– ಪಂಚಪೀಠದ ಶ್ರೀಗಳಿಂದ ಶಿವಾಚಾರ್ಯ ಸ್ವಾಮೀಜಿಗೆ ಒತ್ತಡ
– ಜೆಡಿಎಸ್ ಮುಖಂಡ ಕೋನರೆಡ್ಡಿ ಆರೋಪ
ಹಾವೇರಿ: ರಟ್ಟೀಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದು, ಉಪ ಸಮರದ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಈ ಕುರಿತು ಸ್ವತಃ ಸ್ವಾಮೀಜಿಗಳೇ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದು, ನಾಮಪತ್ರ ಹಿಂಪಡೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಹಿರಿಯ ಮಠಾಧೀಶರ ಆದೇಶದಿಂದ ನಿರ್ಧಾರ ಬದಲಿಸಿದ್ದೇನೆ. ಸಾಧ್ಯವಾದರೆ ಬುಧವಾರವೇ ನಾಮಪತ್ರ ಹಿಂಪಡೆಯುತ್ತೇನೆ. ಒಂದು ವೇಳೆ ಸಾಧ್ಯವಾಗದಿದ್ದರೆ ಗುರುವಾರ ನಾಮಪತ್ರ ವಾಪಸ್ ಪಡೆಯುವುದು ಖಚಿತ. ಯಾರೇ ಜನಪ್ರತಿನಿಧಿ ಆಯ್ಕೆಯಾಗಿ ಬಂದರೂ ತಾಲೂಕಿನ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಕ್ಕೆ ತರುವ ಅಜೆಂಡಾಗೆ ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ವಾಪಸ್ ಪಡೆಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಕೆಲ ದಿನಗಳ ಹಿಂದೆ ಹಿರೇಕೆರೂರು ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಿದ್ದರು. ಹಿರೇಕೆರೂರು ಕ್ಷೇತ್ರದ ರಾಜಕಾರಣ ಅಪಮೌಲ್ಯ ಆಗಿದೆ. ಕ್ಷೇತ್ರದ ರಾಜಕೀಯ ವ್ಯವಸ್ಥೆ ಸರಿಪಡಿಸಲು ಚುನಾವಣೆಗೆ ಸ್ಪರ್ಧಿಸಿ ಎಂದು ಒತ್ತಡ ಹಾಕಿದ್ದರು. ಕಳೆದ ಎರಡು ದಿನಗಳ ಹಿಂದೆ ಚುನಾವಣೆಗೆ ನಿಲ್ಲದಿರಲು ನಿರ್ಧರಿಸಿದ್ದ ಸ್ವಾಮೀಜಿ, ರಾತ್ರೋರಾತ್ರಿ ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರು. ಅದರಂತೆ ಸೋಮವಾರ ಜೆಡಿಎಸ್ ಅಭ್ಯರ್ಥಿಯಾಗಿ ಹಿರೇಕೆರೂರು ಕ್ಷೇತ್ರದಿಂದ ನಾಮಪತ್ರ ಸಹ ಸಲ್ಲಿಸಿದ್ದರು.
Advertisement
ಚುನಾವಣೆಗೆ ನಿಲ್ಲಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಬೇಡಿಕೊಂಡಿದ್ದರು. ಬಿ.ಸಿ.ಪಾಟೀಲ್ ಅವರನ್ನು ಸೋಲಿಸಲು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಾಸ್ಟರ್ ಪ್ಲಾನ್ ಮಾಡಿದ್ದರು. ಅಲ್ಲದೆ ವೀರಶೈವ ಲಿಂಗಾಯತರ ಮತ ಒಡೆಯಲು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಈ ರಣತಂತ್ರ ರೂಪಿಸಿದ್ದಾರೆ ಎಂದು ಭಕ್ತರು ಸಹ ಸ್ವಾಮೀಜಿ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದರು.
Advertisement
ಪಂಚಪೀಠದ ಶ್ರೀಗಳಿಂದ ಒತ್ತಡ:
ಇದಕ್ಕೂ ಮುನ್ನ ರಾಣೆಬೆನ್ನೂರಿನಲ್ಲಿ ಮಾತನಾಡಿದ್ದ ಜೆಡಿಎಸ್ ಮುಖಂಡ ಎನ್.ಎಚ್.ಕೋನರೆಡ್ಡಿ, ಧರ್ಮದಲ್ಲಿ ರಾಜಕಾರಣ ಬೇಡ ಎಂದು ಪಂಚಪೀಠದ ಜಗದ್ಗುರುಗಳಿಂದ ಶಿವಾಚಾರ್ಯ ಸ್ವಾಮೀಜಿಗೆ ಒತ್ತಡ ಬಂದಿದೆ. ಅಲ್ಲದೆ ಮುಖ್ಯಮಂತ್ರಿಗಳ ಪುತ್ರ ಬಿ.ವೈ.ರಾಘವೇಂದ್ರ ಅವರು ಸಹ ಸ್ವಾಮೀಜಿ ಮೇಲೆ ಒತ್ತಡ ಹೇರಿದ್ದಾರೆ. ಹೀಗಾಗಿ ಸ್ವಾಮೀಜಿಗಳು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಹೇಳಿದ್ದರು.
ಈ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಹ ಸ್ವಾಮೀಜಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ನಿಮಗೆ ಮಾನಸಿಕವಾಗಿ ತೊಂದರೆಯಾಗಬಾರದು. ಧರ್ಮದಲ್ಲಿ ರಾಜಕಾರಣವನ್ನು ಜೆಡಿಎಸ್ ಬಯಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಇದು ಕುಮಾರಸ್ವಾಮಿ ಅವರ ನಂಬಿಕೆ ಆಗಿದೆ. ಹೀಗಾಗಿ ಸ್ವಾಮೀಜಿಗೆ ನೀವು ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರು. ಇದಕ್ಕೆ ನಮ್ಮ ಪಕ್ಷ ಯಾವುದೇ ರೀತಿ ವಿರೋಧ ವ್ಯಕ್ತಪಡಿಸುವುದಿಲ್ಲ ಅಂತ ತಿಳಿಸಿದ್ದರು ಎಂದು ಮಾಹಿತಿ ನೀಡಿದ್ದರು.
ಸ್ವಾಮೀಜಿಗಳು ಸ್ಪರ್ಧಿಸುತ್ತಿರುವುದರಿಂದ ಬಿಜೆಪಿಗೆ ಸೋಲಿನ ಭೀತಿ ಇದೆಯೇನೋ, ಅದೇ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ. ಸ್ವಾಮೀಜಿ ನಿರ್ಧಾರಕ್ಕೆ ನಮ್ಮ ಪಕ್ಷ ಬದ್ಧ. ಇದೀಗ ನಾನು ರಟ್ಟಿಹಳ್ಳಿಗೆ ತೆರಳಿ ಚುನಾವಣೆ ಸಿದ್ಧತೆ ಮಾಡಿ ಬಂದಿದ್ದೇನೆ. ಈ ಕುರಿತು ಅಲ್ಲಿನ ಭಕ್ತರ ಬಳಿ ಚರ್ಚಿಸಿ ಬಂದಿದ್ದೇನೆ ಎಂದಿದ್ದರು.
ರಾಜಕೀಯ ಪ್ರವೇಶದ ಕುರಿತು ನಾಮಪತ್ರ ಸಲ್ಲಿಸಿದ ದಿನವೇ ಸ್ವಾಮೀಜಿ ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿ ಆಗಬಹುದಾದರೆ, ನಾನ್ಯಾಕೆ ಸ್ಪರ್ಧಿಸಬಾರದು ಎಂದು ಪ್ರಶ್ನಿಸಿದ್ದಾರೆ. ಅದನ್ನು ನಾವು ಗೌರವಿಸುತ್ತೇವೆ. ಆದರೆ ನಮ್ಮ ಪಕ್ಷದಿಂದ ಒತ್ತಡ ಹಾಕುವುದಿಲ್ಲ ಎಂದು ತಿಳಿಸಿದ್ದರು.
ನಮ್ಮ ಪಕ್ಷದಿಂದ ಬೇರೆಯವರಿಗೆ ಟಿಕೆಟ್ ಫೈನಲ್ ಆಗಿತ್ತು. ಆದರೆ ಮಧ್ಯರಾತ್ರಿ ಸ್ವಾಮೀಜಿ ನಿಲ್ಲೋದು ಗೊತ್ತಾಯಿತು. ಜನರು ಸಹ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ನಾವು ಅಭ್ಯರ್ಥಿ ಬದಲಾಯಿಸಿದೆವು. ಅವರು ನಿಲ್ಲಲು ಬಯಸಿದ್ದಾರೆ, ನಾವು ಬೆಂಬಲಿಸುತ್ತೇವೆ. ಆದರೆ ಅವರಿಗೆ ಏನೂ ತೊಂದರೆಯಾಗಬಾರದು, ಅದೇ ನಮ್ಮ ಕಾಳಜಿ ಎಂದಿದ್ದರು.