ಬೆಂಗಳೂರು: ವಿರುದ್ಧ ದಿಕ್ಕಿನಲ್ಲಿ ಬಂದ ಟ್ರಕ್ ಬಸ್ಸಿನ ಡೀಸೆಲ್ ಟ್ಯಾಂಕ್‌ಗೆ (Diesel Tank) ಗುದ್ದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಸೀಬರ್ಡ್ ಬಸ್ (Seabird) ಮಾಲೀಕ ನಾಗರಾಜು ತಿಳಿಸಿದ್ದಾರೆ.
ಗೊರ್ಲತ್ತು ಗ್ರಾಮದ ಬಳಿ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಅವರು, ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸ್ಲೀಪರ್ ಬಸ್ಸಿನಲ್ಲಿ 29 ಜನ ಪ್ರಯಾಣಿಸುತ್ತಿದ್ದರು. ಟ್ರಕ್ ವಿರುದ್ಧ ದಿಕ್ಕಿನಿಂದ ಬಂದು ಡೀಸೆಲ್ ಟ್ಯಾಂಕ್ ಬಳಿ ಗುದ್ದಿದೆ. ಗುದ್ದಿದ ರಭಸಕ್ಕೆ ಮೊದಲು ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿತು. ನಂತರ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವಿವರಿಸಿದರು.
ಪ್ರಯಾಣಿಕರ ಸುರಕ್ಷೆಗೆ ಸಂಬಂಧಿಸಿದ ಎಲ್ಲಾ ಮಾನದಂಡಗಳನ್ನು ಬಸ್ಸು ಹೊಂದಿತ್ತು. ಎರಡೂ ತುರ್ತು ನಿರ್ಗಮನ ದ್ವಾರವೂ ಇತ್ತು ಎಂದು ಹೇಳಿದರು. ಇದನ್ನೂ ಓದಿ: ಬಸ್ಸಿನಲ್ಲಿದ್ದ 8 ಪ್ರಯಾಣಿಕರು, ಲಾರಿ ಡ್ರೈವರ್ ಸೇರಿ 9 ಮಂದಿ ಸಾವು: ಐಜಿಪಿ ರವಿಕಾಂತೇಗೌಡ
ಸಾಧಾರಣವಾಗಿ ಸ್ಲೀಪರ್ ಕೋಚ್ ಬಸ್ಸಿನಲ್ಲಿ ಪ್ಲೈವುಡ್‌ಗಳನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಮಲಗಲು ಕುಶನ್ ಸಹ ಇರುತ್ತದೆ. ಬೆಂಕಿ ಬಿದ್ದ ತಕ್ಷಣವೇ ಕುಶನ್ ಮತ್ತು ಪ್ಲೈವುಡ್ ಇರುವ ಕಾರಣ ಬಹಳ ಬೇಗ ಬೆಂಕಿ ಹರಡುತ್ತದೆ.

