ದಾವಣಗೆರೆ: ಗಾಳಿ ಮಳೆಯಿಂದಾಗಿ ಹಳೆಯ ಆಲದ ಮರ ಪುರಾತನ ಗುಡಿಯ ಮೇಲೆ ಬಿದ್ದು, ದೇಗುಲದ ಮೇಲ್ಛಾವಣಿಗೆ ಧಕ್ಕೆಯಾದ ಘಟನೆ ತಾಲೂಕಿನ ಅಣಜಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಅಣಜಿ ಗ್ರಾಮಕ್ಕೆ ಹೊಂದಿಕೊಂಡಿರುವ 2-3 ಶತಮಾನಗಳಷ್ಟು ಹಳೆಯದಾದ ಕೆರೆ ಹೊನ್ನಮ್ಮ ದೇವಿ ದೇವಸ್ಥಾನದ ಮೇಲೆ ದೈತ್ಯ ಆಲದ ಮರ ಉರುಳಿ ಬಿದ್ದಿದೆ. ಅಣಜಿಯ ಕೆರೆ ಹೊನ್ನಮ್ಮ ದೇವಿ ದೇಗುವ ಈ ಭಾಗದಲ್ಲಿ ಪ್ರಸಿದ್ಧವಾಗಿದ್ದು, ಇಲ್ಲಿ ನಡೆಯುವ ಜಾತ್ರೆಗೆ ಸಾವಿರಾರು ಮಂದಿ ಸೇರುತ್ತಾರೆ. ಒಂದು ಭಾಗದಲ್ಲಿ ಕೆರೆ ಇದ್ದರೆ ಮತ್ತೊಂದು ಭಾಗದಲ್ಲಿ ಈ ಗುಡಿ ಇದೆ. ಆದ್ದರಿಂದ ಈ ಗುಡಿ ಖ್ಯಾತಿ ಪಡೆದುಕೊಂಡಿದೆ.
Advertisement
Advertisement
ಇದರ ಜೊತೆಗೆ ಸುಮಾರು 130 ವರ್ಷಗಳ ಇತಿಹಾಸವಿದ್ದ ಆಲದ ಮರ, ದೇಗುಲಕ್ಕೆ ಮತ್ತಷ್ಟು ಕಳೆ ತಂದಿತ್ತು. ದೈತ್ಯ ಆಲದ ಮರ ಸತತ ಮಳೆಯಿಂದಾಗಿ ಹಾಗೂ ಹಳೆಯ ಮರವಾಗಿದ್ದರಿಂದ ಅದರ ಒಳಗೊಳಗೆ ನೀರು ತುಂಬಿತ್ತು.
Advertisement
ಈ ಮರದ ಮಧ್ಯೆ ಇರುವ ಪೊಟರೆಗಳಲ್ಲಿ ನೀರು ನಿಂತು ಬೇರುಗಳು ಹಾಳಾಗಿದ್ದವು. ಹೀಗಾಗಿ ಗಾಳಿ ಬೀಸಿದಾಗ ಮರ ವಾಲುತ್ತಲೇ ಇತ್ತು. ಸದ್ಯ ಈ ಇತಿಹಾಸವುಳ್ಳ ಆಲದ ಮರ ಶನಿವಾರ ಸುರಿದ ಗಾಳಿ, ಮಳೆಗೆ ಧರೆಗುರುಳಿದೆ. ಪರಿಣಾಮ ಅದರ ಪಕ್ಕದಲ್ಲಿದ್ದ ದೇವಸ್ಥಾನ ಜಖಂಗೊಂಡಿದೆ. ದೇವಸ್ಥಾನದ ಮೇಲ್ಛಾವಣಿ ಮೇಲೆ ಮರದ ಕೊಂಬೆಗಳು ಬಿದ್ದು ಹಾನಿಯಾಗಿದೆ.