ಹಿಮಾಚಲದಲ್ಲಿ ಭೂಕುಸಿತಕ್ಕೆ ಭಾರೀ ಕಟ್ಟಡಗಳು ನೆಲಸಮ

Public TV
2 Min Read
himachal pradesh 1

ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) ಕುಲು (Kullu) ಜಿಲ್ಲೆಯಲ್ಲಿ ಗುರುವಾರ ಭೂಕುಸಿತ (Landslide) ಉಂಟಾಗಿದ್ದು, ಭಾರೀ ಕಟ್ಟಡಗಳು ನೆಲಸಮವಾಗಿವೆ. ಭೂಕುಸಿತದ ದೃಶ್ಯಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಅನೇಕ ಮನೆಗಳು ನಾಶವಾಗಿರುವುದು ಕಂಡುಬಂದಿದೆ.

ಭೂಕುಸಿತದಿಂದಾಗಿ ಸ್ಥಳದಲ್ಲಿ ಸಿಲುಕಿರುವವರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಕಾರ್ಯಾಚರಣೆ ನಡೆಸುತ್ತಿದೆ.

ಭಾರತೀಯ ಹವಾಮಾನ ಇಲಾಖೆ (IMD) ರೆಡ್ ಅಲರ್ಟ್ ಘೋಷಿಸಿದ್ದು, ಇಂದಿನಿಂದ ಮುಂದಿನ 2 ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.

ವಿನಾಶಕಾರಿ ಭೂಕುಸಿತದ ನಡುವೆ ಅನ್ನಿ, ಕುಲು ಪ್ರದೇಶದ ಬೃಹತ್ ವಾಣಿಜ್ಯ ಕಟ್ಟಡಗಳು ಕುಸಿಯುತ್ತಿರುವ ದೃಶ್ಯಗಳು ಹೊರಹೊಮ್ಮುತ್ತಿವೆ. ಆಡಳಿತ ಮುಂಚಿತವಾಗಿಯೇ ಅಪಾಯವನ್ನು ಗುರುತಿಸಿ, 2 ದಿನಗಳ ಹಿಂದೆಯೇ ಜನರನ್ನು ಅಲ್ಲಿಂದ ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಿದ್ದಾಗಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂರ್ ಸಿಂಗ್ ಸುಖು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮುಂದಿನ ಪ್ರಾಜೆಕ್ಟ್‌ ಗಗನಯಾನಕ್ಕೂ ನಮ್ಮ ಕಂಪನಿಯಲ್ಲಿ ಬಿಡಿಭಾಗ ತಯಾರಿ: ಚಂದ್ರಯಾನ-3 ರಾಕೆಟ್‌ಗೆ ಬಿಡಿಭಾಗ ಪೂರೈಸಿದ್ದ ಬೆಳಗಾವಿ ದೀಪಕ್‌ ಮಾತು

ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಭೂಕುಸಿತಕ್ಕೂ ಮುನ್ನ ನಾವು ತೆರವು ಕಾರ್ಯಾಚರಣೆ ನಡೆಸಿದ್ದೇವೆ ಎಂದು ಹಿಮಾಚಲ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಕುಂದು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದ ಸರ್ಕಾರ ಜೂನ್ 24ರಿಂದ ರಾಜ್ಯಕ್ಕೆ ಮುಂಗಾರು ಲಗ್ಗೆಯಿಟ್ಟ ನಂತರ ನಡೆದಿರುವ ಮಳೆಯ ಅವಾಂತರದಿಂದಾಗಿ ಸುಮಾರು 8,014 ಕೋಟಿ ರೂ.ಯಷ್ಟು ಸಾರ್ವಜನಿಕ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ರಾಜ್ಯ ಸರ್ಕಾರದ ಅಂಕಿಅಂಶಗಳ ಪ್ರಕಾರ 2,022 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ ಮತ್ತು 9,615 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ರಾಜ್ಯದಲ್ಲಿ 113 ಭೂಕುಸಿತಗಳು ವರದಿಯಾಗಿದೆ. ಇದು ಮೂಲಭೂತ ಸೌಕರ್ಯಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ ಮತ್ತು ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಮಳೆಯಿಂದಾಗಿ 224 ಜನರು ಸಾವನ್ನಪ್ಪಿದ್ದಾರೆ, ಇನ್ನೂ 117 ಮಂದಿ ಮಳೆ ಸಂಬಂಧಿತ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಟೆಕ್ಕಿಗಳಿಗೆ ಮತ್ತೆ ನಿರಾಸೆ – ಎಲೆಕ್ಟ್ರಾನಿಕ್‌ ಸಿಟಿ ಮೆಟ್ರೋ ಸಂಚಾರ ವಿಳಂಬ

Web Stories

Share This Article