ನವದೆಹಲಿ: ಕರ್ನಾಟಕ ಶಾಂತಿಗೆ ಹೆಸರಾದ ರಾಜ್ಯ. ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಲಾಗುತ್ತಿದೆ ಹೊನ್ನಾಳಿಯಲ್ಲೂ ಇಂತಹ ಕಹಿ ಘಟನೆ ನಡೆದಿದೆ. ನಾನು ಮಧ್ಯಪ್ರವೇಶ ಮಾಡಿ ಶಾಂತಿ ಕಾಪಡಲು ಮನವಿ ಮಾಡಿದೆ. ಹಿಜಬ್-ಕೇಸರಿ ಸಂಘರ್ಷದ ಬದಲು ಸಾಮರಸ್ಯ ಕಾಪಾಡಿಕೊಳ್ಳಲು ಮನವಿ ಮಾಡಿದ್ದೇನೆ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮವಸ್ತ್ರ ಧರಿಸಲು ಹಿಂದೆ ಕೇರಳ ಹೈಕೋರ್ಟ್ ಹೇಳಿದೆ. ನಮ್ಮ ಸರ್ಕಾರ ಕೂಡಾ ಹೇಳಿದೆ. ಆ ಆದೇಶಗಳನ್ನು ನಾವು ಪಾಲಿಸಬೇಕು. ಹೈಕೋರ್ಟ್ ಹೇಳುವುದನ್ನು ನಾವು ಕೇಳಬೇಕು. ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: Karnataka Hijab Row: ಹೈಸ್ಕೂಲ್, ಕಾಲೇಜುಗಳಿಗೆ 3 ದಿನ ರಜೆ
ಒಟ್ಟಾಗಿ ಎಲ್ಲರೂ ಹೋಗೊಣ. ಅಲ್ಪ ಅಸಂಖ್ಯಾತ ಮುಖಂಡರು ಇಂತಹ ವಿಚಾರಗಳಿಗೆ ಪ್ರಚೋದನೆ ನೀಡಬಾರದು. ಕಾಲೇಜು ಆವರಣದಲ್ಲಿ ಧಾರ್ಮಿಕ ಸಮವಸ್ತ್ರ ಬೇಡ. ಹೀಗಾಗಿ ಎರಡು ಸಮುದಾಯದ ವಿದ್ಯಾರ್ಥಿಗಳು ನ್ಯಾಯಾಲಯ ಮತ್ತು ಸರ್ಕಾರ ಆದೇಶ ಪಾಲಿಸಬೇಕು ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಶಿವಮೊಗ್ಗ ಕಾಲೇಜಿನಲ್ಲಿ ಕೇಸರಿ ಧ್ವಜ ಹಾರಾಟ, ಕಲ್ಲು ತೂರಾಟ – ನಿಷೇಧಾಜ್ಞೆ ಜಾರಿ
ಮಂತ್ರಿಗಳಾದ ಸುನಿಲ್ ಕುಮಾರ್, ಈಶ್ವರಪ್ಪ ಈ ಬಗ್ಗೆ ಯಾವುದೇ ಪ್ರಚೋದನೆ ನೀಡಿಲ್ಲ. ಸರ್ಕಾರದ ನಿಯಮ ಪಾಲಿಸಲು ಹೇಳಿದ್ದಾರೆ. ಆದರೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರು ಮೂಲಭೂತ ಹಕ್ಕುಗಳು ಎಂದು ಪ್ರಚೋದನೆ ನೀಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಕಾಂಗ್ರೆಸ್ ಮಾಡುತ್ತಿದೆ. ಹೀಗೆ ಮಾಡಿ ಕಾಂಗ್ರೆಸ್ ನಶಿಸಿ ಹೋಗಿದೆ. ಕರ್ನಾಟಕದಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ರೆ ಕಾಂಗ್ರೆಸ್ ಅಡ್ರೇಸ್ ಇಲ್ಲದ ಹಾಗೇ ಹೋಗುತ್ತದೆ ಎಂದು ಗುಡುಗಿದರು.