ನವೆಂಬರ್ 1 … ಕನ್ನಡಿಗರ ಪಾಲಿನ ಅತ್ಯಂತ ಸಂಭ್ರಮ, ಸಡಗರದ ಕ್ಷಣ. ಇದು ಕರ್ನಾಟಕ ರಾಜ್ಯ ರಚನೆಯ ಐತಿಹಾಸಿಕ ದಿನ. ಇದೇ ಕಾರಣದಿಂದ ನವೆಂಬರ್‌ನಲ್ಲಿ ಎಲ್ಲೆಲ್ಲೂ ಕನ್ನಡದ ಕಂಪು ಅನುರಣಿಸುತ್ತಿರುತ್ತದೆ. ಕರ್ನಾಟಕ ತನ್ನದೇ ಆದ ಶ್ರೀಮಂತ ಪರಂಪರೆ, ಸಂಸ್ಕೃತಿ, ಇತಿಹಾಸ ಹೊಂದಿರುವ ಪಾವನ ಭೂಮಿ. ಕಲೆ, ಸಾಹಿತ್ಯಕ್ಕೆ ತವರೂರಿದು. ಕನ್ನಡ ಬರೀ ಭಾಷೆಯಲ್ಲ, ಅದು ನಮ್ಮ ಉಸಿರು, ಬದುಕು. ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡ ಭಾಷಿಗರು ಇರುವ ಪ್ರದೇಶವನ್ನೆಲ್ಲಾ ಒಟ್ಟುಗೂಡಿಸಿ ಕರ್ನಾಟಕ ರಾಜ್ಯವನ್ನು ರೂಪಿಸಲಾಯಿತು.
ಕನ್ನಡದ ಕುಲಪುರೋಹಿತ ಎಂದೇ ಖ್ಯಾತಿಗಳಿಸಿರುವ ಆಲೂರು ವೆಂಕಟರಾಯರು 1905ರಲ್ಲೇ ಕರ್ನಾಟಕ ಏಕೀಕರಣ ಚಳುವಳಿ ಆರಂಭಿಸಿದ್ದರು. 1950ರಲ್ಲಿ ಭಾರತವು ಗಣರಾಜ್ಯವಾದ ನಂತರ ಪ್ರಾಂತ್ಯ, ಭಾಷೆಗಳ ಆಧಾರದ ವೇಳೆ ವಿವಿಧ ರಾಜ್ಯಗಳು ರೂಪುಗೊಂಡವು. 1956ರ ನವೆಂಬರ್ 1 ರಂದು ಮೈಸೂರು ರಾಜ್ಯವು ರಚನೆಯಾಯಿತು. ದಕ್ಷಿಣ ಭಾರತದಲ್ಲಿ ಹರಡಿದ್ದ ಕನ್ನಡ ಭಾಷೆ ಮಾತನಾಡುವ ಪ್ರದೇಶವನ್ನ ವಿಲೀನಗೊಳಿಸಿ ಮೈಸೂರು ರಾಜ್ಯವನ್ನ ಘೋಷಿಸಲಾಗಿತ್ತು. ಇಡೀ ಕನ್ನಡ ನಾಡನ್ನು ಪ್ರತಿನಿಧಿಸುವಂತಹ ಹೆಸರಿಡಲು ನಿರ್ಧರಿಸಿದಾಗ 1973ರ ನವೆಂಬರ್ 1ರಂದು ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಕರ್ನಾಟಕ ನಾಮಫಲಕವನನ್ನು ಸಾಂಕೇತಿಕವಾಗಿ ಅನಾವರಣಗೊಳಿಸಿದ್ದರು. ಹೀಗೆ ಕರುನಾಡು ಉದಯವಾದ ದಿನದ ಸಡಗರ, ಹೆಮ್ಮೆ, ಸ್ವಾಭಿಮಾನದ ಸಂಕೇತವೇ ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಸಂಭ್ರಮ. ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶದಲ್ಲಿ ನೆಲೆಸಿರುವ ಕನ್ನಡ ಭಾಷಿಗರು ಈ ದಿನವನ್ನು ಅತ್ಯಂತ ವೈಭವದಿಂದ ಆಚರಿಸಿ ತಾಯಿ ಭುವನೇಶ್ವರಿಗೆ ನಮಿಸುತ್ತಾರೆ. ಅಂತೆಯೇ ಕನ್ನಡ ನಾಡು ಉದಯವಾದ ಹಾದಿಯನ್ನೊಮ್ಮೆ ನೋಡುವವರಿಗಾಗಿ ʻನಿಮ್ಮ ಪಬ್ಲಿಕ್ ಟಿವಿʼ ಈ ಮೈಲುಗಲ್ಲುಗಳ ನೋಟವನ್ನು ದಾಖಲಿಸಿದೆ. ಮುಂದೆ ಓದಿ….
