರು ವರ್ಷಗಳ ಹಿಂದೆ ಮಣ್ಣು ಇಟ್ಟಿಗೆಗಳಿಂದ ಕಟ್ಟಿದ ಹ್ವಾಕಾ ಡೆಲ್ ಸೋಲ್ ಅಂತಾ ಕರೆಯಲ್ಪಡ್ತಿದ್ದ ಸೂರ್ಯ ದೇವಾಲಯ ಅಂತಾ ತಿಳಿದುಬಂತು. ಬಂಗಾರಕ್ಕಾಗಿ ಅಗೆದ ಲೂಟಿಕೋರರು ಬೆಲೆಯಿರದ ವಸ್ತುಗಳು ಅಂತಾ ತಿಳಿದು ಪಿಂಗಾಣಿ ಪಾತ್ರೆ, ಬಟ್ಟೆ, ವಸ್ತು, ಉಪಕರಣಗಳನ್ನು ಹೇರಳವಾಗಿ ಬಿಟ್ಟೋಗಿದ್ರು. ಅದ್ರ ಪಕ್ಕದಲ್ಲೇ ಇದ್ದ ಮತ್ತೊಂದು ಪುಟ್ಟದಿಬ್ಬವೂ ಉತ್ಖನನಗೊಂಡಾಗ ಅದು ಹ್ವಾಕಾ ಡಿ ಲ ಲುನ ಅಂತಾ ಕರೆಯಲ್ಪಡೋ ಚಂದ್ರ ದೇವಾಲಯ ಅನ್ನೋದು ಗೊತ್ತಾಗಿತ್ತು.
ಪೆರುವಿನಲ್ಲಿ ಉತ್ಖನನ ಮಾಡ್ತಾ ಹೋದಂತೆ, ಮಮ್ಮಿಗಳು, ತೆಳು ಲೋಹಹಾಳೆ ಹೊದೆಸಿದ ಚಿನ್ನ ಬೆಳ್ಳಿಯ ಆಭರಣ, ಮುಖವಾಡ, ಪ್ರತಿಮೆ, ಉಪಕರಣ, ಪಾತ್ರೆ, ಮಣಿ, ಮತ್ತಿತರ ವಸ್ತುಗಳು ಪತ್ತೆಯಾಗಿದ್ವು. ಹದಿನೈದು ವರ್ಷದ ಓರ್ವ ಬಾಲಕಿಯ ಮಮ್ಮಿ, ನೀಳ ಕೇಶರಾಶಿಯಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಸಿಕ್ಕಿತ್ತು. ಆಕೆಯ ಮೇಲಿನ ತ್ವಚೆ ಇನ್ನೂ ಜೀವಂತವಿರುವ ಮನುಷ್ಯನ ತ್ವಚೆಯಂತಿತ್ತು. ಆಕೆಯ ಹೃದಯ ಮತ್ತು ಪುಪ್ಪುಸದಲ್ಲಿ ರಕ್ತ ಇನ್ನೂ ಹಾಗೆಯೇ ಇತ್ತು. ಕುಳಿತ ಸ್ಥಳದಲ್ಲಿಯೇ ನಿದ್ದೆಗೆ ಜಾರಿದಂತೆ ಆ ಬಾಲಕಿ ಕಂಡುಬಂದಿದ್ಲು.
ಇದು ಕೆಲ ವರ್ಷಗಳ ಹಿಂದೆ ಅರ್ಜೆಂಟಿನಾದಲ್ಲಿರುವ ಅಗ್ನಿಪರ್ವತದಲ್ಲಿ 22 ಸಾವಿರ ಅಡಿ ಎತ್ತರದಲ್ಲಿ ಸಿಕ್ಕಿರುವ ಮೂರು ದೇಹಗಳಲ್ಲಿ ಒಬ್ಬಳಾಗಿದ್ದ ಬಾಲೆಯದ್ದು ಅಂತಾ ಹೇಳಲಾಗಿದೆ. ಅಂದ ಹಾಗೆ, ಈ ಬಾಲೆ ಸತ್ತಿದ್ದು ಇಂದು ನಿನ್ನೆಯಲ್ಲ. ಬರೋಬ್ಬರಿ 500 ವರ್ಷಗಳ ಹಿಂದೆ. ಇವುಗಳನ್ನು ಇಂಕಾ ಮಮ್ಮಿ ಎಂದು ಕರೆಯಲಾಗಿತ್ತು. ಮುಂದೆ ಆ ಬಾಲೆಗೆ ದಿ ಮೇಡನ್ ಅಂತಾ ಹೆಸರಿಡಲಾಗಿತ್ತು. ಈ ಮಮ್ಮಿಗಳು ದೊರೆತಿದ್ದು ಚಿಲಿ ಗಡಿಯಿಂದ 300 ಮೈಲಿ ದೂರದಲ್ಲಿರುವ ಮೌಂಟ್ ಲುಲೈಲಕೋ ಎಂಬ ಅಗ್ನಿಪರ್ವತದ ತುತ್ತ ತುದಿಯಲ್ಲಿ. ಇವುಗಳು ದೊರೆತಿದ್ದು 1999 ರಲ್ಲಾದ್ರೂ, ಈಗ್ಲೂ ಇದನ್ನ ಅರ್ಜೆಂಟಿನಾದ ಸಾಲ್ಟಾ ಅನ್ನೋ ಸ್ಥಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಅಂದ ಹಾಗೆ, 500 ವರ್ಷಗಳ ಹಿಂದೆ ಇಂಕಾ ನಾಗರಿಕತೆ ಇದ್ದಾಗ ಸೋಂಕಿನಿಂದ ಬಳಲ್ತಿದ್ದ ಮಕ್ಕಳನ್ನು ಜೀವಂತವಾಗಿಯೇ ಹುಗಿಯಲಾಗ್ತಿತ್ತಂತೆ. ಅದೂ ಪರ್ವತದ ತುತ್ತತುದಿಯ ಮೇಲೆ ಹಿಮದಲ್ಲಿ ಅವರನ್ನು ಹುಗಿಯಲಾಗ್ತಿತ್ತಂತೆ. ಅಷ್ಟು ಎತ್ತರದಲ್ಲಿ ಹೂಳಿದರೆ ಮಕ್ಕಳು ಅತ್ಯಂತ ಶುದ್ಧ ಸ್ಥಿತಿಯಲ್ಲಿ ದೇವರನ್ನು ಸೇರ್ಕೋತಾರೆ ಅನ್ನೋ ನಂಬಿಕೆ ಅಂದಿನ ಜನರಲ್ಲಿ ಬಲವಾಗಿತ್ತು.
ಮಕ್ಕಳ ದೇಹಗಳು 500 ವರ್ಷಗಳ ನಂತ್ರ ಸಿಕ್ರೂ ಯಥಾಸ್ಥಿತಿಯಲ್ಲಿ ಇರೋದನ್ನ ನೋಡಿ ವೈದ್ಯರು ದಂಗಾಗಿದ್ದಾರೆ. ಇನ್ನೂ ಜೀವಂತವಿರುವ ಅಥವಾ ಕೆಲವೇ ವಾರಗಳ ಹಿಂದೆ ಸತ್ತಂತೆ ಮಮ್ಮಿಗಳ ಚರ್ಮ ಇನ್ನೂ ಇದೆ ಎಂದು ತಜ್ಞರೊಬ್ಬರು ಹೇಳಿದ್ದಾರೆ. ಇನ್ನು, 2013ರಲ್ಲಿ ಮಹಿಳೆಯರ ಆರು ಪಿರಮಿಡ್ ಪತ್ತೆಯಾದವು. ಅದುವರೆಗೆ ಕೇವಲ ಪುರುಷರಿಗಷ್ಟೇ ಅಧಿಕಾರಸ್ಥಾನ ಹಾಗೂ ಪಿರಮಿಡ್ ರಚನೆ ಎಂಬ ಅಭಿಪ್ರಾಯ ಇದ್ದು, ಆ ನಂಬಿಕೆ ಮಹಿಳೆಯರ ಸರಣಿ ಗೋರಿ ಪತ್ತೆಯಾದ ಬಳಿಕ ಬದಲಾಗಿ ಹೋಗಿತ್ತು. ದೇಹದೊಳಗಿನ ದ್ರವ ಪವಿತ್ರ ಅನ್ನೋ ನಂಬಿಕೆ ಮೋಚೆಗಳದ್ದು. ಹೀಗಾಗಿ ರಕ್ತದ ಹನಿಗಳನ್ನು ಬಲಿ ನೀಡುವ ರಕ್ತಬಲಿಯ ಚಿತ್ರಗಳು ಕಂಡುಬಂದವು.
ಸೆರೆಯಾಳುಗಳ ಹಾಗೂ ಹರಕೆಯ ನರಬಲಿ ಸಾಮಾನ್ಯವಾಗಿತ್ತು. ಬಲಿಗಿಂತ ಮೊದಲು ಅತಿಹಿಂಸೆ ನೀಡಿ ದುರ್ಬಲಗೊಳಿಸಲಾಗುತ್ತಿತ್ತು. ಅದರ ಭಾಗವಾಗಿ ನರಮಾಂಸ ಭಕ್ಷಣೆಯೂ ನಡೆಯುತ್ತಿತ್ತು. ಇದಕ್ಕೆ ಪುರಾವೆಯೊದಗಿಸುವ ಅನೇಕ ಚಿತ್ರಣಗಳು ಕಂಡುಬರುತ್ತವೆ. `ಹ್ವಾಕಾ ಡೆಲ್ ಸೋಲ್’ ಬುಡದಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ 40 ತರುಣರ ಅಸ್ಥಿಪಂಜರಗಳು ಸಿಕ್ಕವು. ಕೀಲುಸಂದು ತಪ್ಪಿದ, ದವಡೆ ಎಲುಬು ಇಲ್ಲದ, ಎಲುಬು ಮುರಿದ ಅಸ್ಥಿಪಂಜರಗಳವು. ಅವರು ಹಿಂಸೆ ಅನುಭವಿಸಿ ಬಲಿಯಾದವರು. ಹೀಗೆ ಇಂಕಾಪೂರ್ವ ಮೊಚೆಗಳ ಕತೆಯನ್ನು ಬಟ್ಟೆ, ಚಿತ್ರ, ಲೋಹವಸ್ತು, ಪಿಂಗಾಣಿಗಳೇ ತಿಳಿಸಿಬಿಟ್ಟವು.
