ಶಿಮ್ಲಾ: ಸಾಮಾನ್ಯವಾಗಿ ಯಾರಿಗಾದ್ರೂ ಎರಡು ಮೂರು ಬಾರಿ ಹಾವು ಕಚ್ಚಿರೋ ಬಗ್ಗೆ ಕೇಳಿದ್ರೇನೇ ಆಶ್ಚರ್ಯಪಡ್ತೀವಿ. ಅದ್ರೆ ಹಿಮಾಚಲಪ್ರದೇಶದ 18 ವರ್ಷದ ಮನಿಷಾ ಎಂಬ ಈ ಯುವತಿ ಕಳೆದ 3 ವರ್ಷದಲ್ಲಿ 34 ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದಾಳೆ.
ಈ ಮೂರು ವರ್ಷದಲ್ಲೂ ಹಲವು ವಿಧದ ಹಾವುಗಳು ಈಕೆಯನ್ನ ಕಚ್ಚಿವೆ. “ನನಗೆ ಕಳೆದ 3 ವರ್ಷಗಳಲ್ಲಿ 30ಕ್ಕೂ ಹೆಚ್ಚು ಬಾರಿ ಹಾವುಗಳು ಕಚ್ಚಿವೆ. ಮೊದಲ ಬಾರಿಗೆ ಗ್ರಾಮದಲ್ಲಿರುವ ನದಿ ಬಳಿ ನನಗೆ ಹಾವು ಕಚ್ಚಿತ್ತು. ಇತ್ತೀಚೆಗಷ್ಟೆ ನನಗೆ ಬಿಳಿ ಬಣ್ಣದ ಹಾವು ಕಚ್ಚಿತು. ಹಾವುಗಳನ್ನ ನೋಡಿದಾಗಲೆಲ್ಲಾ ನಾನು ಮಂತ್ರಮುಗ್ಧಳಾಗುತ್ತೇನೆ. ಆಗ ನನಗೆ ಅದು ಕಚ್ಚುತ್ತದೆ. ಎರಡು ವರ್ಷದ ಹಿಂದೆ ಮಾತ್ರ ಹಾವು ನನಗೆ ಕಚ್ಚಿರಲಿಲ್ಲ. ಶಾಲೆಯಲ್ಲಿದ್ದಾಗ ನನಗೆ ಪದೇ ಪದೇ ಹಾವು ಕಚ್ಚುತ್ತಿತ್ತು. ಕೆಲವೊಮ್ಮೆ ಒಂದೇ ದಿನದಲ್ಲಿ ಎರಡರಿಂದ ಮೂರು ಬಾರಿ ಹಾವು ಕಡಿತಕ್ಕೊಳಗಾಗಿದ್ದೇನೆ. ನನಗೂ ನಾಗದೇವತೆಗೂ ಏನೋ ಬಂಧವಿದೆ ಅಂತಾ ಜ್ಯೋತಿಷ್ಯರು ಹೇಳಿದ್ದಾರೆ ಅಂತಾ ಮನಿಷಾ ಹೇಳಿದ್ದಾಳೆ.
Advertisement
ಮನಿಷಾ ಫೆಬ್ರವರಿ 18ರಂದು 34ನೇ ಬಾರಿಗೆ ಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಳು. ಇಲ್ಲಿನ ವೈದ್ಯರು ಆಕೆಗೆ ಚಿಕಿತ್ಸೆ ನೀಡಿದ್ದು, ಆಕೆ ಬೇಗನೆ ಗುಣಮುಖಳಾಗುತ್ತಿದ್ದಾಳೆ ಎಂದು ಹೇಳಿದ್ದಾರೆ. ಅಲ್ಲದೆ ಈಕೆಗೆ ಕಚ್ಚಿರುವ ಹಾವುಗಳು ವಿಷರಹಿತ ಅಥವಾ ಕಡಿಮೆ ಪ್ರಮಾಣದ ವಿಷವುಳ್ಳ ಹಾವುಗಳಾಗಿವೆ. ಇಲ್ಲಿನ ಶೇ.80 ಹಾವುಗಳು ವಿಷಕಾರಿಯಲ್ಲದ ಹಾವುಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ.
Advertisement
ಇನ್ನು ಈಕೆಯ ತಂದೆ ಸುಮೇರ್ ವರ್ಮ ಹೇಳುವ ಪ್ರಕಾರ, ಮನಿಷಾಗೆ ಹಾವು ಕಚ್ಚುವುದು ಸಾಮಾನ್ಯವಾಗಿ ಬಿಟ್ಟಿದೆ. ದೇವರ ಆಶೀರ್ವಾದದಿಂದ ಹಾವು ಕಡಿತದ ಪರಿಣಾಮ ಕಡಿಮೆಯಾಗಿಸಬಹುದು ಎಂಬ ನಂಬಿಕೆಯಿಂದ ಆಕೆಯನ್ನು ಅನೇಕ ದೇವಸ್ಥಾನ, ಅರ್ಚಕರು ಹಾಗೂ ನಾಟಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದೇವೆ ಎಂದಿದ್ದಾರೆ.
Advertisement
ಆದರೆ ಹಾವುಗಳ ಬಗ್ಗೆ ಜ್ಞಾನ ಹೊಂದಿರುವ ಇಲ್ಲಿನ ಸ್ಥಳೀಯ ಪಶುವೈದ್ಯರಾದ ಡಾ. ರೋಹಿತ್ ಹೇಳುವ ಪ್ರಕಾರ ಸತತ ಹಾವಿನ ಕಡಿತದಿಂದ ಮನಿಷಾಳಲ್ಲಿ ವಿಷ ನಿರೋಧಕ ಅಂಶ ಅಭಿವೃದ್ಧಿಯಾಗಿದೆ. ನಾವು ಸಾಮಾನ್ಯವಾಗಿ ಕುದುರೆಗಳಿಗೆ ವಿಷ ನೀಡಿ ಅವುಗಳಲ್ಲಿ ಆ್ಯಂಟಿಬಾಡೀಸ್(ಪ್ರತಿರೋಧಕ ಶಕ್ತಿ) ಅಭಿವೃದ್ಧಿಯಾಗುವಂತೆ ಮಾಡುತ್ತೇವೆ. ಇದೇ ರೀತಿ ಮನಿಷಾ ದೇಹದಲ್ಲೂ ವಿಷ ನಿರೋಧಕ ಶಕ್ತಿ ಹೆಚ್ಚಿದ್ದು ಇದೇ ಕಾರಣದಿಂದ ಆಕೆ ಹಲವು ಬಾರಿ ಹಾವಿನ ಕಡಿತಕ್ಕೊಳಗಾದ್ರೂ ಬದುಕಿದ್ದಾಳೆ ಎಂದು ಅಭಿಪ್ರಾಯಪಟ್ಟಿದ್ದಾರೆ.