– ಸ್ವಯಂ ಸೇವಕರನ್ನು ನೇಮಿಸಿಕೊಂಡು ಪ್ರತಿಭಟನಾಕಾರಿಗೆ ರಕ್ಷಣೆ
ತುಮಕೂರು: ನಗರದಲ್ಲಿ ಇಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಕಾಯ್ದೆ ವಾಪಸ್ ತೆಗದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಅರೇ ಸುನ್ ಲೇ ಮೋದಿ, ಅರೇ ಸುನ್ ಲೇ ಅಮಿತ್ ಶಾ (ಕೇಳಿಸಿಕೋ ಮೋದಿ, ಕೇಳಿಸಿಕೋ ಅಮಿತ್ ಶಾ) ಎಂದು ಏಕವನದಲ್ಲಿ ಪ್ರತಿಭಟನಾಕಾರರು ವಾಗ್ದಾಳಿ ನಡೆಸಿದರು. ಪ್ರತಿಭಟನೆಯ ನಡುವೆ ಆಗಾಗ ‘ಅರೇ ಟಕ್ಲು ಅಮಿತ್ ಶಾ’ ಎಂದು ವ್ಯಂಗ್ಯವಾಗಿ ಘೋಷಣೆ ಕೂಗುತ್ತಿರುವುದು ಕೂಡ ಕೇಳಿ ಬಂದಿತು. ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿದ್ದಾರೆ. ಮಾಜಿ ಶಾಸಕ ರಫೀಕ್ ಅಹಮದ್, ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಹಾಗೂ ಹಲವು ದಲಿತ ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿತು.
ಪ್ರತಿಭಟನೆಯಲ್ಲಿ ರಾಷ್ಟ್ರಧ್ವಜ ರಾರಾಜಿಸುತ್ತಿದ್ದದ್ದು ವಿಶೇಷವಾಗಿತ್ತು. ಪ್ರತಿಭಟನಾ ನಿರತ ಪ್ರತಿ 5 ಜನರ ಪೈಕಿ ಒಬ್ಬರ ಕೈಯಲ್ಲಿ ತ್ರಿವರ್ಣ ಧ್ವಜ ಹಾರಾಡುತಿತ್ತು. ಪ್ರತಿಭಟನೆಯಲ್ಲಿ ‘ಹಿಂದೂ, ಮುಸ್ಲಿಂ ಏಕ್ ಹೈ’ ಎಂದು ಘೋಷಣೆ ಕೂಗಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಕಚೇರಿಯ ಸುತ್ತ ಮುತ್ತ ಬರೀ ರಾಷ್ಟ್ರಧ್ವಜಗಳೇ ಕಣ್ಣಿಗೆ ಕಾಣಿಸುತಿತ್ತು.
ಕಾಣಲಿಲ್ಲ ಮಹಿಳಾ ಪ್ರತಿಭಟನಾಕಾರರು:
ಪ್ರತಿಭಟನೆ ವೇಳೆ ಸಂವಿಧಾನದ ಪ್ರಕಾರ ಜಾತಿ, ಮತ, ಪಂಥ, ಲಿಂಗ ಭೇದ ಮಾಡಬಾರದು ಎನ್ನುವುದನ್ನು ಮೋದಿ ಅರಿಯಬೇಕು ಎಂಬ ಭಾಷಣ ಮಾಡಲಾಯಿತು. ಆದರೆ ಯಾವೊಬ್ಬ ಮಹಿಳಾ ಪ್ರತಿಭಟನಾಕಾರರು ಅಲ್ಲಿ ಕಾಣಲು ಸಿಗಲಿಲ್ಲ. ಮಹಿಳೆಯರನ್ನು ಯಾಕೆ ಪ್ರತಿಭಟನೆಗೆ ಕರೆದು ತಂದಿಲ್ಲ ಎಂಬ ಪ್ರಶ್ನೆಯೂ ಎದಿತ್ತು. ತ್ರಿವಳಿ ತಲಾಖ್ ನಿಷೇಧಿಸಿದ್ದರಿಂದ ಮೋದಿಪರ ಮಹಿಳೆಯರು ಇದ್ದಾರೆ ಹಾಗಾಗಿ ಪೌರತ್ವ ವಿರೋಧಿ ಪ್ರತಿಭಟನೆಯಲ್ಲಿ ಮಹಿಳೆಯರು ಪಾಲ್ಗೊಳ್ಳದೇ ಇದ್ದಿರಬಹುದು ಎಂಬ ಮಾತುಗಳು ಕೂಡ ಕೇಳಿಬಂದವು.
ಈ ನಡುವೆ ಮುಸ್ಲಿಂ ಸಮುದಾಯದ ಪ್ರತಿಭಟನೆ ಅತ್ಯಂತ ಶಾಂತಿ ಮತ್ತು ಶಿಸ್ತಿಗೆ ಸಾಕ್ಷಿಯಾಗಿತ್ತು. ಪ್ರಧಾನಿ ಮತ್ತು ಗೃಹ ಸಚಿವರಿಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದು ಹೊರತು ಪಡಿಸಿದರೆ ಬಹುತೇಕ ಶಾಂತಿಯುತವಾಗಿ ಪ್ರತಿಭಟನೆ ನಡೆಯಿತು. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಪೊಲೀಸರು ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದರು. ಸಮಯಕ್ಕೆ ಸರಿಯಾಗಿ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ. ಪ್ರತಿಭಟಣೆಯ ಸುತ್ತ ಮುತ್ತ ಅಲ್ಲಲ್ಲಿ ಸ್ವಯಂ ಸೇವಕರನ್ನು ನೇಮಿಸಿಕೊಂಡು, ತಮಗೆ ತಾವೇ ಕಾವಲಿದ್ದು ಯಾವುದೇ ಗಲಾಟೆ, ನೂಕುನುಗ್ಗಲು, ಟ್ರಾಫಿಕ್ ಜಾಮ್ ಆಗದ್ದಂತೆ ಎಚ್ಚರಿಕೆ ವಹಿಸಿದ್ದು ವಿಶೇಷವಾಗಿತ್ತು.