ದಕ್ಷಿಣ ಭಾರತದ ಇತರೇ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ರಾಜಕೀಯ ತುಂಬಾ ವಿಶಿಷ್ಟ ಮತ್ತು ಭಿನ್ನ. ದಕ್ಷಿಣ ಭಾಗದ ಬೇರೆ ರಾಜ್ಯಗಳಲ್ಲಿ ರಾಜಕೀಯವಾಗಿ ಪ್ರಾದೇಶಿಕ ಪಕ್ಷಗಳೇ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಕರ್ನಾಟಕದಲ್ಲಿ ಜೆಡಿಎಸ್, ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ಕೊಡುತ್ತಿದ್ದರೂ ಸ್ವತಂತ್ರವಾಗಿ ಸರ್ಕಾರ ರಚಿಸುವಷ್ಟು ಪ್ರಾಬಲ್ಯ ಹೊಂದಿಲ್ಲ. ಅಷ್ಟೇ ಅಲ್ಲ, ಕರ್ನಾಟಕದ (Karnataka Politics) ರಾಜಕೀಯ ಇತಿಹಾಸದಲ್ಲಿ ಯಾವುದೇ ಒಂದು ಪಕ್ಷ ಬಹುಮತದೊಂದಿಗೆ ಸರ್ಕಾರ ರಚಿಸಿ ಐದು ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿದ್ದು ವಿರಳ. ನಾವು ಕರ್ನಾಟಕ ರಾಜಕೀಯ ಇತಿಹಾಸ ಗಮನಿಸಿದಾಗ ಹಲವು ಬಾರಿ ಅತಂತ್ರ ಪ್ರಜಾ ತೀರ್ಪು ಬಂದಿದೆ. ಈ ದೃಷ್ಟಿಕೋನದಲ್ಲಿ ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜಕೀಯ ಸ್ವಲ್ಪ ಭಿನ್ನವಾಗಿದೆ.
2004ರಿಂದ ಈವರೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಏನೇನು ರಾಜಕೀಯ ಬೆಳವಣಿಗೆಗಳಾಯಿತು ಎಂಬುದು ನಿಮಗೆ ಗೊತ್ತೆ? ಈ ಅವಧಿಯಲ್ಲಿ ಎರಡು ಬಾರಿ ಮಾತ್ರ ಒಂದೇ ಪಕ್ಷ ಪೂರ್ಣ ಅವಧಿ ಸರ್ಕಾರ ನಡೆಸಲು ಸಾಧ್ಯವಾಗಿದೆ. ಉಳಿದಂತೆ ಅತಂತ್ರ ಫಲಿತಾಂಶದ ಪರಿಣಾಮ ಸಮ್ಮಿಶ್ರ ಸರ್ಕಾರಗಳೇ ಅಸ್ತಿತ್ವಕ್ಕೆ ಬಂದಿದೆ. ಇದನ್ನೂ ಓದಿ: ಯಾರೇ ಕೈಮುಗಿದರೂ ಮೋದಿ ವಾಪಸ್ ಕೈಮುಗಿಯುತ್ತಾರೆ- ಕೋಟ ಶ್ರೀನಿವಾಸ ಪೂಜಾರಿ
Advertisement
Advertisement
2008ರಲ್ಲಿ ದಕ್ಷಿಣ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಿತು. ಪಕ್ಷೇತರ ನೆರವಿನಲ್ಲಿ ಬಿಜೆಪಿ (BJP) ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಹೆಬ್ಬಾಗಿಲು ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಐತಿಹಾಸಿಕ ಸನ್ನಿವೇಶಕ್ಕೆ ಕಾರಣೀಭೂತರಾಗಿದ್ದ ಬಿ.ಎಸ್.ಯಡಿಯೂರಪ್ಪ (Yediyurappa) ಸಿಎಂ ಸ್ಥಾನ ಉಳಿಸಿಕೊಳ್ಳಲು ಹೆಣಗಾಡಿದರು. ಆಂತರಿಕ ಭಿನ್ನಾಭಿಪ್ರಾಯ, ಸಾಲು ಸಾಲು ಹಗರಣದ ಆರೋಪಗಳಿಂದ ಅವರು 2011ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇದೆಲ್ಲವನ್ನೂ ಮುಂದೆ ಚರ್ಚಿಸೋಣ. ಹಾಗಾದ್ರೆ ಈ ಹಿಂದಿನ ನಾಲ್ಕು ಅವಧಿಯಲ್ಲಿ ಚುನಾವಣೆ ಫಲಿತಾಂಶ ಏನಿತ್ತು? ಸರ್ಕಾರ ರಚನೆಗೆ ಪ್ರಮುಖ ರಾಜಕೀಯ ಪಕ್ಷಗಳು ಏನೇನು ಕಸರತ್ತು ನಡೆಸಿದವು ಎಂಬುದನ್ನು ತಿಳಿದುಕೊಳ್ಳೋಣ.