ಉದಯವಾಯಿತು ಚೆಲುವ ಕನ್ನಡ ನಾಡು, ಹೆಸರಾಯ್ತು ಕರ್ನಾಟಕ
1973ರ ನವೆಂಬರ್ 1ರಂದು ಕನ್ನಡಿಗರ ಕನಸು ನನಸಾಗಿ ಮೈಸೂರು ರಾಜ್ಯ, ಕರ್ನಾಟಕವೆಂಬ ನಾಮ ಅಲಂಕರಿಸಿತು. ಮದ್ರಾಸ್, ಬಾಂಬೆ, ಹೈದರಾಬಾದ್ ಪ್ರಾಂತ್ಯಗಳ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ 1956ರ ನವೆಂಬರ್ 1ರಂದೇ ಉದಯವಾದರೂ ಇಡೀ ನಾಡನ್ನು ಪ್ರತಿನಿಧಿಸುವಂತಹ ಹೆಸರು ಪಡೆಯಲು ಮತ್ತೆ 17 ವರ್ಷ ಕಾಯಬೇಕಾಯಿತು. ಕನ್ನಡ ನಾಡಿಗೆ ಕರ್ನಾಟಕ ಎಂಬುದಾಗಿ ನಾಮಕರಣ ಮಾಡಿದ್ದು ದೇವರಾಜ ಅರಸು ನೇತೃತ್ವದ ಸರ್ಕಾರ. ಅಂದಾನಪ್ಪ ದೊಡ್ಡಮೇಟಿ, ಕೆ.ಎಚ್.ಪಾಟೀಲ, ಶಾಂತವೇರಿ ಗೋಪಾಲಗೌಡ ಅವರಂತಹ ನಾಯಕರ ಒತ್ತಾಸೆಯೂ ನಮ್ಮ ನಾಡು ಕರ್ನಾಟಕ ಎಂಬ ಹೆಸರು ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸಿತ್ತು.
ಕನ್ನಡ ಚಳವಳಿ
60-70ರ ದಶಕದ ಕನ್ನಡ ಚಳವಳಿ ಕರ್ನಾಟಕ ಕನ್ನಡದ ಸಾಂಸ್ಕೃತಿಕ ಅಸ್ಮಿತೆಯನ್ನ ಬಲಪಡಿಸಿತು. ಡಬ್ಬಿಂಗ್ ವಿರೋಧಿ ಚಳವಳಿ ಕನ್ನಡ ಸಿನಿಮಾದ ಬೆನ್ನುಮೂಳೆ ಗಟ್ಟಿಗೊಳಿಸಿತು. ಬೆಂಗಳೂರು ಕನ್ನಡಿಗರ ಅಳುಕು ಆತ್ಮವಿಶ್ವಾಸವಾಗಿ ಬದಲಾಗಿ, ಕಾರ್ಖಾನೆಗಳಲ್ಲಿ ಕನ್ನಡಿಗರ ಸೊಲ್ಲು ಕೇಳುವಂತಾಯಿತು. ಅನಕೃ, ಮ. ರಾಮಮೂರ್ತಿ, ಎಂ.ಚಿದಾನಂದಮೂರ್ತಿ, ವಾಟಾಳ್ ನಾಗರಾಜ್, ಜಿ.ನಾರಾಯಣಕುಮಾರ್ ಮತ್ತಿತರ ನಾಯಕರು ಕನ್ನಡ ಚಳವಳಿಗೆ ಜೀವ ತುಂಬಿದರು.
