ನವದೆಹಲಿ: ದೇಶದಲ್ಲೇ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿರುವ ಆಘಾತಕಾರಿ ಅಂಶ ಪ್ರಕಟವಾಗಿದೆ.
2019ರಲ್ಲಿ ದಕ್ಷಿಣದ ಆರು ರಾಜ್ಯಗಳಲ್ಲಿ ಒಟ್ಟು 35 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು, 14 ಸಾವಿರ ಕೇಸ್ ದಾಖಲಾಗುವ ಮೂಲಕ ಕರ್ನಾಟಕ ಅಗ್ರ ಸ್ಥಾನದಲ್ಲಿದೆ.
Advertisement
ಲೋಕಸಭೆಯ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಕೇಂದ್ರ ಸರ್ಕಾರ ಉತ್ತರಿಸಿದ್ದು, ಇದರಲ್ಲಿ ಮಾಹಿತಿ ಬಹಿರಂಗವಾಗಿದೆ. ದಕ್ಷಿಣ ಭಾರತ ಆರು ರಾಜ್ಯಗಳಲ್ಲಿ ಶೇ.50ರಷ್ಟು ಪ್ರಕರಣಗಳು ದಾಖಲಾಗಿದ್ದು, ಕರ್ನಾಟಕ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಹಾಗೂ ಆಂಧ್ರ ಪ್ರದೇಶಗಳಲ್ಲಿ ಒಟ್ಟು 36 ಜನ ಈ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಡೆಂಗ್ಯೂ ಜ್ವರಕ್ಕೆ ಮನೆ ಮದ್ದು
Advertisement
Advertisement
ಅಕ್ಟೋಬರ್ ವರೆಗೆ ದೇಶದಲ್ಲಿ ಒಟ್ಟು 91 ಸಾವಿರ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ನವೆಂಬರ್ ಹಾಗೂ ಡಿಸೆಂಬರ್ ಅಂಕಿ ಅಂಶಗಳನ್ನೂ ಸೇರಿಸಿದರೆ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದು ಹೇಳಿದೆ.
Advertisement
ಮಹಾರಾಷ್ಟ್ರ ಹಾಗೂ ಗೋವಾಗಳಲ್ಲಿ ಅನುಕ್ರಮವಾಗಿ 9,899 ಹಾಗೂ 908 ಕೇಸ್ ದಾಖಲಾಗಿವೆ. ಡೆಂಗ್ಯೂ ಮಹಾಮಾರಿಯನ್ನು ನಿಯಂತ್ರಿಸಲು ಕರ್ನಾಟಕದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸಿದರೂ ಸಹ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ.
ಕಳೆದ ವರ್ಷ ರಾಜ್ಯದಲ್ಲಿ 4 ಸಾವಿರ ಪ್ರಕರಣಗಳು ಪತ್ತೆಯಾಗಿದ್ದವು. ಇದರಲ್ಲಿ ಶೇ.70ರಷ್ಟು ಬೆಂಗಳೂರಿನಲ್ಲಿಯೇ ದಾಖಲಾಗಿದ್ದವು. ಅಲ್ಲದೆ ಡೆಂಗ್ಯೂ ಮಹಾಮಾರಿಗೆ ದಕ್ಷಿಣದ ರಾಜ್ಯಗಳಲ್ಲಿ ಹಲವರು ಮೃತಪಟ್ಟಿದ್ದರು. ದೇಶಾದ್ಯಂತ ಒಟ್ಟು 82 ಜನ ಸಾವನ್ನಪ್ಪಿದ್ದರು. ಕರ್ನಾಟಕ, ಕೇರಳಗಳಲ್ಲಿ 13 ಹಾಗೂ 16 ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ದಕ್ಷಿಣ ರಾಜ್ಯಗಳಲ್ಲೇ ಹೆಚ್ಚೇಕೆ?
ಅಧಿಕಾರಿಗಳ ನಿರಾಸಕ್ತಿ ಹಾಗೂ ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳನ್ನು ನಿಯಂತ್ರಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಇಲ್ಲದಿರುವುದೇ ಡೆಂಗ್ಯೂ ಪ್ರಕರಣಗಳು ಹೆಚ್ಚಲು ಕಾರಣ. ಈ ಕುರಿತು ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ. ಆಶಾ ಕಾರ್ಯಕರ್ತೆಯರ ಮೂಲಕ ರಾಜ್ಯಾದ್ಯಂತ ಬೃಹತ್ ಜಾಗೃತಿ ಅಭಿಯಾನವನ್ನು ನಾವು ಕೈಗೊಂಡಿದ್ದೇವೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಿ.ಕೆ.ಪಾಂಡೆ ತಿಳಿಸಿದ್ದಾರೆ.