Advertisement
ವಚನಭ್ರಷ್ಟತೆ ಹಣೆಪಟ್ಟಿ ಹೊತ್ತ ಹೆಚ್‌ಡಿಕೆ, 7 ದಿನದ ಸಿಎಂ ಆಗಿದ್ದ ಬಿಎಸ್‌ವೈ
2004ರ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ರಾಜ್ಯದ ಜನತೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಲಿಲ್ಲ. ಹೀಗಾಗಿ ಸ್ವತಂತ್ರವಾಗಿ ಸರ್ಕಾರ ರಚನೆ ಸಾಧ್ಯವಾಗದೇ ಮೂರೂ ಪಕ್ಷಗಳು ಅತಂತ್ರ ಸ್ಥಿತಿಯಲ್ಲಿದ್ದವು. ಬಿಜೆಪಿ 79 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ 65 ಹಾಗೂ ಜೆಡಿಎಸ್ 58 ಸ್ಥಾನಗಳನ್ನು ಗಳಿಸಿದರೆ, ಸಂಯುಕ್ತ ಜನತಾ ದಳ 5 ಸ್ಥಾನ ಗಳಿಸಿತ್ತು. ಪಕ್ಷೇತರರು 17 ಮಂದಿ ಗೆಲುವಿನ ನಗೆ ಬೀರಿದ್ದರು. ಹೀಗಿದ್ದಾಗ ಕಾಂಗ್ರೆಸ್, ಜೆಡಿಎಸ್ ಜೊತೆ ಮೈತ್ರಿ ಸಾಧಿಸಿ ಸರ್ಕಾರ ರಚಿಸಿತು. ಈ ಮೈತ್ರಿ ಕೇವಲ 20 ತಿಂಗಳು ಮಾತ್ರ ಆಡಳಿತ ನಡೆಸಿತು. ಕಾಂಗ್ರೆಸ್ ಮೈತ್ರಿಯಿಂದ ಹೊರಬಂದ ಜೆಡಿಎಸ್ ಕುಮಾರಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಸಖ್ಯ ಬೆಳೆಸಿತು. 20-20 ಸೂತ್ರದನ್ವಯ ರಚನೆಯಾದ ಸರ್ಕಾರದ ಮೊದಲ ಅವಧಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಬಿ.ಎಸ್.ಯಡಿಯೂರಪ್ಪ ಉಪಮುಖ್ಯಮಂತ್ರಿಯಾದರು. ಆದರೆ ಅಕ್ಟೋಬರ್ 2, 2007ಕ್ಕೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಬೇಕಾಗಿದ್ದ ಕುಮಾರಸ್ವಾಮಿ ಹಿಂದೇಟಾಕಿದ ಪರಿಣಾಮ ಬಿಜೆಪಿ ಬೆಂಬಲ ವಾಪಸ್ ಪಡೆಯಿತು. ಸರ್ಕಾರ ಪತನವಾದ ಕೆಲ ದಿನಗಳ ಬಳಿಕ ಮತ್ತೆ ದೋಸ್ತಿ ಕುದುರಿದ ಪರಿಣಾಮ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಅವರು ಸದನದಲ್ಲಿ ಬಹುಮತ ಸಾಬೀತುಪಡಿಸುವ ವೇಳೆಗೆ ಮತ್ತೆ ಜೆಡಿಎಸ್ (JDS) ತಗಾದೆ ತೆಗೆದ ಹಿನ್ನೆಲೆಯಲ್ಲಿ 6 ದಿನದಲ್ಲೇ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಗೆ ಆದ ಮೋಸವನ್ನ ಜನರ ಬಳಿ ಕೊಂಡೊಯ್ದರು. ಜೆಡಿಎಸ್‌ನಿಂದಾದ ವಚನಭ್ರಷ್ಟತೆಯನ್ನ ಮುಂದಿಟ್ಟುಕೊಂಡು