ಕನ್ನಡ ಸಿನಿಮಾದ ಹೊಸ ಅಲೆ
ಎನ್. ಲಕ್ಷ್ಮೀನಾರಾಯಣ್ ನಿರ್ದೇಶನದ ‘ನಾಂದಿ’ (1964) ‘ಹೊಸ ಅಲೆ’ಗೆ ಮುನ್ನುಡಿ ಬರೆಯಿತು. ಆ ಅಲೆ ಸ್ಪಷ್ಟವಾಗಿ ಪ್ರಕಟಗೊಂಡ ಸಿನಿಮಾ ಯು.ಆರ್. ಅನಂತಮೂರ್ತಿ ಕಥೆ ಆಧರಿಸಿ ಪಟ್ಟಾಭಿರಾಮ ರೆಡ್ಡಿ ನಿರ್ದೇಶಿಸಿದ ‘ಸಂಸ್ಕಾರ’ (1970) ಕನ್ನಡದ ಮೊದಲ ಸ್ವರ್ಣಕಮಲ ಪುರಸ್ಕೃತ ಚಿತ್ರವಿದು. ʻಚೋಮನದುಡಿ’, ʻಘಟಶ್ರಾದ್ಧ’, ʻಕಾಡು’ ಚಿತ್ರಗಳಿಂದ ಇತ್ತೀಚಿನ ʻತಿಥಿ’, ʻಪೆಟ್ರೊ’, ʻಫೋಟೊ’ ಚಿತ್ರಗಳವರೆಗಿನ ಕಲಾತ್ಮಕ ಚಿತ್ರಗಳ ಹರವಿನಲ್ಲಿ ಗಿರೀಶ ಕಾಸರವಳ್ಳಿ, ಗಿರೀಶ ಕಾರ್ನಾಡ, ಬಿ.ವಿ. ಕಾರಂತ, ಜಿ.ವಿ ಅಯ್ಯರ್, ಎಂ.ಎಸ್ ಸತ್ಯು, ಲಂಕೇಶ್, ಬರಗೂರು ರಾಮಚಂದ್ರಪ್ಪ, ಪಿ. ಶೇಷಾದ್ರಿ, ಮುಂತಾದವರನ್ನ ಗುರ್ತಿಸಬಹುದು.
ಹುಲಿ ಸಂರಕ್ಷಣೆಗೆ ಮಾದರಿ
ಅಳಿವಿನಂಚಿಗೆ ಸಾಗಿದ್ದ ಹುಲಿಗಳ ಸಂತತಿ ರಕ್ಷಣೆಯಲ್ಲಿ ಹೊಸ ಭಾಷ್ಯ ಬರೆದಿದ್ದು 1973ರ ನ.16ರಂದು ಉದ್ಘಾಟನೆಯಾದ ಬಂಡೀಪುರ ಹುಲಿ ಯೋಜನೆ
ಜಾಗತಿಕ ಮಟ್ಟದ ಬಿ-ಸ್ಕೂಲ್, ಕ್ರಿಕೆಟ್ ಸಾರ್ವಭೌಮ
1973ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ (ಐಐಎಂಬಿ) ಜಾಗತಿಕ ಮಟ್ಟದಲ್ಲೂ ಹೆಸರು ಮಾಡಿದ ಬಿ-ಸ್ಕೂಲ್. ಇದರೊಂದಿಗೆ 15 ಸಲ ರಣಜಿ ಟ್ರೋಫಿ ಜಯಿಸಿದ್ದ ಮುಂಬೈ ತಂಡವನ್ನ 1973-74ರಲ್ಲಿ ಸೆಮಿ ಫೈನಲ್‌ನಲ್ಲಿ ಮಣಿಸಿ ಫೈನಲ್‌ನಲ್ಲಿ ರಾಜಸ್ಥಾನವನ್ನ ಸೋಲಿಸಿ ಕರ್ನಾಟಕ ಮೊದಲ ಬಾರಿ ರಣಜಿ ಟ್ರೋಫಿ ತನ್ನದಾಗಿಸಿತು.
ಜಯದೇವ ಆಸ್ಪತ್ರೆ-ಆರೋಗ್ಯ ಕ್ಷೇತ್ರದ ಹೆಗ್ಗುರುತು
‘ಚಿಕಿತ್ಸೆ ಮೊದಲು-ಪಾವತಿ ನಂತರ’ ಎಂಬ ಪರಿಕಲ್ಪನೆಯ ಅಡಿಯಲ್ಲಿ 1972ರಲ್ಲಿ ಸ್ಥಾಪನೆಯಾದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ರಾಜ್ಯಕ್ಕೊಂದು ಮುಕುಟಮಣಿ. ಅಲ್ಲದೇ ಅದು ಆರೋಗ್ಯ ಕ್ಷೇತ್ರದ ಹೆಗ್ಗುರುತೂ ಆಗಿತ್ತು.
ಯುವಜನರನ್ನ ಹಳ್ಳಿಯತ್ತ ಕರೆದೊಯ್ದ ʻಬಂಗಾರದ ಮನುಷ್ಯʼ
ಸಿದ್ದಲಿಂಗಯ್ಯ ನಿರ್ದೇಶನದ ‘ಬಂಗಾರದ ಮನುಷ್ಯ’ ನಾಡಿನ ಮೇಲೆ ಗಾಢ ಪರಿಣಾಮ ಬೀರಿದ ಮುಖ್ಯವಾಹಿನಿಯ ಪ್ರಮುಖ ಸಿನಿಮಾ. 1972-1973ರಲ್ಲಿ, ಒಟ್ಟು 104 ವಾರಗಳ ದಾಖಲೆ ಪ್ರದರ್ಶನದ ಮೂಲಕ ಚಿತ್ರೋದ್ಯಮದ ಸ್ಥಿರತೆಗೆ ಕಾರಣವಾಯಿತು. ರೈತ ಸಂಸ್ಕೃತಿ – ಕನ್ನಡ ಸಂಸ್ಕೃತಿಗಳನ್ನು ಒಟ್ಟಿಗೆ ಕಾಣಿಸಿತು. ಕೌಟುಂಬಿಕ ಮೌಲ್ಯಗಳನ್ನ ಎತ್ತಿಹಿಡಿಯಿತು. ಕೃಷಿ ಸಂಸ್ಕೃತಿಯ ಮಹತ್ವವನ್ನೂ ಸಾರಿತು. ವರನಟ ಡಾ.ರಾಜ್‌ಕುಮಾರ್ ವ್ಯಕ್ತಿತ್ವ-ವರ್ಚಸ್ಸಿಗೆ ಹೊಳಪು ನೀಡಿತು. ಇದೆಲ್ಲದಕ್ಕಿಂತ ಮುಖ್ಯವಾಗಿ ವಿದ್ಯಾವಂತ ಯುವಜನ ಹಳ್ಳಿಗಳಿಗೆ ಮರಳಲು ಪ್ರೇರೇಪಿಸಿತು
ʻಕೆಎಂಎಫ್ʼ – ಹಾಲಿನ ಹೊಳೆಯೊ ಜೇನಿನ ಮಳೆಯೋ
ಗುಜರಾತ್‌ನ ಅಮುಲ್ ಮಾದರಿಯಲ್ಲಿ ಆರಂಭವಾದ ಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್) ರಾಜ್ಯದಲ್ಲಿ ಕ್ಷೀರ ಕ್ರಾಂತಿಯನ್ನೇ ಮಾಡಿದೆ. ಸಹಕಾರ ತತ್ವದ ಆಧಾರದಲ್ಲಿ ಹಳ್ಳಿ ಮಟ್ಟದಲ್ಲಿ ಕಾರ್ಯಾರಂಭ ಮಾಡಿದ ಹಾಲು ಉತ್ಪಾದಕರ ಸಹಕಾರ ಸಂಘಗಳು ರೈತರ ಜೀವನಾಡಿಯಾದವು. 15 ಒಕ್ಕೂಟಗಳೊಂದಿಗೆ, ಹಾಲಿನ ಸಂಗ್ರಹ ಮತ್ತು ಮಾರಾಟದಲ್ಲಿ ಭಾರತದಲ್ಲಿ 2ನೇ ಸ್ಥಾನ, ದಕ್ಷಿಣದಲ್ಲಿ ಮೊದಲ ಸ್ಥಾನ ಪಡೆದಿರುವ ಕೆಎಂಎಫ್, ರೈತರ ಉಪಕಸುಬನ್ನೇ ಒಂದು ಉದ್ಯಮವನ್ನಾಗಿ ಪರಿವರ್ತಿಸಿದೆ. ಅಲ್ಲದೇ ಇಂದು ಹಳ್ಳಿಹಳ್ಳಿಗಳಲ್ಲೂ ಡೈರಿ ಸ್ಥಾಪಿಸುವ ಮೂಲಕ ಪ್ರತಿ ಮನೆಗೂ ಕ್ಷೀರ ತಲುಪಸುವ ಕೆಲಸವನ್ನು ಕೆಎಂಎಫ್ ಮಾಡ್ತಿದೆ.
ಹಾವನೂರು ವರದಿ ಜಾರಿ
ʻಹಿಂದುಳಿದ ವರ್ಗಗಳ ಬೈಬಲ್’, ದೇವರಾಜ ಅರಸು ಈ ವರದಿಯನ್ನು ಹಾಗಂತ ಬಣ್ಣಿಸಿದ್ದರು. ಹಿಂದುಳಿದ ವರ್ಗಗಳಿಗೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ 1972ರ ಆಗಸ್ಟ್‌ನಲ್ಲಿ ಎಲ್.ಜಿ. ಹಾವನೂರು ನೇತೃತ್ವದಲ್ಲಿ ಆಯೋಗ ರಚಿಸಲಾಯಿತು. ಆಳವಾಗಿ ಅಧ್ಯಯನ ನಡೆಸಿ, ಸೂಕ್ತ ಶಿಫಾರಸುಗಳೊಂದಿಗೆ 1975ರ ನವೆಂಬರ್‌ನಲ್ಲಿ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿತು. ಕೆಲವು ಮಾರ್ಪಾಡುಗಳೊಂದಿಗೆ 1977ರ ಫೆಬ್ರುವರಿಯಲ್ಲಿ ಅರಸು ನೇತೃತ್ವದ ಸರ್ಕಾರ ಈ ವರದಿಯನ್ನು ಜಾರಿಗೆ ತಂದಿತು.
ತುಳಿತಕ್ಕೊಳಗಾದವರ ಧ್ವನಿ ʻದಲಿತ ಸಂಘರ್ಷ ಸಮಿತಿʼ
ಶತಮಾನಗಳಿಂದ ತುಳಿತಕ್ಕೆ ಒಳಗಾದವರ ಕೊರಳ ದನಿಯಾಗಿ, ಎದೆಯುಬ್ಬಿಸಿ ನಿಲ್ಲುವ ಕಾಲಿಗೆ ಬಲವಾಗಿ ರೂಪುಗೊಂಡಿದ್ದೇ ಕರ್ನಾಟಕ ದಲಿತ ಸಂಘರ್ಷ ಸಮಿತಿ. ಬಿ. ಬಸವಲಿಂಗಪ್ಪ, ಬಿ.ಎಂ.ತಿಪ್ಪೇಸ್ವಾಮಿ, ಪ್ರೊ.ಬಿ. ಕೃಷ್ಣಪ್ಪ, ದೇವನೂರ ಮಹಾದೇವ, ಸಿದ್ದಲಿಂಗಯ್ಯ, ಕೋಟಗಾನಹಳ್ಳಿ ರಾಮಯ್ಯ, ಎನ್. ವೆಂಕಟೇಶ್ ಅವರ ಪ್ರೇರಣೆ ಇದರ ಹಿಂದಿತ್ತು. ನಾಡಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಕ ವಲಯದಲ್ಲಿ ಸಂಚಲನ ಮೂಡಿಸಿದ ಈ ಚಳವಳಿ, ದಲಿತರಲ್ಲಿ ಸ್ವಾಭಿಮಾನದ ಕಿಚ್ಚು ಹತ್ತಿಸಿ ಬದಲಾವಣೆಯ ಹರಿಕಾರನಾಯಿತು.
ಉಳುವವನೇ ಭೂಮಿಯ ಒಡೆಯನಾದ
ಕಾಗೋಡು ಚಳವಳಿಯ ಪರಿಣಾಮವಾಗಿ ಉಳುವವನೆ ಹೊಲದೊಡೆಯ ಆಶಯದ ಮೇರೆಗೆ ಜಾರಿಗೊಳಿಸಿದ ಈ ಶಾಸನ ಗೇಣಿದಾರರಿಗೆ ಭೂಮಿ, ಕೃಷಿ ಭೂಮಿಗೆ ಮಿತಿ ಹಾಕಿದ ಕ್ರಾಂತಿಕಾರಕ ಹೆಜ್ಜೆ. 1961ರ ಕಾಯ್ದೆಗೆ ಬಲವಾದ ತಿದ್ದುಪಡಿ ತಂದಿದ್ದು ದೇವರಾಜ ಅರಸರು. ಭೂಮಾಲೀಕರ ಬಳಿ ಇದ್ದ ಜಮೀನು, ಉಳುಮೆ ಮಾಡುತ್ತಿದ್ದವರಿಗೆ ದಕ್ಕುವಂತಾಗಿ ಕೃಷಿ ಕ್ಷೇತ್ರದಲ್ಲಿ ದೊಡ್ಡಮಟ್ಟದ ಬದಲಾವಣೆ ತಂದ ಕಾಯ್ದೆ ಇದು. ಬಳಿಕ ದೇಶವ್ಯಾಪಿ ಜಾರಿಗೊಳಿಸಲಾಯಿತು. ಕಳೆದ ವರ್ಷವಷ್ಟೇ ತೆರೆಗೆ ಬಂದಿದ್ದ ದರ್ಶನ್ ಅಭಿನಯದ ಕಾಟೇರಾ ಸಿನಿಮಾ ಇದಕ್ಕೆ ಕನ್ನಡಿ ಹಿಡಿದಿತ್ತು.
