ಉಡುಗೊರೆ ನೀಡುವ ನೆಪದಲ್ಲಿ ಬಂದು ಹಿಂದೂ ಮಹಾಸಭಾ ನಾಯಕನನ್ನು ಗುಂಡಿಕ್ಕಿ ಹತ್ಯೆ

Public TV
1 Min Read
Kamlesh tiwari

ಲಕ್ನೋ: ಹಿಂದೂ ಮಹಾಸಭಾ ನಾಯಕ ಕಮಲೇಶ್ ತಿವಾರಿ ಅವರಿಗೆ ಗುಂಡಿಕ್ಕಿ ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಶುಕ್ರವಾರ ನಡೆದಿದೆ.

ಗುಂಡು ತಗುಲಿ ಹಾಗೂ ಮಾರಣಾಂತಿಕ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕಮಲೇಶ್ ತಿವಾರಿ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಿವಾರಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಕೇಸರಿ ಬಟ್ಟೆಯನ್ನು ಧರಿಸಿದ್ದ ದುಷ್ಕರ್ಮಿಗಳು ದೀಪಾವಳಿ ಉಡುಗೊರೆ ನೀಡುವ ನೆಪದಲ್ಲಿ ಕಮಲೇಶ್ ತಿವಾರಿ ಅವರ ಕಚೇರಿಗೆ ಬಂದಿದ್ದರು. ಕಚೇರಿಯಲ್ಲಿ ಚಹಾ ಕುಡಿದು ಹತ್ಯೆಗೆ ಪ್ಲ್ಯಾನ್ ರೂಪಿಸಿದ್ದ ದುಷ್ಕರ್ಮಿಗಳು, ಕಮಲೇಶ್ ತಿವಾರಿ ತಮ್ಮ ಬಳಿಗೆ ಬರುತ್ತಿದ್ದಂತೆ ಸ್ವೀಟ್ ಬಾಕ್ಸ್ ನಲ್ಲಿ ತಂದಿದ್ದ ಗನ್‍ನಿಂದ ಗುಂಡು ಹಾರಿಸಿದ್ದಾರೆ. ಬಳಿಕ ಮಾರಕಾಸ್ತ್ರಗಳಿಂದ ಕುತ್ತಿಗೆ, ಎದೆ, ಮುಖದ ಮೇಲೆ ಹಲ್ಲೆ ಮಾಡಿದ್ದಾರೆ. ಗುಂಡಿನ ಶಬ್ದ ಕೇಳಿದ ಸ್ಥಳೀಯರು ತಕ್ಷಣವೇ ಕಚೇರಿಯೊಳಗೆ ಬರುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಕಮಲೇಶ್ ತಿವಾರಿ ಅವರ ಮೇಲಿನ ಹಳೆಯ ದ್ವೇಷದಿಂದ ದುಷ್ಕರ್ಮಿಗಳ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಘಟನೆಯನ್ನು ಖಂಡಿಸಿ ಹಿಂದೂ ಮಹಾಸಭಾ ಸದಸ್ಯರು ಪ್ರತಿಭಟನೆ ಆರಂಭಿಸಿದ್ದು, ಆರೋಪಿಗಳನ್ನು ಬಂಧಿಸಿ ಸೂಕ್ತ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದೆ. ಈ ಸಂಬಂಧ ತನಿಖೆ ಆರಂಭಿಸಿರುವ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಕಮಲೇಶ್ ತಿವಾರಿ ಅವರು ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು ಭಾರೀ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕಮಲೇಶ್ ತಿವಾರಿ ಅವರಿಗೆ ಹಾಕಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ನ್ಯಾಯಪೀಠವು  ರದ್ದುಪಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *