ಬೆಂಗಳೂರು: ಸಾರ್ವಜನಿಕ ಸಭೆಯಲ್ಲಿ ಪೊಲೀಸ್ ಅಧಿಕಾರಿಗೆ ಅವಹೇಳನಕಾರಿಯಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಪೋಲೀಸರು ಶುಕ್ರವಾರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತರನ್ನು ಬಂಧಿಸಿದ್ದಾರೆ.
ಸೆ. 15 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದ ಹಿಂದೂ ಜಾಗರಣ ವೇದಿಕೆ ಆಶ್ರಯದ ಪ್ರತಿಭಟನಾ ಸಭೆಯಲ್ಲಿ, ಸರ್ಕಾರಿ ಅಧಿಕಾರಿಯಾಗಿರುವ ಅಬ್ದುಲ್ ಖಾದರ್ ಅವರನ್ನು ಮತೀಯ ನೆಲೆಯಲ್ಲಿ ನಿಂದಿಸಿದ್ದಾರೆಂದು ಆರೋಪಿಸಿ, ತನಿಖೆ ನಡೆಸಬೇಕೆಂದು ಕಬಕ ನಿವಾಸಿ ಕೆ ಅಝೀಜ್ ಪೊಲೀಸರಿಗೆ ಮನವಿ ಸಲ್ಲಿಸಿದ್ದರು.
Advertisement
ಪೊಲೀಸರು ಜಗದೀಶ್ ಕಾರಂತರ ಭಾಷಣದ ವೀಡಿಯೋವನ್ನು ಸಂಪೂರ್ಣ ಅಧ್ಯಯನ ಮಾಡಿದ ಬಳಿಕ, ಸರ್ಕಾರಿ ನೌಕರನಿಗೆ ಬೆದರಿಕೆ ಒಡ್ಡಿರುವುದು, ಧರ್ಮ-ಧರ್ಮಗಳ ನಡುವೆ ವೈರತ್ವ ಹುಟ್ಟುವಂತೆ ಪ್ರೇರಣೆ ಮಾಡಿರುವುದು, ಧಾರ್ಮಿಕ ಅವಹೇಳನ, ಧಾರ್ಮಿಕ ನಿಂದನೆ ಮೊದಲಾದ ಅಂಶಗಳನ್ನು ಉಲ್ಲೇಖಿಸಿ ಭಾರತೀಯ ಅಪರಾಧ ದಂಡ ಸಂಹಿತೆಯ 153ನೇ ಸೆಕ್ಷನ್ ಅಡಿಯಲ್ಲಿ ಜಗದೀಶ್ ಕಾರಂತ ವಿರುದ್ಧ ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡಿದ್ದರು.