ʻಅಪ್ಪಿಕೋ ಚಳವಳಿ ಮತ್ತು ಸಾಲ ಸಮ್ಮೇಳನʼ
1983ರ ಸೆ.8 ರಂದು ಶಿರಸಿ ತಾಲ್ಲೂಕಿನ ಕೆಳಾಸೆ ಕುದ್ರಗೋಡ ಅರಣ್ಯದಲ್ಲಿ ಆರಂಭಗೊಂಡ ಅಪ್ಪಿಕೋ ಚಳವಳಿ ಮಲೆನಾಡು ಪೂರ್ತಿ ವ್ಯಾಪಿಸಿತು. ಸರ್ಕಾರ ಈ ಹೋರಾಟಕ್ಕೆ ಮಣಿದು ಅರಣ್ಯ ನೀತಿಯಲ್ಲಿ ಪರಿವರ್ತನೆ ಮಾಡಿದ್ದಲ್ಲದೇ, ಮರ ಕಡಿಯುವುದನ್ನು ನಿಷೇಧಿಸಿತು. ಇದರ ನಂತರ ರಾಷ್ಟ್ರೀಕರಣದ ಬಳಿಕವೂ ಬಡವರು ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಆಗುತ್ತಿರಲಿಲ್ಲ. ಕೇಂದ್ರದಲ್ಲಿ ಹಣಕಾಸು ರಾಜ್ಯ ಸಚಿವರಾಗಿದ್ದ ಬಿ. ಜನಾರ್ದನ ಪೂಜಾರಿ ನೇತೃತ್ವದಲ್ಲಿ 1983ರಲ್ಲಿ ದೇಶದಾದ್ಯಂತ ಸಾಲ ಮೇಳ ಆರಂಭಿಸಲಾಯಿತು.
ವಿಶ್ವ ಕನ್ನಡ ಸಮ್ಮೇಳನ
ಜಗತ್ತಿನಾದ್ಯಂತ ಹರಡಿರುವ ಕನ್ನಡಿಗರನ್ನು ಒಂದೇ ವೇದಿಕೆಗೆ ತಂದು, ಕನ್ನಡ ನಾಡು ನುಡಿಯ ಬಗ್ಗೆ ಚರ್ಚಿಸುವ ಆಶಯದೊಂದಿಗೆ ಆರಂಭಗೊಂಡಿದ್ದು ವಿಶ್ವ ಕನ್ನಡ ಸಮ್ಮೇಳನ. 1985ರಲ್ಲಿ ಮೊದಲ ಸಮ್ಮೇಳನ ಮೈಸೂರಿನಲ್ಲಿ ನಡೆಯಿತು.
ಮೊಟ್ಟ ಮೊದಲಿಗೆ ಕಂಪ್ಯೂಟರ್‌ನಲ್ಲಿ ಕನ್ನಡ
ಕಂಪ್ಯೂಟರ್ ಪ್ರವರ್ಧಮಾನಕ್ಕೆ ಬರುವ ಹೊತ್ತಿನಲ್ಲೇ ತಂತ್ರಜ್ಞ ಕೆ.ಪಿ.ರಾವ್ 1981ರಲ್ಲಿ ಸೇಡಿಯಾಪು ಕನ್ನಡ ತಂತ್ರಾಂಶ ಅಭಿವೃದ್ಧಿ ಪಡಿಸಿದರು. ಕನ್ನಡಕ್ಕೆ ಸಂಬಂಧಿಸಿದ ಮೊದಲ ತಂತ್ರಾಂಶ. 1998ರಲ್ಲಿ ಬರಹ ಕನ್ನಡ, 2001ರಲ್ಲಿ ಸರ್ಕಾರದ ನುಡಿ ತಂತ್ರಾಂಶ ಬಳಕೆಗೆ ಬಂತು.