ಚುನಾವಣೆಗೆ ದುಮುಕಿದ ಯಡಿಯೂರಪ್ಪ ಪಕ್ಷವನ್ನ ರಾಜ್ಯಾದ್ಯಂತ ಪುನರ್ ಸಂಘಟಿಸುವಲ್ಲಿ ಯಶಸ್ವಿಯಾದರು. ಕುಮಾರಸ್ವಾಮಿ (H.D.Kumaraswamy) ಅವರಿಗೆ ‘ವಚನಭ್ರಷ್ಟ’ ಹಣೆಪಟ್ಟಿ ಅಂಟಿಕೊಂಡಿತು. ಇದು ಯಡಿಯೂರಪ್ಪ ಅವರಿಗೆ ಚುನಾವಣೆಯ ವಿಷಯವಾಯಿತು.
Advertisement
ದಕ್ಷಿಣ ಭಾರತದ ಇತಿಹಾಸದಲ್ಲೇ ಬಿಜೆಪಿ ಸಾಧನೆ (2008)
2007ರಲ್ಲಿ ಜೆಡಿಎಸ್‌ನಿಂದಾದ ವಿಶ್ವಾಸ ದ್ರೋಹ, ರಾಜಕೀಯದಲ್ಲಾದ ಕೆಲವು ನಾಟಕೀಯ ಬೆಳವಣಿಗೆಗಳನ್ನೇ ಮುಖ್ಯ ವಿಷಯವಾಗಿಸಿಕೊಂಡು 2008ರ ಚುನಾವಣೆ ಎದುರಿಸಿದ ಬಿಜೆಪಿಗೆ ಅಚ್ಚರಿಯ ಯಶಸ್ಸು ದೊರೆಯಿತು. 2008ರ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನ ಗಳಿಸಿ ದೊಡ್ಡಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ 80 ಸ್ಥಾನಗಳನ್ನು ಜಯಿಸಿದರೆ, ಜೆಡಿಎಸ್ ಕೇವಲ 28 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು. ಉಳಿದಂತೆ ಪಕ್ಷೇತರ ಆರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆರು ಪಕ್ಷೇತರ ಶಾಸಕರ ನೆರವಿನಿಂದ ಸರ್ಕಾರ ರಚಿಸಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರು. ದಕ್ಷಿಣ ಭಾರತದಲ್ಲೇ ಬಿಜೆಪಿ ಮೊದಲ ಬಾರಿಗೆ ಸರ್ಕಾರ ರಚಿಸಿ ಇತಿಹಾಸ ಬರೆಯಿತು. ಬಳಿಕ ದೇಶದಲ್ಲೇ ಮೊದಲ ಬಾರಿಗೆ ಆಪರೇಷನ್ ಕಮಲಕ್ಕಿಳಿದ ಬಿಜೆಪಿ ಪ್ರತಿಪಕ್ಷಗಳ ಶಾಸಕರನ್ನ ಸೆಳೆದು ರಾಜೀನಾಮೆ ಕೊಡಿಸಿ ಸರ್ಕಾರದ ಬಲ ಹೆಚ್ಚಿಸಿಕೊಂಡಿತು. ಸಂಖ್ಯಾಬಲದಿಂದ ಸರ್ಕಾರ ಸುಭದ್ರವಾಗಿದ್ದರೂ ಆಂತರಿಕ ಭಿನ್ನಮತ ಯಡಿಯೂರಪ್ಪ ಅವರಿಗೆ ಮಗ್ಗಲು ಮುಳ್ಳಾಗಿ ಕಾಡಿತು. ಪ್ರತಿಪಕ್ಷಗಳ ಹದ್ದಿನಕಣ್ಣು, ಸಾಲುಸಾಲು ಅವ್ಯವಹಾರದ ದಾಖಲೆಗಳು ಬಿಡುಗಡೆಯಾಗಿದ್ದು ಯಡಿಯೂರಪ್ಪ ಅವರನ್ನು ಮತ್ತಷ್ಟು ಹೈರಾಣಾಗಿಸಿತು. ಇದನ್ನೇ ಬಂಡವಾಳ ಮಾಡಿಕೊಂಡ ಕಾಂಗ್ರೆಸ್ ಸಿದ್ದರಾಮಯ್ಯ ನೇತೃತ್ವದಲ್ಲಿ ಬಳ್ಳಾರಿಗೆ ಪಾದಯಾತ್ರೆ ನಡೆಸಿತು. ಬಿಜೆಪಿ ಸರ್ಕಾರವನ್ನು ಭ್ರಷ್ಟ್ರಾಚಾರದ ಆಪಾದನೆ ಹೈರಾಣಾಗಿಸಿತು. ಲೋಕಾಯುಕ್ತ ವರದಿಯಲ್ಲಿ ಹೆಸರು ಪ್ರಸ್ತಾಪವಾದ ಕಾರಣ ಜುಲೈ 31, 2011ರಲ್ಲಿ ಯಡಿಯೂರಪ್ಪ ಪದತ್ಯಾಗ ಮಾಡಿದರು. ಇದನ್ನೂ ಓದಿ: ದಶಪಥ ರಸ್ತೆ ಸರಿಯಿಲ್ಲ, ನಾನು ಬರೋವಾಗ ಶೌಚಾಲಯಕ್ಕೆ ನಿಲ್ಲಿಸಲೂ ಅವಕಾಶ ಇರ್ಲಿಲ್ಲ – ಡಿಕೆಶಿ
ಭ್ರಷ್ಟಾಚಾರ ಆರೋಪವುಳ್ಳ ಖಾಸಗಿ ದೂರಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಅಕ್ಟೋಬರ್ 15, 2011ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಈ ಮೂಲಕ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜೈಲಿಗೆ ಹೋದ ಮಾಜಿ ಮುಖ್ಯಮಂತ್ರಿ ಎನ್ನುವ ಅಪಕೀರ್ತಿಯೂ ಅವರಿಗೆ ಅಂಟಿಕೊಂಡಿತು. ಆಗಿನ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ, ತಮ್ಮ ಆಪ್ತ ಡಿ.ವಿ.ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಗಾದಿಗೆ ಕೂರಿಸಿದ ಯಡಿಯೂರಪ್ಪ, ನಂತರ ಅವರು ತನ್ನ ಹಿಡಿತಕ್ಕೆ ಸಿಗುತ್ತಿಲ್ಲ ಎನಿಸಿದಾಗ ಪಟ್ಟು ಹಿಡಿದು ಗೌಡರನ್ನು ಅಧಿಕಾರದಿಂದ ಕೆಳಗಿಳಿಸಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದರು. ಬಿಜೆಪಿಯಲ್ಲಿನ ಆಂತರಿಕ ಸಮಸ್ಯೆಗಳ ಕಾರಣಕ್ಕೆ ಅಧಿಕಾರ ಕಳೆದುಕೊಂಡಿದ್ದ ಯಡಿಯೂರಪ್ಪ 2013ರಲ್ಲಿ ಬಿಜೆಪಿ ತೊರೆದು ಪ್ರತ್ಯೇಕ ಪಕ್ಷ ರಚಿಸಿ ಮಾತೃ ಪಕ್ಷಕ್ಕೆ ಸೆಡ್ಡು ಹೊಡೆದರು. “ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ವರಿಷ್ಠರು ನಂತರದಲ್ಲಿ ಮರೆತರು. ರಾಜ್ಯ ಬಿಜೆಪಿಯ ಕೆಲವು ಮುಖಂಡರು ಕೂಡ ನನಗೆ ಅವಮಾನ ಮಾಡುತ್ತಿದ್ದಾರೆ. ನಿರಂತರವಾಗಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಾ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಬಿಜೆಪಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ” ಎಂದು ಹೇಳಿ ಯಡಿಯೂರಪ್ಪ ಬಿಜೆಪಿ ತೊರೆದರು.
