Connect with us

ಆಫ್ರಿಕಾದಲ್ಲಿ ಅಪಹರಣಗೊಂಡಿದ್ದ ಹಡಗಿನಲ್ಲಿದ್ದ 22 ಭಾರತೀಯರ ರಕ್ಷಣೆ- ಭಾರತಕ್ಕೆ ರಾಜತಾಂತ್ರಿಕ ಗೆಲುವು

ಆಫ್ರಿಕಾದಲ್ಲಿ ಅಪಹರಣಗೊಂಡಿದ್ದ ಹಡಗಿನಲ್ಲಿದ್ದ 22 ಭಾರತೀಯರ ರಕ್ಷಣೆ- ಭಾರತಕ್ಕೆ ರಾಜತಾಂತ್ರಿಕ ಗೆಲುವು

ನವದೆಹಲಿ: ಆಫ್ರಿಕಾ ಬೆನಿನ್ ಕರಾವಳಿಯಿಂದ ಅಪಹರಣಗೊಂಡಿದ್ದ ಇಂಧನ ಹಡಗಿನಲ್ಲಿದ್ದ 22 ಭಾರತೀಯರನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಫೆಬ್ರವರಿ 1 ರಂದು ಪಶ್ಚಿಮ ಆಫ್ರಿಕಾ ಕರಾವಳಿಯಿಂದ ಹಡಗು ನಾಪತ್ತೆಯಾಗಿತ್ತು. ಈ ಕುರಿತು ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್ ಅವರು, ನನಗೆ ತುಂಬಾ ಸಂತೋಷವಾಗುತ್ತಿದೆ. 22 ಭಾರತೀಯ ಪ್ರಜೆಗಳಿದ್ದ ಹಡಗನ್ನು ಅಪಹರಣಕಾರರು ಬಿಡುಗಡೆ ಮಾಡಿದ್ದಾರೆ. ಈ ಕಾರ್ಯಕ್ಕೆ ಸಹಕಾರ ನೀಡಿದ ನೈಜೀರಿಯಾ ಹಾಗೂ ಬಿನಿನ್ ಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಈ ಹಿಂದೆ ಘಟನೆ ಕುರಿತು ಮಾಹಿತಿ ನೀಡಿದ್ದ ಅವರು, ತಾನು ನೈಜೀರಿಯಾ ವಿದೇಶಾಂಗ ಇಲಾಖೆಯೊಂದಿಗೆ ಸಂಪರ್ಕ ಮಾಡಿದ್ದು, ಅವರು ಸಹಕಾರ ನೀಡುವುದಾಗಿ ತಿಳಿಸಿದ್ದರು ಎಂದು ಹೇಳಿದ್ದರು.

13,500 ಟನ್ ಗ್ಯಾಸೋಲಿನ್ ಹೊಂದಿದ್ದ ಹಡಗನ್ನು ಹೈಜಾಕ್ ಮಾಡಲಾಗಿತ್ತು. ಇದಕ್ಕೂ ಮುನ್ನ ಹಡಗಿನ ಎಲ್ಲಾ ಸಂವಹನ ವ್ಯವಸ್ಥೆಗಳನ್ನು ಕಡಿತಗೊಳಿಸಿದ್ದರು. ಹಡಗನ್ನು ಗಲ್ಫ್ ನ ಬೆನಿನ್ ಗಿನಿಯ ಪ್ರದೇಶದಲ್ಲಿ ನಿಲ್ಲಿಸಿದ್ದರು ಎಂದು ತಿಳಿದುಬಂದಿದೆ.

ಇಂಧನ ಹಡಗು ಮುಂಬೈ ಮೂಲದ ಆಂಗ್ಲೋ ಇಸ್ಟ್ರನ್ ಕಂಪನಿ ಮಾಲೀಕತ್ವ ಹೊಂದಿತ್ತು. ಈ ಮೊದಲು ನೌಕೆಯ ಕಾಣೆಯಾಗಿರುವ ಕುರಿತು ಅನುಮಾನ ವ್ಯಕ್ತವಾಗಿತ್ತು. ಆದರೆ ಅನಂತರದಲ್ಲಿ ಅಪಹರಣವಾಗಿರುವುದು ದೃಢಪಟ್ಟಿತ್ತು. ಶೋಧಕಾರ್ಯಕ್ಕೆ ಸಹಾಯ ಮಾಡುವಂತೆ ಹಡಗು ಮಾಲೀಕರು ಮುಂಬೈನ ನೌಕ ಮಹಾನಿರ್ದೇಶನಾಲಯಕ್ಕೆ ಮನವಿ ಮಾಡಿದ್ದರು. ಭಾರತೀಯ ವಿದೇಶಾಂಗ ಇಲಾಖೆ ನೈಜೀರಿಯಾ ದೇಶದ ಸಹಾಯ ಪಡೆದು ಪತ್ತೆ ಕಾರ್ಯಾಚರಣೆ ನಡೆಸಿತ್ತು.

Advertisement
Advertisement