ಕ್ರಿ.ಶ. 536-594ರ ಅವಧಿಯಲ್ಲಿ ಸಂಭವಿಸಿದ ಆಂಡೀಸ್ ಸೂಪರ್ ಎಲ್ನಿನೊ ಫಿನಾಮೆನನ್ ಇವರ ನಾಶಕ್ಕೆ ಕಾರಣವಾಯಿತು ಎನ್ನಲಾಗಿದೆ. 30 ವರ್ಷ ಅತಿ ಮಳೆ, ನಂತರ 30 ವರ್ಷ ಮಳೆಯೇ ಇಲ್ಲದ ಅತಿ ದುರ್ಬರ ಬರಗಾಲ ತಂದೊಡ್ಡಿದ ಮಹಾನ್ ವಾತಾವರಣ ಬದಲಾವಣೆಗೆ ಇಡೀ ಮೋಚೆ ಸಮಾಜ ಛಿದ್ರಗೊಂಡಿರಬಹುದು. ಎಷ್ಟು ಪ್ರಾಣಿಬಲಿ, ನರಬಲಿ ಕೊಟ್ಟರೂ ಕಡಿಮೆಯಾಗದ ನಿರಂತರ ಪ್ರವಾಹ, ದಶಕಗಟ್ಟಲೆ ಪ್ರತಿಕೂಲ ಕೃಷಿ ಪರಿಸ್ಥಿತಿಯಿಂದ ಆಹಾರ ಕೊರತೆ ಎದುರಾಯಿತು.
ಭೀಕರ ಬರಗಾಲ ಶುರುವಾಗಿ ಸಮಾಜದಲ್ಲಿ ಕ್ಷೋಭೆ, ಅಶಾಂತಿ, ದಂಗೆ, ಲೂಟಿ ಮತ್ತಿತರ ಸಮಸ್ಯೆಗಳು ಉದ್ಭವಿಸಿದವು. ಇನ್ನು, ಸಂಪನ್ಮೂಲ, ಆಹಾರದ ಪೈಪೋಟಿಯಿಂದ ಸಂಭವಿಸಿದ ನಾಗರಿಕ ಯುದ್ಧದಲ್ಲಿ ಹಾಗೂ ಹಸಿವಿನಲ್ಲಿ ಬಹುಪಾಲು ಜನ ನಾಶವಾದರು. ಆದರೂ ಕ್ರಿ.ಶ. 650ರವರೆಗೂ ಅವರ ಇರುವಿಕೆ ಇತ್ತೆಂದು ಅವಶೇಷಗಳು ತಿಳಿಸುತ್ತವೆ. ಹೀಗೆ ವೈಭವೋಪೇತವಾಗಿ ಒಂದ್ಕಾಲದಲ್ಲಿ ಮೆರೆದು ಇಡೀ ವಿಶ್ವದ ಚಿತ್ತವನ್ನು ತನ್ನತ್ತ ಸೆಳೆದಿದ್ದ ಬೃಹತ್ ಸಾಮ್ರಾಜ್ಯವೊಂದು ನಾಮಾವಶೇಷಗೊಂಡಿತ್ತು. ಇದು ಇತಿಹಾಸದ ಅಚ್ಚರಿಯೋ ಅಥವಾ ದುರಂತವೋ ಅನ್ನೋ ಅದೊಂದು ಪ್ರಶ್ನೆಗೆ ಮಾತ್ರ ಇಂದಿಗೂ ಉತ್ತರ ಸಿಕ್ಕಿಲ್ಲ. ಈಗಿನ ಇದ್ರ ಅವಶೇಷಗಳು ಒಂದೊಂದು ಕಥೆಯನ್ನು ಪಿಸುಗುಟ್ಟುವ ರೀತಿ ಭಾಸವಾಗೋದಂತೂ ಸುಳ್ಳಲ್ಲ.
– ಕ್ಷಮಾ ಭಾರದ್ವಾಜ್, ಉಜಿರೆ