ನಿಜಲಿಂಗಪ್ಪ, ಅರಸು ಬಳಿಕ ಸಿಎಂ ಆಗಿ ಸಿದ್ದು ಪೂರ್ಣಾವಧಿ ಆಡಳಿತ
2013ರ ಕರ್ನಾಟಕ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಹಲವು ಅಚ್ಚರಿದಾಯಕ ಬೆಳವಣಿಗೆಗಳು ನಡೆದವು. ಯಡಿಯೂರಪ್ಪ ಅವರು ಹೊಸ ಪಕ್ಷ ಕೆಜೆಪಿ ಸ್ಥಾಪಿಸಿ ಚುನಾವಣೆ ಎದುರಿಸಿದರು. ಇತ್ತ ಶ್ರೀರಾಮುಲು ಕೂಡ ಬಿಜೆಪಿ ತೊರೆದು ಬಿಎಸ್‌ಆರ್‌ಸಿ ಪಕ್ಷ ಸ್ಥಾಪಿಸಿ ಅಖಾಡಕ್ಕೆ ಇಳಿದಿದ್ದರು. ಆ ಮೂಲಕ ಬಿಜೆಪಿಗೆ ಈ ಇಬ್ಬರು ಪ್ರಭಾವಿ ನಾಯಕರು ಸೆಡ್ಡು ಹೊಡೆದರು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 122 ಸ್ಥಾನ ಗಳಿಸಿ ಸ್ವತಂತ್ರ ಪಕ್ಷವಾಗಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಿತು. ಆಂತರಿಕ ಭಿನ್ನಾಭಿಪ್ರಾಯದ ಹೊಡೆತಕ್ಕೆ ಸಿಲುಕಿದ ಬಿಜೆಪಿ 40 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಜೆಡಿಎಸ್ ಕೂಡ 40 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಯಡಿಯೂರಪ್ಪ ಅವರು ಸ್ಥಾಪಿಸಿದ ಕೆಜೆಪಿ 6 ಸ್ಥಾನಗಳಲ್ಲಿ ಜಯಗಳಿಸಿತು. ಬಿ.ಶ್ರೀರಾಮುಲು ಅವರ ಬಿಎಸ್‌ಆರ್‌ಸಿ 4, ಸಮಾಜವಾದಿ ಪಕ್ಷ 1, ಕರ್ನಾಟಕ ಮಕ್ಕಳ ಪಕ್ಷ 1, ಸರ್ವೋದಯ ಕರ್ನಾಟಕ ಪಕ್ಷ 1, ಪಕ್ಷೇತರ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದವು. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹೆಚ್ಚು ಸ್ಥಾನಗಳನ್ನು ಗಳಿಸಲು ಸಾಧ್ಯವಾಗದಿದ್ದರೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಲ್ಲಿ ಮಾತ್ರ ಯಡಿಯೂರಪ್ಪ ಯಶಸ್ವಿಯಾಗಿ ತನ್ನ ಶಕ್ತಿ ಏನೇಂಬುದನ್ನು ಸಾಬೀತುಪಡಿಸಿದರು. ರಾಜ್ಯದಲ್ಲಿ ಪಕ್ಷಕ್ಕೆ ಯಡಿಯೂರಪ್ಪ ಅಗತ್ಯ ಎಂಬುದನ್ನು ಮನಗಂಡ ಬಿಜೆಪಿ, ಮತ್ತೆ ಹೋರಾಟಗಾರನಿಗೆ ಬಾಗಿಲು ತೆರೆಯಿತು. ಲೋಕಸಭಾ ಚುನಾವಣೆ ವೇಳೆಗೆ ಮತ್ತೆ ಮಾತೃ ಪಕ್ಷಕ್ಕೆ ಹಿಂದಿರುಗಿದ ಯಡಿಯೂರಪ್ಪ ಶಿವಮೊಗ್ಗದಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾದರು. ಎಸ್.ನಿಜಲಿಂಗಪ್ಪ, ಡಿ.ದೇವರಾಜ ಅರಸು ಅವರ ಬಳಿಕ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಅವರು ಐದು ವರ್ಷ ಪೂರ್ಣಾವಧಿ ಆಡಳಿತ ನಡೆಸಿದ ಕೀರ್ತಿಗೆ ಪಾತ್ರರಾದರು. ಇದನ್ನೂ ಓದಿ: ಗುಬ್ಬಿ ಶ್ರೀನಿವಾಸ್‌ಗೆ ಆಹ್ವಾನ – ಇಬ್ರಾಹಿಂ ವಿರುದ್ಧ ಹೆಚ್‌ಡಿಕೆ ಗರಂ
ಮೈತ್ರಿ, ಬಂಡಾಯ, ಆಪರೇಷನ್ ಕಮಲ
2018ರ ಮೇ 15ರಂದು ಇಡೀ ಕರ್ನಾಟಕ ಅಷ್ಟೇ ಅಲ್ಲ, ಎರಡು ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್ ಕೂಡ ರಾಜ್ಯದ ವಿಧಾನಸಭಾ ಚುನಾವಣೆ ಫಲಿತಾಂಶ ಏನಾಗಬಹುದು ಎಂದು ಕುತೂಹಲದ ಕಣ್ಣಿಂದ ನೋಡಿತ್ತು. ನಮಗೇ ಬಹುಮತ ಬಂದ್ರೆ ಸಾಕು ಎಂಬ ಹಪಹಪಿ ಕಾಂಗ್ರೆಸ್ (Congress), ಬಿಜೆಪಿ ಪಕ್ಷಗಳಿಗಿತ್ತು. ಆದರೆ ಕರ್ನಾಟಕ ಜನತೆಯ ತೀರ್ಪು ಬೇರೆಯೇ ಆಗಿತ್ತು. ಯಾವ ಪಕ್ಷಕ್ಕೂ ಜನ ಬಹುಮತ ನೀಡಲಿಲ್ಲ. ಮತ್ತೆ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ರಚನೆಯಾಯಿತು. ಬಿಜೆಪಿ 104 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಬಹುಮತಕ್ಕೆ 9 ಸ್ಥಾನಗಳ ಕೊರತೆ ಎದುರಾಯಿತು. ಕಾಂಗ್ರೆಸ್-80, ಜೆಡಿಎಸ್-37, ಕೆಪಿಜೆಪಿ-1, ಬಿಎಸ್‌ಪಿ-1, ಪಕ್ಷೇತರ-1 ಸ್ಥಾನ ಗೆದ್ದಿದ್ದವು.
