ಚಿತ್ರದುರ್ಗ: ಹಿರಿಯೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಪಾಲಿಗೆ ರಾಜಕೀಯವಾಗಿ ಲಕ್ಕಿ ಎನ್ನಿಸಿದೆ. ಯಾಕಂದರೆ ಇಲ್ಲಿ ಗೆದ್ದ ಪಕ್ಷ ರಾಜ್ಯದಲ್ಲಿ ಅಧಿಕಾರ ನಡೆಸುತ್ತದೆ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ.
ಪ್ರತಿ ಬಾರಿ ನಡೆಯುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಯ ಪಕ್ಷ, ಕರ್ನಾಟಕ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಅಲ್ಲದೆ ಕಳೆದ ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಡಿ. ಸುಧಾಕರ್ ಶಾಸಕರಾಗಿದ್ದು, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಳ್ವಿಕೆ ನಡೆಸಿತ್ತು.
Advertisement
ಈ ಬಾರಿ ನಡೆದ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮ ಶ್ರೀನಿವಾಸ್ ಜಯಭೇರಿ ಬಾರಿಸಿದ್ದರು. ಹೀಗಾಗಿ ಬಿಜೆಪಿ ಸರ್ಕಾರದ ಆಳ್ವಿಕೆ ಖಚಿತ ಎನ್ನುವಷ್ಟರಲ್ಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಮೈತ್ರಿ ಸರ್ಕಾರ ಆಡಳಿತ ನಡೆಸುವ ಮೂಲಕ ಜನರ ನಂಬಿಕೆಗೆ ಬ್ರೇಕ್ ಹಾಕಿತ್ತು. ಆದರೆ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳಿಂದಾಗಿ ಮತ್ತೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗುವ ಮೂಲಕ ಹಳೆಯ ಮಾತು ಸತ್ಯವೆನಿಸಿದೆ.
Advertisement
Advertisement
ಆಡಳಿತ ನಡೆಸುತ್ತಿರುವ ಸರ್ಕಾರದ ಪಾಲಿಗೆ ಹಿರಿಯೂರು ವಿಧಾನಸಭಾ ಕ್ಷೇತ್ರ ಮತ್ತೆ ಲಕ್ಕಿ ಅನ್ನಿಸಿದೆ. ಹೀಗಾಗಿ ಈ ಬಾರಿ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ಸಹ ಖಚಿತವೆಂಬ ಮಾತುಗಳು ಸಹ ಕೇಳಿಬಂದಿದೆ.
Advertisement
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಶ್ರೀರಾಮುಲು, ಹೊಸದುರ್ಗದ ಗೂಳಿಹಟ್ಟಿ ಡಿ.ಶೇಖರ್, ಹೊಳಲ್ಕೆರೆಯ ಚಂದ್ರಪ್ಪ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ತಿಪ್ಪಾರೆಡ್ಡಿ ಸೇರಿದಂತೆ ಐದು ಜನ ಶಾಸಕರು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆದ್ದರಿಂದ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದ್ದಾರೆಂಬ ಚರ್ಚೆಗಳು ಶುರುವಾಗಿವೆ. ಜಾತಿ ಲೆಕ್ಕಾಚಾರ ಹಾಗೂ ಮಹಿಳಾ ಕೋಟಾದಡಿಯಲ್ಲಿ ಅಂತಿಮವಾಗಿ ಪೂರ್ಣಿಮಾಗೆ ಸಚಿವ ಸ್ಥಾನ ಗ್ಯಾರಂಟಿ ಎಂಬ ಮಾತುಗಳು ಹಿರಿಯೂರು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.