Districts
ಯಾದಗಿರಿಯಲ್ಲಿ ರಾಜ್ಯ ಹೆದ್ದಾರಿಯಾಯ್ತು ಹಳ್ಳ – ಸವಾರರು ಸಾವಿರ ಕಣ್ಣಿಟ್ಟು ವಾಹನ ಓಡಿಸಬೇಕು

ಯಾದಗಿರಿ: ಕೆರೆ ನೀರಿನಿಂದ ಹೆದ್ದಾರಿ ಸೇತುವೆ ಮುಳುಗಿ ವಾಹನ ಸವಾರರು ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ನಡೆದಿದೆ.
ಕೊಡಂಗಲ್-ಸಿಂದಗಿಯ, ರಾಜ್ಯ ಹೆದ್ದಾರಿ 16ರ ರಸ್ತೆ ಮೇಲೆ ಕೆರೆ ನೀರು 15 ದಿನಗಳಿಂದ ಪ್ರತಿನಿತ್ಯವು ಜಲಪಾತದಂತೆ ಹರಿಯುತ್ತಿದ್ದು, ಗ್ರಾಮಸ್ಥರು ಹಾಗೂ ಪ್ರಯಾಣಿಕರು ಪ್ರಯಾಸ ಪಡುವಂತಾಗಿದೆ. ಕೆರೆ ನೀರಿನ ಹರಿವಿನ ರಭಸಕ್ಕೆ ರಾಜ್ಯ ಹೆದ್ದಾರಿ 16ರಲ್ಲಿರುವ ಸೇತುವೆ ಕೊಚ್ಚಿಹೋಗಿದೆ. ಜಲಪಾತದ ರೀತಿಯಲ್ಲಿ ನೀರು ಹರಿಯುತ್ತಿದೆ.
ಈ ರಸ್ತೆಯಲ್ಲಿ ಪ್ರಯಾಣ ಮಾಡುವವರು ಭಯಪಡುವಂತಾಗಿದೆ. ಹಗಲು ಹೊತ್ತಿನಲ್ಲಿ ಕಷ್ಟಪಟ್ಟು ವಾಹನ ಚಲಾಯಿಸಬಹುದು. ಆದರೆ ರಾತ್ರಿ ಇಲ್ಲಿ ಹೋಗೋದು ಕಷ್ಟ ಆದ್ದರಿಂದ ಅನಾಹುತದಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಕಣ್ಣಲ್ಲಿ ಕಣ್ಣಿಟ್ಟು ವಾಹನ ನಡೆಸಬೇಕಾಗಿದೆ, ಹೀಗಾಗಲೇ ಇಲ್ಲಿ ಸಾಕಷ್ಟು ಅಪಘಾತಗಳು ಕೂಡ ಸಂಭವಿಸಿವೆ. ಇಷ್ಟೆಲ್ಲಾ ಆದರೂ ಕೂಡ ಪಿಡಬ್ಲೂಡಿ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ. ಒಂದು ಸೂಚನಾ ಫಲಕ ಕೂಡ ಹಾಕಿಲ್ಲ.
ಹೀಗಾಗಿ ಇನ್ನಷ್ಟು ಅನಾಹುತಗಳು ಸಂಭವಿಸುವುದಕ್ಕೂ ಮುಂಚೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
