– ಮಣ್ಣಿನಡಿ ಸಿಲುಕ್ತು ನಾಲ್ಕು ಎಕ್ರೆ ಕಾಫಿ ತೋಟ
– ಮೃತದೇಹಗಳನ್ನ ಕೊಂಡೊಯ್ಯಲು ಮಾರ್ಗವಿಲ್ಲ
ಚಿಕ್ಕಮಗಳೂರು: ವರುಣನ ಆರ್ಭಟಕ್ಕೆ ಕಾಫಿನಾಡು ನಲುಗಿ ಹೋಗಿದೆ. ಭಾರೀ ಮಳೆಗೆ ಚಿಕ್ಕಮಗಳೂರಿನ ಸಿರಿವಾಸೆ ಸಮೀಪದ ಹಡ್ಲುಗದ್ದೆ ಗ್ರಾಮದಲ್ಲಿ ಮನೆ, ತೋಟದ ಮೇಲೆ ಬೃಹತ್ ಗುಡ್ಡ ಕುಸಿದು ಬಿದ್ದು ಅವಾಂತರ ಸೃಷ್ಟಿಯಾಗಿದೆ.
ಮಳೆಗೆ ಗುಡ್ಡ ಕುಸಿದ ಪರಿಣಾಮ ಗುಡ್ಡದ ಸಮೀಪವಿದ್ದ ಹಡ್ಲುಗದ್ದೆ ಗ್ರಾಮದ ನಿವಾಸಿ ನಿತೀಶ್ ಹಾಗೂ ನಂದೀಶ್ ಅವರ ಮನೆ ಮಣ್ಣಿನಲ್ಲಿ ಮುಚ್ಚಿ ಹೋಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಡ್ಡ ಕುಸಿತ ಹೆಚ್ಚಾದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಇಡೀ ಗ್ರಾಮವನ್ನೇ ಗ್ರಾಮಸ್ಥರು ತೊರೆದು ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರೆ. ಕೇವಲ ಮನೆ ಮಾತ್ರವಲ್ಲ ನಾಲ್ಕು ಎಕರೆ ಕಾಫಿ ತೋಟ ನೆಲಸಮವಾಗಿದೆ. ಸದ್ಯ ಸಿರಿವಾಸೆ ಸಮೀಪದ ಹಡ್ಲುಗದ್ದೆಯಲ್ಲಿ ಗ್ರಾಮಸ್ಥರು ಆಶ್ರಯ ಪಡೆದಿದ್ದು, ಎಡಬಿಡದೆ ಸುರಿಯುತ್ತಿರುವ ಮಳೆಗೆ ರಸ್ತೆಗಳ ಮೇಲೆ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಇತ್ತ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಕಲ್ಮಕ್ಕಿ ಹಾಗೂ ಕುಕ್ಕೋಡು ಗ್ರಾಮದಲ್ಲಿ ಕೂಡ ಗುಡ್ಡ ಕುಸಿತಗೊಂಡಿದೆ. ಪದೇ- ಪದೇ ಗುಡ್ಡ ಕುಸಿಯುತ್ತಿರುವ ಕಾರಣಕ್ಕೆ ಅದರ ಕೆಳ ಭಾಗ ವಾಸಿಸುವ ಜನರಲ್ಲಿ ಆತಂಕ ಹೆಚ್ಚಾಗಿದೆ. ಕಳಸ ಸುತ್ತಲಿನ ಜನ ಮುಂದೇನಾಗುತ್ತೋ ಎಂಬ ಭೀತಿ ಅಲ್ಲಿನ ಜನರಲ್ಲಿ ಕಾಡುತ್ತಿದೆ.
ಮೂಡಿಗೆರೆಯ ಬಾಳೂರು ಹೊರಟ್ಟಿಗೆ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿರುವ ಕಾರಣಕ್ಕೆ ಮೃತದೇಹಗಳನ್ನ ಕೊಂಡೊಯ್ಯಲು ಕೂಡ ಮಾರ್ಗವಿಲ್ಲದಂತಾಗಿದೆ. ರಸ್ತೆ ಇಲ್ಲದೇ ಶನಿವಾರದಿಂದಲೂ ಆಸ್ಪತ್ರೆಯ ಅಂಬುಲೆನ್ಸ್‍ನಲ್ಲಿಯೇ ಮೃತ ದೇಹಗಳನ್ನು ಇರಿಸಲಾಗಿದೆ. ಶನಿವಾರ ಹೊರಟ್ಟಿಯಲ್ಲಿ ಗುಡ್ಡ ಕುಸಿದು ತಾಯಿ, ಮಗ ಸಾವನ್ನಪ್ಪಿದ್ದರು. ಅವರ ಶವವನ್ನು ಕೊಂಡೊಯ್ಯಲು ಸಂಬಂಧಿಕರು ಗೋಳಾಡುತ್ತಿದ್ದಾರೆ.