ಹಾಸನ: ಒಂದು ವರ್ಷಕೊಮ್ಮೆ ಬಾಗಿಲು ತೆಗೆಯುವ ಮತ್ತು ಪವಾಡ ಮಹಿಮೆಗಳಿಂದ ಮನೆಮಾತಾಗಿರುವ ಹಾಸನಾಂಬೆಯ ಗರ್ಭಗುಡಿಯ ಬಾಗಿಲನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗುರುವಾರ ಮಧ್ಯಾಹ್ನ ತೆರೆಯಲಾಗಿದೆ.
ನಗರದ ಹೃದಯ ಭಾಗದಲ್ಲಿರುವ ದೇವಾಲಯದ ಬಾಗಿಲನ್ನು ಇಂದು ಮಧ್ಯಾಹ್ನ ಶಾಸ್ತ್ರೋಕ್ತವಾಗಿ ತೆರೆಯಲಾಗಿದ್ದು, ಸಿದ್ದೇಶ್ವರ ಜಾತ್ರೆ ಹಾಗೂ ಹಾಸನಾಂಬೆಯ ದರ್ಶನೋತ್ಸವದಿಂದ ಹಾಸನದಲ್ಲಿ ಈಗ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
Advertisement
ಹಾಸನಾಂಬೆ, ಹಾಸನಮ್ಮ, ಹಾಸನದಮ್ಮ, ಹಸನ್‍ಬಿ ಎಂಬ ಹಲವಾರು ಹೆಸರುಗಳಿಂದ ಕರೆಯಲ್ಪಡುವ ದೇವಾಲಯವನ್ನು ಹಿಂದೂ ಪಂಚಾಗದ ಆಶ್ವೀಜ ಮಾಸದ ಹುಣ್ಣಿಮೆಯ ನಂತರದ ಮೊದಲ ಗುರುವಾರದಂದು ಗರ್ಭಗುಡಿಯ ಬಾಗಿಲು ತೆಗೆಯುವುದು ವಾಡಿಕೆ. ಅದರಂತೆ ಮಧ್ಯಾಹ್ನ 12:32ರಲ್ಲಿ ಆರ್ಧ ನಕ್ಷತ್ರದ ಸಂದರ್ಭದಲ್ಲಿ ತಳವಾರ ವಂಶಸ್ಥರು ಬನ್ನಿ ಎಲೆಗಳು ಮತ್ತು ಬಾಳೆಕಂದನ್ನು ಕತ್ತರಿಸಿದ ಬಳಿಕ ಗರ್ಭಗುಡಿಯ ಬಾಗಿಲು ತೆರೆಯಲಾಗಿದೆ. ಪ್ರತಿವರ್ಷದಂತೆಯೂ ಈ ವರ್ಷವೂ ಕಳೆದ ವರ್ಷ ಹಚ್ಚಿರುವ ದೀಪ ಹಾಗೇ ಉರಿಯುತಿತ್ತು.
Advertisement
ಪೌರಾಣಿಕ ಹಿನ್ನಲೆ ಏನು?
ಉತ್ತರದ ಕಾಶಿಯಿಂದ ದಕ್ಷಿಣದ ಕಡೆಗೆ ವಾಯುವಿಹಾರಕ್ಕೆ ಹೊರಟ ಸಪ್ತಮಾತೃಕೆಯರು ಹಾಸನದ ಸೌಂದರ್ಯ ನೋಡಿ ಇಲ್ಲಿಯೇ ನೆಲೆಸುತ್ತಾರೆ. ಇಲ್ಲಿಯ ಪಾಳೇಗಾರನಾಗಿದ್ದ ಕೃಷ್ಣಪ್ಪನಾಯಕ ಮಾತೆಯರ ಆದೇಶದಂತೆ ದೇವಾಲಯ ಮತ್ತು ಕಲ್ಯಾಣಿಯನ್ನು ನಿರ್ಮಿಸಿದ ಎಂದು ಕಥೆ ಹೇಳುತ್ತದೆ.
Advertisement
ಶಾಸ್ತ್ರೋಕ್ತವಾಗಿ ಪಂಚಾಂಗದ ಪ್ರಕಾರ ಕನಿಷ್ಟ 9 ದಿನ ಮತ್ತು ಗರಿಷ್ಟ 14 ದಿನಗಳು ಮಾತ್ರ ದೇವಿಯ ದರ್ಶನದ ಭಾಗ್ಯ ಲಭಿಸುತ್ತದೆ. ಇದರಿಂದ ದರ್ಶನಕ್ಕಾಗಿ ಭಕ್ತರು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಈ ಬಾರಿಯೂ ಜಿಲ್ಲಾಡಳಿತದ ವತಿಯಿಂದ ಭಕ್ತರಿಗಾಗಿ ಸರದಿ ಸಾಲುಗಳ ವ್ಯವಸ್ಥೆ, ಪ್ರಸಾದ, ಗಣ್ಯರ ದರ್ಶನ, ಕುಡಿಯುವ ನೀರಿನ ಸೌಲಭ್ಯ, ಹೀಗೆ ಹಲವಾರು ಸಿದ್ಧತೆಗಳನ್ನು ಮಾಡಲಾಗಿದೆ.
Advertisement
ಕಳೆದ ಬಾರಿ ಅಂದಾಜು 10 ಲಕ್ಷ ಮಂದಿ ದರ್ಶನ ಪಡೆದಿದ್ದರು. ಈ ಬಾರಿ ದರ್ಶನ ಕೇವಲ 9 ದಿನಗಳಷ್ಟೇ ಆಗಿದ್ದು, ನೈವೇದ್ಯ, ಅಭಿಷೇಕ ಹೊರತುಪಡಿಸಿದಂತೆ 24 ಗಂಟೆಯ ದರ್ಶನ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ.
ಹಾಸನಾಂಬೆ ಹಲವು ಪವಾಡ ಸದೃಶ ಮಹಿಮೆಗಳನ್ನು ಮೈಗೂಡಿಸಿಕೊಂಡಿದ್ದಾಳೆ. ಇಷ್ಟಾರ್ಥವನ್ನು ಸಿದ್ಧಿಸುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ವರ್ಷದ ಹಿಂದೆ ಬಾಗಿಲು ಮುಚ್ಚುವ ವೇಳೆ ಹಚ್ಚಿಟ್ಟ ಹಣತೆ ಹಾಗೆಯೇ ಉರಿಯಲಿದೆ. ದೇವಿಯ ಮಹಿಮೆ ಅಪಾರ ಎನ್ನುವುದು ಅಸಂಖ್ಯಾತ ಭಕ್ತರ ನಂಬಿಕೆ. ಪರಂಪರೆ ಈಗಲೂ ನಡೆದುಕೊಂಡು ಬಂದಿರುವುದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಭಕ್ತಸಾಗರವೇ ಹರಿದು ಬರುವ ಸಾಧ್ಯತೆ ಇದೆ.
ದೇವಿಯ ದರ್ಶನಕ್ಕೆ ಬರುವ ಭಕ್ತರಿಗಾಗಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವಾಗ ಮಳೆ-ಬಿಸಿಲಿನ ತಾಪ ತಪ್ಪಸಿಕೊಳ್ಳಲು ನೆರಳಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಉಳಿದಂತೆ ಲಾಡು-ಪ್ರಸಾದಕ್ಕೂ ವ್ಯವಸ್ಥೆ ಮಾಡಲಾಗಿದೆ.
1 ಸಾವಿರ ರೂ. ಶುಲ್ಕ: ಶೀಘ್ರ ದರ್ಶನಕ್ಕೆ 300 ಮತ್ತು ಗಣ್ಯರು ಪ್ರವೇಶದ್ವಾರದಲ್ಲೇ ತೆರಳಿ ನೇರ ದರ್ಶನ ಪಡೆಯಲು ಇದೇ ಮೊದಲ ಬಾರಿ 1 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ಈ ಬಾರಿ 9 ದಿನಗಳ ದರ್ಶನ ಇರುವುದರಿಂದ ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅಪರಾಧ ಪತ್ತೆಗಾಗಿ ಸಿಸಿ ಕ್ಯಾಮೆರಾ ಅಳವಡಿಕೆ, ವೈದ್ಯಕೀಯ ವ್ಯವಸ್ಥೆ ಜೊತೆಗೆ ಒಟ್ಟು ಮೂರು ಶಿಫ್ಟ್ ಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಕ್ಟೋಬರ್ 21 ರ ಮಧ್ಯಾಹ್ನ ಅಂದ್ರೆ ಬಲಿಪಾಡ್ಯಮಿಯ ಮಾರನೇ ದಿನ ಹಾಸನಾಂಬೆ ಬಾಗಿಲು ಮುಚ್ಚಲಿದೆ. ನೂಕು ನುಗ್ಗಲು ತಡೆಯುವ ಉದ್ದೇಶದಿಂದ ಅಂದೂ ಸಹ ಭಕ್ತರ ದರ್ಶನವನ್ನು ನಿರ್ಬಂಧಿಸಲಾಗಿದೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಾತನಾಡಿ, ಆಶ್ವೀಜ ಮಾಸದ ಮೊದಲ ಗುರುವಾರದಂದು ಆರಂಭವಾಗುವ ದರ್ಶನ ಬಲಿಪಾಡ್ಯಮಿಯ ಮಾರನೆ ದಿನ ಅಂತಿಮವಾಗಲಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಗಣ್ಯರಾದಿಯಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಸದ್ಯ ಅಧಿದೇವತೆ ಹಾಸನಾಂಬೆಯ ಮೊದಲ ದಿನದ ದರ್ಶನ ಮುಗಿದಿದ್ದು, ಶುಕ್ರವಾರ ಮುಂಜಾನೆ 5 ಗಂಟೆಯಿಂದ ವಿಶೇಷ ಪೂಜೆ ಅಲಂಕಾರದೊಂದಿಗೆ ದೇವಿಯ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಇದರೊಂದಿಗೆ ದೇಶದಲ್ಲಿ ಸುಖಃ ಶಾಂತಿ ನೆಲೆಸಲಿ ಎಂಬುದು ನಮ್ಮ ಆಶಯ ಎಂದು ತಿಳಿಸಿದರು.
ಮೊದಲ ದಿನ ಪಶುಸಂಗೋಪನಾ ಸಚಿವ ಎ ಮಂಜು, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಇದನ್ನೂ ಓದಿ: ಮೋದಿಗೆ ಗಂಡಾಂತರ ಕಾದಿದೆಯಂತೆ, ಎಚ್.ಡಿ.ಕೆ ಕಿಂಗ್ ಮೇಕರ್ ಆಗ್ತಾರಂತೆ: ಬ್ರಹ್ಮಾಂಡ ಗುರೂಜಿ ಭವಿಷ್ಯ