ನವದೆಹಲಿ: ಅದಾನಿ ಸಮೂಹ ಕಂಪನಿಗಳ (Adani Group Companies) ವಿರುದ್ಧ ವರದಿ ಪ್ರಕಟಿಸಿ ಷೇರು ಮೌಲ್ಯ ಕುಸಿತ ಮಾಡಿದ್ದ ಹಿಂಡನ್‌ಬರ್ಗ್ (Hindenburg Research) ಶೀಘ್ರವೇ ಭಾರತ ಬಗ್ಗೆ ದೊಡ್ಡ ಸುದ್ದಿ ಪ್ರಕಟಿಸುವುದಾಗಿ ತಿಳಿಸಿದೆ.
ಅದಾನಿ ಕಂಪನಿಯ ಬಗ್ಗೆಯೋ ಅಥವಾ ಬೇರೆ ಯಾವುದೋ ಕಂಪನಿಯೋ ಅಥವಾ ಯಾವುದೋ ಕ್ಷೇತ್ರಗಳ ಕಂಪನಿಗಳ ಬಗ್ಗೆ ವರದಿ ಬಿಡುಗಡೆ ಮಾಡುತ್ತದೋ ಎನ್ನುವುದರ ಬಗ್ಗೆ ಯಾವುದೇ ವಿವರವನ್ನು ಹಿಂಡನ್‌ಬರ್ಗ್ ನೀಡಿಲ್ಲ.
Something big soon India
— Hindenburg Research (@HindenburgRes) August 10, 2024
2023ರ ಜನವರಿಯಲ್ಲಿ ಅಮೆರಿಕದ ಶಾರ್ಟ್ ಸೆಲ್ಲಿಂಗ್ (Short Selling) ಕಂಪನಿ ಹಿಂಡನ್‌ಬರ್ಗ್ ಅದಾನಿ ಕಂಪನಿ ವಿರುದ್ಧ ಸಂಶೋಧನಾ ವರದಿ ಪ್ರಕಟಿಸಿತ್ತು. ಈ ವರದಿ ಪ್ರಕಟವಾದ ಬಳಿಕ ಅದಾನಿ ಕಂಪನಿಯ ಷೇರುಗಳ ಮೌಲ್ಯ ಭಾರೀ ಇಳಿಕೆಯಾಗಿತ್ತು. ನಂತರ ಪ್ರಕರಣ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿತ್ತು. ಜಾರಿ ನಿರ್ದೇಶನಾಲಯ (ED) ಇಡಿ ನಡೆಸಿದ ತನಿಖೆಯಲ್ಲಿ 16 ಕಂಪನಿಗಳು ಭಾರೀ ಲಾಭ ಮಾಡಿಕೊಂಡ ವಿಚಾರ ದೃಢಪಟ್ಟಿತ್ತು. ಇದನ್ನೂ ಓದಿ: ಅದಾನಿ ಷೇರು ಶಾರ್ಟ್ ಸೆಲ್ಲಿಂಗ್, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?
ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯೂ ಅದಾನಿ ಕಂಪನಿಗೆ ಕ್ಲೀನ್ ಚಿಟ್ ನೀಡಿತ್ತು. ತನಿಖಾ ವರದಿಗಳು ಪ್ರಕಟವಾಗುತ್ತಿದ್ದಂತೆ ನಿಧಾನವಾಗಿ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಏರಿಕೆಯಾಗಿತ್ತು. ಹಿಂಡನ್‌ಬರ್ಗ್ ವರದಿಯಿಂದ ವಿಶ್ವದ ಮೂರನೇ ಶ್ರೀಮಂತರ ವ್ಯಕ್ತಿಯಾಗಿದ್ದ ಗೌತಮ್ ಅದಾನಿ ಸಂಪತ್ತು ಕರಗಿ 30ನೇ ಸ್ಥಾನಕ್ಕೆ ಕುಸಿದಿದ್ದರು. ನಂತರ ಚೇತರಿಕೆ ಕಂಡು 12ನೇ ಸ್ಥಾನಕ್ಕೆ ಏರಿದ್ದಾರೆ. ಇದನ್ನೂ ಓದಿ: ಷೇರು ವಿವಾದ; ಅದಾನಿ ಗ್ರೂಪ್‌ಗೆ ಸುಪ್ರೀಂ ಕೋರ್ಟ್ ಸಮಿತಿ ಕ್ಲೀನ್ ಚಿಟ್
ಏನಿದು ಶಾರ್ಟ್ ಸೆಲ್ಲಿಂಗ್?
