ಮುಂಬೈ: ಇಂಟೆರ್‌ನೆಟ್ ಸ್ಟಾರ್ ರಾನು ಮೊಂಡಲ್ ಅವರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗಾಯಕ ಹಿಮೇಶ್ ರೇಶ್ಮಿಯಾ ಗರಂ ಆಗಿದ್ದಾರೆ.
ಇತ್ತೀಚೆಗೆ ಹಿಮೇಶ್ ಮುಂಬೈನಲ್ಲಿ ಲೈವ್ ಪರ್ಫಾರ್ಮೆನ್ಸ್ ನೀಡಲು ಬಂದಿದ್ದರು. ಈ ವೇಳೆ ಮಾಧ್ಯಮದವರು ಹಿಮೇಶ್ ಅವರ ಬಳಿ ರಾನು ಅವರನ್ನು ಪ್ರಶ್ನಿಸಿದ್ದಾರೆ. ಪ್ರಶ್ನೆ ಕೇಳುತ್ತಿದ್ದಂತೆ ಹಿಮೇಶ್, ನಾನು ರಾನು ಅವರ ಮ್ಯಾನೇಜರ್ ಅಲ್ಲ. ನೀವು ಅವರ ಬಗ್ಗೆ ಏಕೆ ಕೇಳುತ್ತಿದ್ದೀರಿ. ಕೇವಲ ರಾನು ಅವರಿಗೆ ನಾನು ಹಾಡುವ ಅವಕಾಶ ನೀಡಲಿಲ್ಲ ಆರ್ಯನ್, ದರ್ಶನ್, ಶೈನ್, ಪಲಕ್ ಸೇರಿದಂತೆ ಹಲವರಿಗೆ ನಾನು ಹಾಡಲು ಅವಕಾಶ ನೀಡಿದ್ದೇನೆ ಎಂದು ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ ಹಿಮೇಶ್, ರಾನು ಅವರನ್ನು ಹೊಗಳಿದ್ದಾರೆ. ರಾನು ಅವರ ಹಾಡು ತುಂಬಾ ಚೆನ್ನಾಗಿದೆ. ನಾನು ಕೆಲವು ಸಂಗೀತ ನಿರ್ದೇಶಕ ಹಾಗೂ ನಿರ್ಮಾಪಕರ ಜೊತೆ ಮಾತನಾಡಿ ಚಿತ್ರರಂಗದಲ್ಲಿ ಕೆಲಸ ಕೊಡಲು ಹೇಳುತ್ತೇನೆ. ಏಕೆಂದರೆ ರಾನು ಅವರ ಧ್ವನಿ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ಕೆಲವು ದಿನಗಳಿಂದ ನೆಟ್ಟಿಗರು ನನ್ನನ್ನು ಟ್ರೋಲ್ ಮಾಡುತ್ತಿಲ್ಲ. ರಾನು ಅವರ ಟ್ರೋಲಿಂಗ್ ಬಗ್ಗೆ ನನಗೆ ಪ್ರಶ್ನಿಸಬೇಡಿ. ಈ ಬಗ್ಗೆ ನೀವು ರಾನು ಅವರನ್ನೇ ಪ್ರಶ್ನಿಸಿ ಅವರ ಬಳಿಯೇ ಉತ್ತರ ಪಡೆದುಕೊಳ್ಳಿ ಎಂದು ಹಿಮೇಶ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ರಾನು 1972ರಲ್ಲಿ ಬಿಡುಗಡೆಯಾದ `ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋವನ್ನು ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆದ ಬೆನ್ನಲೇ ರಾನು ಅವರಿಗೆ ರಿಯಾಲಿಟಿ ಶೋನಲ್ಲಿ ಹಾಡುವ ಅವಕಾಶ ಸಿಕ್ಕಿತ್ತು. ಬಳಿಕ ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಚಿತ್ರದಲ್ಲಿ ಹಾಡಲು ರಾನು ಅವರಿಗೆ ಅವಕಾಶ ಕೊಟ್ಟಿದ್ದರು.
ಚಿತ್ರದಲ್ಲಿ ರಾನು ಹಾಡಿದ ಹಾಡನ್ನು ಹಿಮೇಶ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾನು ಅವರ ಹಾಡಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಅಲ್ಲದೆ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿತ್ತು. ರಾನು ಹಾಡಿದ ಮೊದಲ ಹಾಡಿಗೆ ಹಿಮೇಶ್ ಅವರು 6ರಿಂದ 7 ಲಕ್ಷ ರೂ. ಸಂಭಾವನೆ ಸಹ ನೀಡಿದ್ದರು ಎಂಬ ಮಾತುಗಳು ಕೇಳಿ ಬಂದಿತ್ತು. ಇದಾದ ಬಳಿಕ ಹಿಮೇಶ್ ಮತ್ತೆ ತಮ್ಮ ಚಿತ್ರದಲ್ಲಿ ಹಾಡು ಹಾಡಲು ರಾನು ಅವರಿಗೆ ಅವಕಾಶ ಕೊಟ್ಟಿದ್ದರು.