ಬೆಂಗಳೂರು: ರಾಜ್ಯದಲ್ಲಿ ಹಿಜಬ್ (Hijab) ನಿಷೇಧ ಆದೇಶ ವಾಪಸ್ ವರ್ಸಸ್ ಕೇಸರಿ ಶಾಲಿನ ಫೈಟ್ ಶುರುವಾದಂತಿದೆ. ಹಿಜಬ್ ನಿಷೇಧ ಆದೇಶ ವಾಪಸ್ ಪಡೆಯುವ ಬಗ್ಗೆ ಸಿಎಂ ಘೋಷಣೆ ಮಾಡಿದ ಬೆನ್ನಲ್ಲೇ ರಾಜ್ಯದಲ್ಲಿ ಹೊಸ ಧರ್ಮ ದಂಗಲ್ ಶುರುವಾಗುವ ಆತಂಕ ಎದುರಾಗಿದೆ. ಈ ಬೆಳವಣಿಗೆಯಿಂದ ಸದ್ಯಕ್ಕೆ ವಿವಾದವನ್ನ ತಣ್ಣಗಾಗಿಸಲು ಸಿದ್ದರಾಮಯ್ಯ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಮಾಹಿತಿಯೊಂದು ಲಭಿಸಿದೆ.
ಲೋಕಸಭಾ ಚುನಾವಣೆ (Loksabha Election) ಹೊಸ್ತಿಲಲ್ಲಿ ಸದ್ಯಕ್ಕೆ ಯಾವುದೇ ಅಧಿಕೃತ ಆದೇಶ ಬೇಡ ಎಂದು ಸಚಿವರುಗಳು ಮನವಿ ಮಾಡಿದ್ದಾರೆ. ಹಿಜಬ್ ನಿಷೇಧದ ಆದೇಶ ಹೊರಡಿಸಿದರೆ ಶಾಲೆಗಳಲ್ಲಿ ಕೇಸರಿ ಶಾಲ್ ಅಭಿಯಾನ ಜೋರಾಗಬಹುದು ಎಂದು ಸಿದ್ದರಾಮಯ್ಯ ಸಂಪುಟ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಹಿಜಬ್ ನಿಷೇಧ ಆದೇಶ ವಾಪಸ್‌ಗೆ ಇನ್ನೂ ತೀರ್ಮಾನಿಸಿಲ್ಲ- ಇಂದು ಉಲ್ಟಾ ಹೊಡೆದ್ರಾ ಸಿಎಂ?
ಹಿಜಬ್ ನಿಷೇಧ ಆದೇಶ ವಾಪಸ್ ಪಡೆದರೂ ಏನೇ ಆದರೂ ನಮಗಾಗುವ ರಾಜಕೀಯ ಲಾಭ ಇಷ್ಟೆ. ಅದಕ್ಕೆ ಪರ್ಯಾಯವಾಗಿ ಆದೇಶ ಹೊರಡಿಸಿದರೆ ಬಿಜೆಪಿಗೆ ಆಗುವ ಲಾಭವೇ ಹೆಚ್ಚಾಗುತ್ತದೆ. ಹೀಗಾಗಿ ಸದ್ಯಕ್ಕೆ ಯಾವ ಆದೇಶವೂ ಬೇಡ, ಯಾವುದೇ ಘೋಷಣೆ ಬೇಡ ಎಂದು ಸಚಿವರು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.
ಹಿಜಬ್ ನಿಷೇಧ ಆದೇಶ ವಾಪಸ್ ಘೋಷಣೆಯನ್ನು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ಮಾಡಿದ್ದರು. ಹೀಗಾಗಿ ಅಧಿಕೃತ ಆದೇಶ ಇದುವರೆಗೂ ಮಾಡಿಲ್ಲ, ಆದರೆ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಈ ರಿಸ್ಕ್ ಬೇಡ ಎಂಬ ಒತ್ತಡ ತರತೊಡಗಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಘೋಷಣೆ ನಂತರವೂ ಅಧಿಕೃತ ಆದೇಶಕ್ಕೆ ಸ್ವತ: ಸಂಪುಟ ಸಹುದ್ಯೋಗಿಗಳಿಂದಲೇ ವಿರೋಧ ವ್ಯಕ್ತವಾಗತೊಡಗಿದೆ ಎನ್ನಲಾಗಿದೆ.