ಶಾರ್ಟ್ ಸೆಲ್ಲಿಂಗ್ ಎನ್ನುವುದು ಹೂಡಿಕೆಯ ತಂತ್ರವಾಗಿದ್ದು, ಮುಂದಿನ ದಿನಗಳಲ್ಲಿ ಕಂಪನಿಯ ಷೇರು ಮೌಲ್ಯ ಕುಸಿಯಬಹುದು ಎಂಬುದನ್ನು ಮೊದಲೇ ಊಹಿಸಿ ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ನಂತರ ಆ ಕಂಪನಿಯ ಷೇರು ಮೌಲ್ಯ ಕುಸಿತಗೊಂಡಾಗ ಅವುಗಳನ್ನು ಕಡಿಮೆ ಬೆಲೆಗೆ ಮರು ಖರೀದಿಸಿ ಲಾಭ ಮಾಡುವುದಕ್ಕೆ ಶಾರ್ಟ್ ಸೆಲ್ಲಿಂಗ್ ಎಂದು ಕರೆಯಲಾಗುತ್ತದೆ.
ಅದಾನಿಯಿಂದ ಎಫ್‌ಪಿಒ ರದ್ದು:
20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಎಂಟರ್‌ಪ್ರೈಸಸ್ ಕಳೆದ ಜನವರಿಯಲ್ಲಿ ಚಾಲನೆ ನೀಡಿತ್ತು. ಪ್ರತಿ ಷೇರಿಗೆ 3,112ರಿಂದ 3,276 ರೂ. ಆಫರ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಿಂಡನ್‌ಬರ್ಗ್ ಅದಾನಿ ಕಂಪನಿಗಳ ವಿರುದ್ಧ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು. ವರದಿ ಬಳಿಕ ಅದಾನಿ ಕಂಪನಿಗಳ ಷೇರಿನ ಮೌಲ್ಯ ಕುಸಿತ ಕಂಡಿದ್ದರೂ ಎಫ್‌ಪಿಒ ಬಿಡ್ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಇದನ್ನೂ ಓದಿ: ಹಿಂಡನ್‌ಬರ್ಗ್ ಸಂಶೋಧನಾ ವರದಿ ಸುಳ್ಳು, ಆಧಾರ ರಹಿತ: ಅದಾನಿಗೆ ಮಾರಿಷಸ್ ಸರ್ಕಾರದಿಂದ ಕ್ಲೀನ್ ಚಿಟ್
ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ನಂತರ 20 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಎಫ್‌ಪಿಒ ಪ್ರಕ್ರಿಯೆಯನ್ನೇ ಅದಾನಿ ಸಮೂಹ ರದ್ದು ಮಾಡಿತ್ತು. ನಮ್ಮ ಷೇರು (Share) ಮೌಲ್ಯ ಕುಸಿದಿದೆ. ಈ ಸಂದರ್ಭದಲ್ಲಿ ಎಫ್‌ಪಿಒನೊಂದಿಗೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಹೇಳಿ ಹೂಡಿಕೆದಾರರ ಹಣವನ್ನು ಮರಳಿಸಲಾಗುವುದು ಎಂದು ಗೌತಮ್ ಅದಾನಿ (Gautam Adani) ತಿಳಿಸಿದ್ದರು.