ಯಾವುದೇ ರಾಷ್ಟ್ರೀಯ ಪಕ್ಷ ಮೈತ್ರಿಗೆ ಆಹ್ವಾನಿಸಿದರೆ, ಸಿಎಂ ಸ್ಥಾನ ಪಡೆದು ಸರ್ಕಾರ ರಚಿಸಲು ಸಿದ್ಧವಾಗಿ ಜೆಡಿಎಸ್ ಕಾದಿತ್ತು. ಆದರೆ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನ ನೀಡಿದರು. ಬಹುಮತ ಸಾಬೀತುಪಡಿಸಲು ಯಡಿಯೂರಪ್ಪ ಅವರಿಗೆ 15 ದಿನಗಳ ಕಾಲಾವಕಾಶ ನೀಡಲಾಯಿತು. ಬಿ.ಎಸ್.ಯಡಿಯೂರಪ್ಪ ಸಿಎಂ ಗದ್ದುಗೆ ಏರಿದರು. ಕಾಂಗ್ರೆಸ್–ಜೆಡಿಎಸ್ ಶಾಸಕರನ್ನು ಸೆಳೆದುಕೊಂಡು ವಿಶ್ವಾಸಮತ ಗೆಲ್ಲಬಹುದು ಎನ್ನುವುದು ಯಡಿಯೂರಪ್ಪ ಅವರ ಲೆಕ್ಕಾಚಾರವಾಗಿತ್ತು. ಆದರೆ, ಬಹುಮತ ಇಲ್ಲದಿದ್ದರೂ ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ನೀಡಿದ್ದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಕಾಂಗ್ರೆಸ್–ಜೆಡಿಎಸ್ ನಾಯಕರು ರಾತ್ರೋರಾತ್ರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ನೀಡಿದ್ದ 15 ದಿನಗಳ ಕಾಲಾವಕಾಶದ ಬದಲು ನ.19, 2018 ಸಂಜೆ 4 ಗಂಟೆಗೆ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ನ.18 ರಂದು ಆದೇಶ ನೀಡಿತ್ತು. ಕೋರ್ಟ್ ಆದೇಶದಂತೆ, ನ.19ರ ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಅಧಿವೇಶನ ಆರಂಭಗೊಂಡಿತು. ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು. ಸಂಜೆ 4 ಗಂಟೆಗೆ ‘ವಿಶ್ವಾಸ ಮತ’ ಸಾಬೀತುಪಡಿಸಲು ಕೋರ್ಟ್ ಸೂಚನೆ ನೀಡಿತ್ತಾದರೂ 3:40ಕ್ಕೆ ಈ ಪ್ರಸ್ತಾವ ಮಂಡಿಸಿದ ಯಡಿಯೂರಪ್ಪ ತಮಗೆ ಬಹುಮತ ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಗೊತ್ತಾದಾಗ ಆಕ್ರೋಶ, ಭಾವೋದ್ವೇಗದ ಮಧ್ಯೆ 22 ನಿಮಿಷಗಳ ವಿದಾಯದ ಭಾಷಣ ಮಾಡಿ ರಾಜೀನಾಮೆ ನೀಡಿದರು. ಮೂರನೇ ಬಾರಿ ಸಿಎಂ ಹುದ್ದೆಗೆ ಏರಿದ್ದ ಅವರ ಅಧಿಕಾರಾವಧಿ ಕೇವಲ 55 ಗಂಟೆಯಲ್ಲಿ ಕೊನೆಗೊಂಡಿತು. ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಸೋಮಣ್ಣ ಕಣ್ಣೀರು – ಬಿಜೆಪಿ ಬಿಡಲ್ಲ ಎಂದು ಸ್ಪಷ್ಟನೆ