ಕನ್ನಡ ಪ್ರಜ್ಞೆ ಬಡಿದೆಬ್ಬಿಸಿದ ಗೋಕಾಕ್ ಚಳವಳಿ
ಶಿಕ್ಷಣದಲ್ಲಿ ಕನ್ನಡದ ಸ್ಥಾನಮಾನ ಹೇಗಿರಬೇಕು ಎನ್ನುವುದನ್ನ ಅಧ್ಯಯನ ಮಾಡಿ ವಿ.ಕೃ.ಗೋಕಾಕ್ ನೇತೃತ್ವದ ಸಮಿತಿ ನೀಡಿದ್ದ ವರದಿ ಜಾರಿಗಾಗಿ ನಡೆದ ಹೋರಾಟ ಐತಿಹಾಸಿಕ. ಸಾಹಿತಿಗಳು, ಹೋರಾಟಗಾರರು ಆರಂಭಿಸಿದ ಈ ಚಳವಳಿ ವರನಟ ರಾಜ್‌ಕುಮಾರ್ ಪ್ರವೇಶದಿಂದ ಬಿರುಸು ಪಡೆದಿತ್ತು. ಸರ್ಕಾರ ಕನ್ನಡಿಗರ ಒಕ್ಕೊರಲ ಧ್ವನಿಗೆ ಮಣಿಯಲೇಬೇಕಾಯಿತು. ಭಾಷೆಯ ಉಳಿವಿಗಾಗಿ ಹೋರಾಡಬೇಕಾದ ಪ್ರಜ್ಞೆಯನ್ನು ಕನ್ನಡಿಗರಲ್ಲಿ ರೂಪಿಸಿದ್ದು ಗೋಕಾಕ್ ಚಳವಳಿ.
1989ರಲ್ಲಿ ರಂಗಾಯಣ ಸ್ಥಾಪನೆ
1989ರಲ್ಲಿ ಸ್ಥಾಪನೆಯಾದ ಬಿ.ವಿ ಕಾರಂತರ ಕನಸಿನ ಕೂಸಾದ ʻರಂಗಾಯಣʼವು ದಕ್ಷಿಣ ಭಾರತದ ಮೊದಲ ರಂಗತರಬೇತಿ ಶಾಲೆಯಾಗಿ ನೂರಾರು ನಾಟಕ ಪ್ರಯೋಗಗಳನ್ನ ಮಾಡಿದೆ.
ಶಿವಮೊಗ್ಗದಲ್ಲಿ ಬೆತ್ತಲೆ ಸೇವೆ ನಿಷೇಧ
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ಗ್ರಾಮದೇವತೆ ರೇಣುಕಾ ಎಲ್ಲಮ್ಮನ ಹೆಸರಿನಲ್ಲಿ ಹೆಣ್ಣು, ಗಂಡು ಇಬ್ಬರೂ ಮಾಡುತ್ತಿದ್ದ ಬೆತ್ತಲೆ ಸೇವೆ ಎಂಬ ಅನಿಷ್ಟ ಪದ್ದತಿ ವಿರುದ್ಧದ ಹೋರಾಟದ ಫಲವಾಗಿ ರಾಮಕೃಷ್ಣ ಹೆಗಡೆ ಸರ್ಕಾರವು ಚನ್ನವೀರಪ್ಪ ಆಯೋಗವನ್ನು ರಚಿಸಿ, 1987ರ ಫೆ.27ರಂದು ಬೆತ್ತಲೆ ಸೇವೆ ನಿಷೇಧಿಸಿತು. ಕರ್ನಾಟಕ ಮೌಢ್ಯ ನಿಷೇಧ ಕಾಯ್ದೆ-2017 ಕೂಡ ಬೆತ್ತಲೆ ಸೇವೆಯ ನಿಷೇಧವನ್ನ ಪುನರುಚ್ಛರಿಸಿದೆ.
ಬೆಂಗಳೂರು ಸೇರಿ ಜಿಲ್ಲೆಗಳ ವಿಭಜನೆ, ಬಿಬಿಎಂಪಿ ರಚನೆ
ರಾಜ್ಯ ಉದಯವಾದ ನಂತರ ಮೊದಲ ಬಾರಿಗೆ 1986ರಲ್ಲಿ ಬೆಂಗಳೂರು ಜಿಲ್ಲೆಯನ್ನ ಬೆಂಗ್ಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಾಗಿ ವಿಭಜಿಸಲಾಗಿತ್ತಯ. ನಂತರ 1997ರಲ್ಲಿ ಬಾಗಲಕೋಟೆ, ದಾವಣಗೆರೆ, ಕೊಪ್ಪಳ, ಗದಗ, ಹಾವೇರಿ ಚಾಮರಾಜನಗರ ಜಿಲ್ಲೆಗಳು ರಚನೆಯಾದವು. ಇದರೊಂದಿಗೆ ಅಭಿವೃದ್ಧಿ ಹಾದಿಯಲ್ಲಿರುವ ಬೆಂಗಳೂರಿನ ಆಡಳಿತ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ದೃಷ್ಟಿಯಿಂದ ನಗರದ ವ್ಯಾಪ್ತಿಯನ್ನ ವಿಸ್ತರಿಸಿ ಬೆಂಗಳೂರು ಬೃಹತ್ ಹಾನಗರ ಪಾಲಿಕೆ ಎಂದು 2007ರಲ್ಲಿ ಮರುನಾಮಕರಣ ಮಾಡಲಾಯಿತು.
