ಹಿಂದೂ ಸಮಾಜದ ಐಕ್ಯತೆಗಾಗಿ ಹಿಂದೂಗಳ ಬೃಹತ್ ಪಾದಯಾತ್ರೆ

Public TV
2 Min Read
koragajja hindu padayatra

ಮಂಗಳೂರು: ರಾಜ್ಯ ಕರಾವಳಿಯಲ್ಲಿ ಹಿಜಬ್ ವಿವಾದದ ಬಳಿಕ ಗೊಂದಲದ ವಾತವರಣ ನಿರ್ಮಾಣವಾಗಿದೆ. ಈ ನಡುವೆ ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಮಂಗಳೂರಿನಲ್ಲಿ ಬೃಹತ್ ಪಾದಯಾತ್ರೆ ನಡೆದಿದೆ. ಕರಾವಳಿಯ ಕಾರ್ನಿಕ ದೈವ ಕೊರಗಜ್ಜನ ಆದಿಕ್ಷೇತ್ರಕ್ಕೆ 10 ಸಾವಿರಕ್ಕೂ ಹೆಚ್ಚು ಭಕ್ತರು ಹದಿನೈದು ಕಿ.ಮೀ. ಪಾದಯಾತ್ರೆ ಮಾಡಿದ್ದಾರೆ.

ಹಿಜಬ್ ಕುರಿತು ಬಂದ ಕೋರ್ಟ್ ತೀರ್ಪು ವಿರೋಧಿಸಿ ಎರಡು ದಿನಗಳ ಹಿಂದೆ ಮುಸ್ಲಿಂ ಸಮುದಾಯದವರು ಒಂದು ದಿನದ ಬಂದ್ ಆಚರಿಸಿದ್ದರು. ಈ ಬಂದ್ ಬಳಿಕ ಸೋಷಿಯಲ್ ಮೀಡಿಯಾ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಪರ ವಿರೋಧದ ಚರ್ಚೆ ಶುರುವಾಗಿದೆ. ಹಿಂದೂ ಸಮಾಜ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವಂತೆಯೂ ಕರೆ ನೀಡಲಾಗುತ್ತಿದೆ. ಈ ನಡುವೆ ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಹಿಂದೂ ಸಮಾಜದ ಐಕ್ಯತೆಗಾಗಿ ಭಾನುವಾರ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ಕುರಾನ್,ಬೈಬಲ್ ಎಲ್ಲರನ್ನು ಕೊಲ್ಲು ಎಂದು ಹೇಳುತ್ತಿದೆ:  ಕಲ್ಲಡ್ಕ ಪ್ರಭಾಕರ ಭಟ್

hindu padayatra koragajja 1

ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಮಂಗಳೂರು ಹೊರವಲಯದ ಕುತ್ತಾರು ಬಳಿ ಇರುವ ಕಾರ್ನಿಕ ದೈವ ಕೊರಗಜ್ಜನ ಆದಿಕ್ಷೇತ್ರಕ್ಕೆ ಕದ್ರಿ ಶ್ರೀಮಂಜುನಾಥ ದೇವಸ್ಥಾನದಿಂದ ಪಾದಯಾತ್ರೆ ನಡೆಯಿತು. ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು 15 ಕಿ.ಮೀ. ದೂರ ಬರಿಗಾಲಿನಲ್ಲಿ ಪಾದಯಾತ್ರೆ ಮಾಡಿದರು. ಕೊರಗಜ್ಜ ಕ್ಷೇತ್ರದಲ್ಲಿ ನಡೆದ ಸಮಾರೋಪದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಭಾಗವಹಿಸಿ ಜಾಗೃತಿ ಭಾಷಣ ಮಾಡಿದರು ಹಾಗೂ ಪ್ರತ್ಯೇಕವಾದದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

rss kalladka prabhakar bhat

ಕಾಂಗ್ರೆಸ್‌ನ ತುಷ್ಟೀಕರಣ ನೀತಿಯಿಂದ ಭಾರತದ ಧ್ವಜ ತುಂಡಾಯಿತು. ಮುಂದೆ ಒಂದಲ್ಲಾ ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟ್ರಧ್ವಜ ಆಗಬಹುದು ಎಂಬ ವಿಶ್ವಾಸವನ್ನು ಪ್ರಭಾಕರ್ ಭಟ್ ವ್ಯಕ್ತಪಡಿಸಿದರು. ಆಕ್ರಮಣ ಆದಾಗ ಹಿಂದೂ ಸಮಾಜ ಪ್ರತಿರೋಧ ತೋರಿಸುತ್ತದೆ. ಶಾಂತಿ, ಸಾಮರಸ್ಯದ ಜೀವನ ದೌರ್ಬಲ್ಯ ಅಂದುಕೊಂಡರೆ ಅದು ಹೆಚ್ಚು ದಿನ ನಡೆಯಲ್ಲ ಎಂದು ಎಚ್ಚರಿಸಿದರು. ಇದನ್ನೂ ಓದಿ: ಹಿಜಬ್‌ ತೀರ್ಪು- ಹೈಕೋರ್ಟ್‌ ಜಡ್ಜ್‌ಗಳಿಗೆ ʼವೈʼ ಭದ್ರತೆ

hindu padayatra koragajja 2

ಮುಸಲ್ಮಾನರು ಹಿಜಬ್ ಹೆಸರಿನಲ್ಲಿ ಕೋರ್ಟ್ಗೆ ಹೋದರು. ತೀರ್ಪು ಬಂದ ಬಳಿಕ ಅದನ್ನು ಅವರು ಒಪ್ಪಲಿಲ್ಲ. ಅದು ಬಿಟ್ಟು ಪ್ರತಿಭಟನೆ ಮತ್ತು ನ್ಯಾಯಾಂಗ ನಿಂದನೆ ಮಾಡಿದರು. ಮುಸಲ್ಮಾನ ಸಾಮ್ರಾಜ್ಯ ನಿರ್ಮಾಣವೇ ಅವರ ಗುರಿ. ಇದಕ್ಕಾಗಿ ಹಿಂದೂ ಸಮಾಜ ಒಗ್ಗಟ್ಟಾಗಲು ಈ ನಡಿಗೆ ಎಂದು ಪ್ರಭಾಕರ್ ಭಟ್ ಹೇಳಿದರು.

ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಭಟ್, ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸುವ ವಿಚಾರದಲ್ಲಿ ಹಿಂದೂಗಳಾದ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *