ಪಾಟ್ನಾ: ದೇಶದಲ್ಲಿ ಹೆಚ್ಚುತ್ತಿರುವ ಕೋಮು ಗಲಭೆಗಳ ನಡುವೆಯೂ ಬಿಹಾರದ ಒಂದು ಗ್ರಾಮದಲ್ಲಿ ಮುಸ್ಲಿಂರು ಇಲ್ಲದಿರುವ ಮಸೀದಿಯಲ್ಲಿ ಹಿಂದೂಗಳು ನಮಾಜ್ ಮಾಡುತ್ತಿದ್ದಾರೆ.
ಬಿಹಾರದ ಮಾಧಿ ಎಂಬ ಗ್ರಾಮದಲ್ಲಿ ಸುಮಾರು 200 ವರ್ಷಕ್ಕೂ ಹಳೆಯ ಮಸೀದಿಯನ್ನು ಹಿಂದೂಗಳೇ ನಿರ್ವಹಣೆ ಮಾಡುತ್ತಿದ್ದಾರೆ. ಈ ಹಳ್ಳಿಯಲ್ಲಿ ಬಹಳ ವರ್ಷಗಳ ಹಿಂದೆ ಮುಸ್ಲಿಂ ಸಮುದಾಯದವರು ವಾಸವಿದ್ದರು. ಆದರೆ ಕಾಲ ಕಳೆದಂತೆ ಮುಸ್ಲಿಂರು ಆ ಗ್ರಾಮದಿಂದ ವಲಸೆ ಹೋದರು.
ಮುಸ್ಲಿಂ ಸಮುದಾಯದ ಜನರ ವಲಸೆ ಬಳಿಕ ಗ್ರಾಮದ ಮಸೀದಿಯಲ್ಲಿ ನಮಾಜ್ ಮಾಡುವವರೇ ಇರಲಿಲ್ಲ. ಕೆಲ ಕಾಲ ಹಾಗೇ ಇದ್ದ ಮಸೀದಿಯನ್ನು ಹಿಂದೂಗಳೇ ನಿರ್ವಹಣೆ ಮಾಡಲು ತೀರ್ಮಾನ ಮಾಡಿದ್ದಾರೆ. ಅದರಂತೆ ದಿನ ಮಸೀದಿಯನ್ನು ಸ್ವಚ್ಛಗೊಳಿಸಿ, ಬೆಳಗ್ಗೆ ಮತ್ತು ಸಂಜೆ ನಮಾಜ್ ಮಾಡುವ ವೇಳೆ ಮೊಬೈಲ್ ನಲ್ಲಿಯ ಅಜಾನ್‍ನನ್ನು ಹಾಕುತ್ತಾರೆ. ಹಿಂದೂಗಳು ತಮಗೆ ಕಷ್ಟ ಬಂದರೆ ಕಾಪಾಡು ಎಂದು ಮಸೀದಿಯಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಗ್ರಾಮಸ್ಥರು, ನಮಗೆ ನಮಾಜ್ ವೇಳೆ ಅಜಾನ್ ಹೇಳಲು ಗೊತ್ತಿಲ್ಲ. ಅದ್ದರಿಂದ ದಿನ ಬೆಳಗ್ಗೆ ಮತ್ತು ಸಂಜೆ ನಾವು ಅಜಾನ್‍ನನ್ನು ಪೆನ್ ಡ್ರೈವ್ ಮೂಲಕ ಹಾಕುತ್ತೇವೆ. ಈ ಹಿಂದೆ ಈ ಗ್ರಾಮದಲ್ಲೂ ಮಸ್ಲಿಂ ಸಮುದಾಯದವರು ಇದ್ದರು. ಆದರೆ ಕಾಲ ಕ್ರಮೇಣ ಅವರು ಈ ಹಳ್ಳಿ ಬಿಟ್ಟು ವಲಸೆ ಹೋದರು ಎಂದು ಹೇಳಿದ್ದಾರೆ.
ಈ ಮಸೀದಿ ಯಾವಾಗ ನಿರ್ಮಾಣವಾಯಿತು ಮತ್ತು ಯಾರಿಂದ ನಿರ್ಮಾಣವಾಯಿತು ನಮಗೆ ಗೊತ್ತಿಲ್ಲ. ಆದರೆ ಇದು ಸುಮಾರು 200 ವರ್ಷದ ಹಳೆಯ ಮಸೀದಿ ಎಂದು ಮಾತ್ರ ಗೊತ್ತು. ನಮ್ಮ ಗ್ರಾಮದ ಹಿಂದೂ ಸಮುದಾಯದವರು ಕೂಡ ಯಾವುದಾದರು ಶುಭಸಮಾರಂಭಗಳಲ್ಲಿ ಈ ಮಸೀದಿಗೆ ಬಂದು ಪೊಜೆ ಸಲ್ಲಿಸುತ್ತಾರೆ ಎಂದು ಮಾಧಿ ಗ್ರಾಮದ ಪಾದ್ರಿ ಜಾನಕಿ ಪಂಡಿತ್ ಹೇಳಿದ್ದಾರೆ.