ಕರ್ನಾಟಕ ರತ್ನ ಗೌರವ
ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯ ಸೇವೆ ಸಲ್ಲಿಸಿದವರು, ಸಾಧಕರನ್ನ ಗುರುತಿಸಿ ಗೌರವಿಸುವ ಉದ್ದೇಶದಿಂದ ಎಸ್. ಬಂಗಾರಪ್ಪನವರ ನೇತೃತ್ವದ ಸರ್ಕಾರ 1992ರಲ್ಲಿ ಕರ್ನಾಟಕ ರತ್ನ ರಂಬ ರಾಜ್ಯದ ಅತ್ಯುನ್ನತ ನಾಗರಿಕ ಪುರಸ್ಕಾರನೀಡುವ ನಿರ್ಧಾರ ಕೈಗೊಂಡರು.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ
ನಿರಂತರ ಹೋರಾಟದ ಫಲವಾಗಿ 2008ರ ನವೆಂಬರ್ 1ರಂದು ಕೇಂದ್ರ ಸರ್ಕಾರ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಪ್ರಕಟ ಮಾಡಿತು.
ಸಾಂಸ್ಕೃತಿಕ ರಾಯಭಾರಿ ಬಸವಣ್ಣ
12ನೇ ಶತಮಾನದಲ್ಲೇ ಸಮಾನತೆಯ ಸಂದೇಶದೊಂದಿಗೆ ವಿವಿಧ ಜಾತಿ, ವೃತ್ತಿಗಳ ಜನರನ್ನ ಸಂಘಟಿಸಿ ಶರಣ ಚಳವಳಿ ರೂಪಿಸಿದವರು ಬಸವಣ್ಣ. ಸಾಮಾಜಿಕ ನ್ಯಾಯದ ಆಶಯಗಳನ್ನ ತಮ್ಮ ವಚನ ಹಾಗೂ ಕ್ರಿಯೆಗಳ ಮೂಲಕ ನಾಡಿನಲ್ಲಿ ಹರಡಿದವರು. ಜಾಗತಿಕ ಮಹತ್ವದ ಸಾಂಸ್ಕೃತಿಕ ಚಳವಳಿಯ ಮುಂದಾಳಾಗಿದ್ದ ಬಸೌಣ್ಣ ಅವರನ್ನು ಹಾಲಿ ರಾಜ್ಯ ಸರ್ಕಾರ 2024ರಲ್ಲಿ ʻಕರ್ನಾಟಕದ ಸಾಂಸೃತಿಕ ರಾಯಭಾರಿʼ ಎಂದು ಘೋಷಣೆ ಮಾಡಿತು.
ಕಾಂತಾರಾ – ಕೆಜಿಎಫ್ ಕಮಾಲ್
20ರ ದಶಕದ ಮಧ್ಯೆ ಕೆಲ ವರ್ಷಗಳಲ್ಲಿ ಒಳ್ಳೆಯ ಸಿನಿಮಾಗಳು ಕಡಿಮೆಯಾಗಿದ್ದವು. ಒಂದಿಷ್ಟು ಥಿಯೇಟರ್‌ಗಳೂ ಬಂದ್ ಆದವು. ಆದ್ರೆ 2022ರಲ್ಲಿ ತೆರೆ ಕಂಡ ಕೆಜಿಎಫ್, ಕಾಂತಾರಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದವು. ಕನ್ನಡ ಚಿತ್ರರಂಗದತ್ತ ಬಾಲಿವುಡ್ ಸಹ ತಿರುಗಿನೋಡುವಂತೆ ಈ ಸಿನಿಮಾಗಳು ಹೊಸ ದಾಖಲೆ ಸೃಷ್ಟಿಸಿದವು.

