ಬೆಂಗಳೂರು: ಹಿಮಾಚಲ ಪ್ರದೇಶದ ಸಿಎಂ ಆಗಿ ಜೈರಾಮ್ ಠಾಕೂರ್ ಆಯ್ಕೆಯಾಗಿದ್ದು, ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಜೈರಾಮ್ ಠಾಕೂರ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ಮುಖ್ಯಮಂತ್ರಿ ಪಟ್ಟವನ್ನು ಏರಲಿರುವ ಜೈರಾಮ್ ಠಾಕೂರ್ ಅವರಿಗೆ ಕನ್ನಡ ನಂಟು ಇದೆ. 28 ವರ್ಷಕ್ಕೆ ಶಾಸಕರಾಗಿ ಆಯ್ಕೆ ಆಗಿದ್ದ ಜೈರಾಮ್ ಠಾಕೂರ್ ಅವರ ಪತ್ನಿ ಡಾ. ಸಾಧನಾ ಠಾಕೂರ್ ಅವರು ಓರ್ವ ಕನ್ನಡತಿಯಾಗಿದ್ದು, ಮೂಲತ: ಶಿವಮೊಗ್ಗದವರು.
Advertisement
Advertisement
ಡಾ. ಸಾಧನಾ ಅವರ ಅಜ್ಜ ಉದ್ಯಮಮಿಯಾಗಿದ್ದು, ಹಲವು ವರ್ಷಗಳ ಕಾಲ ಬೆಂಗಳೂರನಲ್ಲಿ ನೆಲೆಸಿದ್ದರು. ನಂತರದಲ್ಲಿ ಜೈಪುರಕ್ಕೆ ವಲಸೆ ಹೋಗಿದ್ದರು. ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಡಾ. ಸಾಧನಾ ಠಾಕೂರ್, ತಮ್ಮ ಪತಿ ಮುಖ್ಯಮಂತ್ರಿಯಾಗಿ ಆಯ್ಕೆ ಆಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
Advertisement
ತಮ್ಮ ಪತಿ 1998 ರಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ನಿರಂತರವಾಗಿ ಶಾಸಕರಾಗಿ ಆಯ್ಕೆ ಆಗಿದ್ದರು. ಅನಂತರದಲ್ಲಿ ಸತತವಾಗಿ 5 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದು, ಈ ಹಿಂದೆಯೇ ಹಿಮಾಚಲ ಪ್ರದೇಶದ ಸಿಎಂ ಅಭ್ಯರ್ಥಿ ಕಣದಲ್ಲಿದ್ದರು ಎಂದು ತಿಳಿಸಿದ್ದಾರೆ.
Advertisement
ರಾಜ್ಯದ ಮುಖ್ಯ ಮಂತ್ರಿ ಅವರ ಪತ್ನಿಯಾಗಿ ಅವರ ಜವಾಬ್ದಾರಿಗಳನ್ನು ಅರಿಯುವ ಅವಶ್ಯಕತೆ ಇದ್ದು, ಜನರ ಸೇವೆಯನ್ನು ಮಾಡುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರಿದರು. ಇನ್ನು ತಮ್ಮ ಮದುವೆ ಬಗ್ಗೆ ತಿಳಿಸಿದ ಅವರು, ತಮ್ಮದು ಕುಟುಂಬ ಸದಸ್ಯರ ನಿರ್ಣಯದಂತೆ ಮದುವೆ ನಡೆದಿದ್ದು, ನಾವಿಬ್ಬರು ಎವಿಬಿಪಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದೇವು. ನಮ್ಮ ಮದುವೆ ನಂತರ ನಾನು ಹರಿಯಾಣಕ್ಕೆ ತೆರಳಿದೆ ಎಂದು ಹೇಳಿದರು.
ತಮ್ಮ ಪತಿಯ ಮೇಲೆ ಅಪಾರ ನಿರೀಕ್ಷೆ ಇದ್ದು, ರಾಜ್ಯದಲ್ಲಿ ಯುವ ಜನಾಂಗದವರಿಗೆ ಉದ್ಯೋಗ ಸೃಷ್ಟಿಸಲು ಹೆಚ್ಚಿನ ಒತ್ತು ನೀಡಲಿದ್ದಾರೆ. ಅಲ್ಲದೇ ಹಿಮಾಚಲ ಪ್ರದೇಶ ನಿಸರ್ಗದತ್ತ ಪ್ರದೇಶವಾಗಿರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಹೆಚ್ಚಿನ ಗಮನ ನೀಡಲಿದ್ದಾರೆ ಎಂದು ತಿಳಿಸಿದರು.