ಮಂಗಳೂರು: ಜಿಲ್ಲೆಯ ಹೊರವಲಯದ ಪಡೀಲ್-ಕುಲಶೇಖರದ ನಡುವೆ ರೈಲು ಹಳಿ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಪರಿಣಾಮ ಈ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದೆ.
ಪಾಲಕ್ಕಾಡ್ ರೈಲ್ವೇ ವಿಭಾಗದ ವ್ಯಾಪ್ತಿಯ ಮಂಗಳೂರು ಜಂಕ್ಷನ್-ತೋಕೂರು ಸೆಕ್ಷನ್‍ನಲ್ಲಿ ಗುಡ್ಡ ಕುಸಿದಿದೆ. ಭಾರೀ ಪ್ರಮಾಣದ ಮಣ್ಣು ಹಳಿ ಮೇಲೆ ಬಿದ್ದಿದೆ. ಹೀಗಾಗಿ ಹಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸದ್ಯಕ್ಕೆ ತೆರವು ಕಾರ್ಯಾಚರಣೆ ನಡೆಯುತ್ತಿದೆ.
Advertisement
ಇಂದು ಮತ್ತು ಭಾನುವಾರ ಕರಾವಳಿ ಭಾಗದಲ್ಲಿ ಭಾರೀ ಮಳೆ ಆಗಲಿದ್ದು, ಆರೆಂಜ್ ಅಲರ್ಟ್ ಜಾರಿ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
Advertisement
ಇತ್ತ ಮಾನವನ ದುರಾಸೆಗೆ ದಕ್ಷಿಣ ಕಾಶಿ ತಲಕಾವೇರಿ ಉಗಮ ಸ್ಥಾನದ ಸಮೀಪದ ಚೇರಂಗಾಲ ವ್ಯಾಪ್ತಿಯ ಬ್ರಹ್ಮಗಿರಿ ಬೆಟ್ಟಕ್ಕೆ ಕಂಟಕವಾಗುವಂತೆ ಕಾಣುತ್ತಿದೆ. ಚೇರಂಗಾಲ ಬಳಿ ಶಿರಸ್ತೆದಾರ್ ಸತೀಶ್ ನಡೆಸಿರುವ ರೆಸಾರ್ಟ್ ಕಾಮಗಾರಿಯಿಂದ ದೊಡ್ಡ ಅನಾಹುತವೊಂದು ಸಂಭವಿಸಬಹುದಾದ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.
Advertisement
ರೆಸಾರ್ಟ್ ಗಾಗಿ ಬೆಟ್ಟ ಕೊರೆದು ತೆಗೆದಿರುವ ಭಾರೀ ಪ್ರಮಾಣದ ಮಣ್ಣನ್ನು ಅವೈಜ್ಞಾನಿಕವಾಗಿ ತೆಗೆದು, ಕೋಳಿಕಾಡು ಕಾಲೋನಿಯ ಬೆಟ್ಟದ ಮೇಲೆ ಸುರಿಯಲಾಗಿದೆ. ಈ ಭಾಗದಲ್ಲಿ ಇದೀಗ ದೊಡ್ಡ ಪ್ರಮಾಣದ ಬಿರುಕುಗಳು ಮೂಡಿವೆ. ಇದು ಕೋಳಿಕಾಡು ಗ್ರಾಮಸ್ಥರಲ್ಲಿ ಆತಂಕ ತಂದಿದೆ. ಇಡೀ ಗ್ರಾಮವೇ ನಾಮಾವಶೇಷವಾಗುವ ಭಯ ಕಾಡುತ್ತಿದೆ.
ಆಡಳಿತ ವ್ಯವಸ್ಥೆ ಈಗಲೇ ಎಚ್ಚೆತ್ತುಕೊಳ್ಳದೆ ಹೋದಲ್ಲಿ ಬ್ರಹ್ಮಗಿರಿ ಬೆಟ್ಟ, ಕಾವೇರಿ ಮಾತೆಯ ಉಗಮ ಸ್ಥಾನಕ್ಕೆ ಉಳಿಗಾಲವಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಈ ಬಗ್ಗೆ ವಿಷಯ ತಿಳಿದ ಕೂಡಲೇ ಎಚ್ಚೆತ್ತ ಡಿಸಿ, ಭೂವಿಜ್ಞಾನಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲು ತೀರ್ಮಾನಿಸಿದ್ದಾರೆ. ಜೊತೆಗೆ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.