ಚುನಾವಣೆ ಸಂದರ್ಭದಲ್ಲಿ, ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಮೈತ್ರಿ ಸಾಧ್ಯವಿಲ್ಲ ಎಂದು ಶಪಥ ಮಾಡಿದ್ದ ಸಿದ್ದರಾಮಯ್ಯ ಕೊನೆಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಮಣಿಯಬೇಕಾಯಿತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದವು. ದೋಸ್ತಿ ಸಾಧಿಸುವಲ್ಲಿ ಡಿ.ಕೆ.ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಯಡಿಯೂರಪ್ಪ ಸರ್ಕಾರ ‘ವಿಶ್ವಾಸ’ಮತದ ಅಗ್ನಿಪರೀಕ್ಷೆಗೆ ಒಡ್ಡಿಕೊಳ್ಳದೆ ಪತನಗೊಂಡ ಬಳಿಕ, ಕಾಂಗ್ರೆಸ್–ಜೆಡಿಎಸ್‌ನ ಮೈತ್ರಿ ಸರ್ಕಾರ ರಚೆನೆಯಾಗಿ, ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಕಾಂಗ್ರೆಸ್‌ನಿಂದ ಡಾ. ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿಯಾದರು. ಮೈತ್ರಿ ಪಕ್ಷಗಳ ಆಂತರಿಕ ಭಿನ್ನಮತದ ಹೊಗೆ ಬೆಂಕಿಯಾಗಿ ಹೊತ್ತಿಕೊಂಡ ಪರಿಣಾಮ ಅತೃಪ್ತ ಶಾಸಕರ ಗುಂಪು (16 ಶಾಸಕರು) ಮುಂಬೈಗೆ ಹಾರಿತು. ಇದರ ಲಾಭ ಪಡೆಯಲು ಅಖಾಡಕ್ಕಿಳಿದ ಬಿಜೆಪಿ ಮತ್ತೆ ಆಪರೇಷನ್ ಕಮಲದ ಹಾದಿ ಹಿಡಿಯಿತು. ನಂತರ ಶಾಸಕರು ಗುಂಪುಗುಂಪಾಗಿ ರಾಜೀನಾಮೆ ಸಲ್ಲಿಸಿದರು.
ಮುಂಗಾರು ಅಧಿವೇಶನದಲ್ಲಿ ವಿಶ್ವಾಸಮತ ಪ್ರಸ್ತಾವ ಮಂಡಿಸಿದ್ದ ಕುಮಾರಸ್ವಾಮಿ, ವಿಶ್ವಾಸಮತಕ್ಕೆ ಹಾಕಿದರು. ಪ್ರಸ್ತಾವದ ಪರ 99, ವಿರುದ್ಧ 105 ಮತಗಳು ಬಂದ ಕಾರಣ ಕುಮಾರಸ್ವಾಮಿ ನೇತೃತ್ವದ 14 ತಿಂಗಳ ಮೈತ್ರಿ ಸರ್ಕಾರ ಬಿದ್ದುಹೋಯಿತು. ಈ ಅವಧಿಯಲ್ಲಿ ಯಡಿಯೂರಪ್ಪ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಸರ್ಕಾರ ಪತನವಾದ ಬಳಿಕ ಯಡಿಯೂರಪ್ಪ ಅವರೇ ಮತ್ತೆ ನಾಲ್ಕನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದರು. ನಂತರ ʼಪಕ್ಷಾಂತರ ಪರ್ವʼ ರಾಜಕೀಯ ರಾಜ್ಯದಲ್ಲಿ ಸದ್ದು ಮಾಡಿತು. ಈ ಎಲ್ಲಾ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ಬಂಡಾಯ ಶಾಸಕರು ಮತ್ತೆ ಉಪ ಚುನಾವಣೆ ಎದುರಿಸಬೇಕಾಯಿತು. ಬಂಡಾಯ ಶಾಸಕರ ನೇತೃತ್ವ ವಹಿಸಿದ್ದ ಹೆಚ್.ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ದುರಾದೃಷ್ಟವಶಾತ್ ಉಪ ಚುನಾವಣೆಯಲ್ಲಿ ಸೋಲನುಭವಿಸಿದರು. ಉಳಿದಂತೆ ಎಲ್ಲಾ ಅತೃಪ್ತರು ಮತ್ತೆ ಆರಿಸಿ ಬಂದು ಬಿಜೆಪಿ ಸೇರಿ, ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಂಪುಟದಲ್ಲಿ ಸಚಿವರಾದರು. 2 ವರ್ಷ ಆಡಳಿತ ನಡೆಸಿದ ಯಡಿಯೂರಪ್ಪ ಪಕ್ಷದಲ್ಲಿ ಹಿರಿತನದ ಕಾರಣಕ್ಕೆ ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ನಂತರ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡರು.