ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಹಂಪಿಹೊಳಿ ಗ್ರಾಮ ಮಲಪ್ರಭಾ ನದಿ ನೀರಿನಿಂದ ಜಲಾವೃತಗೊಂಡಿದೆ. ಆದರೆ ಈ ನಡುವೆಯೇ ಹಿಂದೂ ಯುವಕರು ಸೇರಿಕೊಂಡು ದರ್ಗಾ ಸ್ವಚ್ಛಗೊಳಿಸಿ, ಮುಸ್ಲಿಂ ಬಾಂಧವರು ಮೊಹರಂ ಹಬ್ಬವನ್ನು ಆಚರಿಸಲು ಸಹಕರಿಸಿದ್ದಾರೆ.
ಮಲಪ್ರಭಾ ನದಿಯ ನೀರು ಹಿರೇಹಂಪಿಹೊಳಿ ಗ್ರಾಮಕ್ಕೆ ನುಗ್ಗಿದ ಪರಿಣಾಮ ಗ್ರಾಮದ ದರ್ಗಾದ ಬಳಿಯೂ ನೀರು ನಿಂತಿತ್ತು. ಆದರೆ ಮೊಹರಂ ಹಬ್ಬದ ಹಿನ್ನೆಲೆ ದರ್ಗಾ ಸ್ವಚ್ಛಗೊಳಿಸಲು ಗ್ರಾಮಸ್ಥರು ನಿರ್ಧರಿಸಿದ್ದು, ಮುಸ್ಲಿಂ ಬಾಂಧವರ ಜೊತೆ ಹಿಂದೂ ಯುವಕರು ಕೂಡ ಕೈಜೋಡಿಸಿ ದರ್ಗಾವನ್ನು ಸ್ವಚ್ಛಗೊಳಿಸಿದ್ದಾರೆ.
Advertisement
Advertisement
ಸ್ವಚ್ಛತಾ ಕಾರ್ಯ ಮುಗಿದ ಬಳಿಕ ದರ್ಗಾದಲ್ಲಿ ಲಾಲಸಾಬ್, ಮಾಬುಸುಬಾನಿ ದೇವರನ್ನ ಗ್ರಾಮಸ್ಥರು ಕೂರಿಸಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ಹಿರೇಹಂಪಿಹೊಳಿ ಗ್ರಾಮದಲ್ಲಿ ಕೇವಲ ಮುಸ್ಲಿಮರು ಮಾತ್ರ ಮೊಹರಂ ಹಬ್ಬವನ್ನು ಆಚರಿಸದೇ ಅವರೊಂದಿಗೆ ಹಿಂದೂಗಳು ಕೂಡ ಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು. ಧರ್ಮಭೇದ ಮರೆತು ಒಬ್ಬರಿಗೊಬ್ಬರು ಸಹಕರಿಸಿಕೊಂಡು ಹಿರೇಹಂಪಿಹೊಳಿ ಗ್ರಾಮಸ್ಥರು ಹಬ್ಬ ಆಚರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.