ಬೆಂಗಳೂರು: ಹಿಜಬ್ ವಿವಾದಕ್ಕೆ ಸಂಬಂಧಿಸಿ 11 ದಿನಗಳ ಕಾಲ ಸುದೀರ್ಘ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಪೂರ್ಣಪೀಠ ತೀರ್ಪನ್ನು ಕಾಯ್ದಿರಿಸಿದೆ.
11ನೇ ದಿನ ಮುಖ್ಯ ನ್ಯಾ.ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ಎಸ್ ದೀಕ್ಷಿತ್, ನ್ಯಾ.ಜೆಎಂ ಖಾಜಿ ಅವರಿದ್ದ ಪೂರ್ಣ ಪೀಠ ಫೆ.10 ರಂದು ಅರ್ಜಿ ವಿಚಾರಣೆ ಪ್ರಾರಂಭಿಸಿ ಇದೀಗ ಎರಡು ವಾರಗಳ ಕಾಲ ಸತತ ವಿಚಾರಣೆ ನಡೆಸಿದೆ. ಇದನ್ನೂ ಓದಿ: ಭಾರತ ಹಿಂದೂ ರಾಷ್ಟ್ರವಲ್ಲ, ಮುಸ್ಲಿಂ ರಿಪಬ್ಲಿಕ್ ಕೂಡಾ ಅಲ್ಲ ಜಾತ್ಯಾತೀತ ರಾಷ್ಟ್ರ – ಹಿಜಬ್ ಬಿಡಲು ಸಾಧ್ಯವಿಲ್ಲ
ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅವಶ್ಯಕ ಧಾರ್ಮಿಕ ಆಚರಣೆಯ ಭಾಗವೆಂದು ಹಿಜಬ್ ಪರ ವಕೀಲರು ವಾದ ಮಂಡಿಸಿದರು. ಇಂದು ವಿಚಾರಣೆ ಮುಂದುವರಿಸಿದ ನ್ಯಾಯಾಲಯ, ಅರ್ಜಿದಾರರ ಪರ ಹಿರಿಯ ವಕೀಲರಾದ ರವಿವರ್ಮ ಕುಮಾರ್, ಯೂಸುಫ್ ಮುಚ್ಚಲ ಮತ್ತು ವಕೀಲ ಮೊಹಮ್ಮದ್ ತಾಹಿರ್ ಅವರ ನಿರಾಕರಣಾ ವಾದಗಳನ್ನು ಆಲಿಸಿತು. ಜೊತೆಗೆ ಹಿಜಬ್ ಬೆಂಬಲಿಸಿದ ಡಾ. ವಿನೋದ್ ಕುಲಕರ್ಣಿ ಅವರ ವಾದವನ್ನು ಕೂಡ ಆಲಿಸಿತು. ಬಳಿಕ ಮಧ್ಯಂತರ ಆದೇಶ ನೀಡಬೇಕೆಂದು ಹಿಜಬ್ ಪರ ವಕೀಲರು ಮನವಿ ಮಾಡಿಕೊಂಡರು. ನಾವು ಒಂದು ತುಂಡು ಬಟ್ಟೆಗಾಗಿ ಮನವಿ ಮಾಡುತ್ತಿದ್ದೇವೆ ಈ ಕೋರ್ಟ್ ಸೂಕ್ತ ತೀರ್ಮಾನ ನೀಡಬೇಕಾಗಿ ಕೇಳಿಕೊಂಡರು.
ಮಧ್ಯಂತರ ಆದೇಶ ನೀಡಲು ನಿರಾಕರಿಸಿರುವ ಸಿಜೆ ಪೀಠ ಶೀಘ್ರವೇ ಅಂತಿಮ ಆದೇಶ ನೀಡುವುದಾಗಿ ತಿಳಿಸಿದೆ. ಇದಕ್ಕೂ ಮುನ್ನ, ವಿಚಾರಣೆ ವೇಳೆ ಶಿವಮೊಗ್ಗದ ಹರ್ಷ ಹತ್ಯೆ ಪ್ರಕರಣದ ಬಗ್ಗೆಯೂ ಪ್ರಸ್ತಾಪವಾಯ್ತು. ಸಂಘಟನೆಯೊಂದು ಹರ್ಷನನ್ನು ಉದ್ದೇಶಪೂರ್ವಕವಾಗಿ ಕೊಂದಿದ್ದಾರೆ ಎಂದು ಸಿಎಫ್‍ಐ ವಿರುದ್ಧ ಸರ್ಕಾರದ ಪರ ವಕೀಲ ಸುಭಾಷ್ ಝಾ ಹೇಳಿದರು. ಆಗ ನ್ಯಾಯಾಲಯ, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಅದಕ್ಕೆ ಮುನ್ನವೇ ಆರೋಪ ಬೇಡ ಎಂದು ಕಿವಿಮಾತು ನೀಡಿತು. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ತೆಗೆಸಿದಂತೆ ಟರ್ಬನ್ ತೆಗೆಸಿ – ರಾಜಧಾನಿಯಲ್ಲಿ ಟರ್ಬನ್ ಸಂಘರ್ಷ