ಬೆಂಗಳೂರು: ಸಚಿವ ಸ್ಥಾನ ಹಂಚಿಕೆಯಾದ ದಿನದಿಂದ ಅಸಮಾಧಾನ ಹೊರಹಾಕಿದ್ದ ಜಿ ಟಿ ದೇವೇಗೌಡರು ಕೊನೆಗೂ ಉನ್ನತ ಶಿಕ್ಷಣ ಖಾತೆಗೆ ತೃಪ್ತಿಪಟ್ಟಿದ್ದಾರೆ. ಇಂದು ವಿಧಾನಸೌದದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 344ರಲ್ಲಿ ಕುಟುಂಬ ಸಮೇತ ಪೂಜೆ ಸಲ್ಲಿಸಿ, ಉನ್ನತ ಶಿಕ್ಷಣ ಖಾತೆಯ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
ಪೂಜೆ ಸಲ್ಲಿಸಿದ ಬಳಿಕ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಗಳು ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ಖಾತೆ ನೀಡಿದ್ದಾರೆ. ಉನ್ನತ ಶಿಕ್ಷಣ ಖಾತೆಯನ್ನು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ ನಂಬಿಕೆ ಇಟ್ಟು ಕೊಟ್ಟಿದ್ದಾರೆ. ಆದ್ದರಿಂದ ಅವರು ಇಟ್ಟ ನಂಬಿಕೆಯನ್ನು ಉಳಿಸಿಕೊಂಡು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ತಿಳಿಸಿದರು.
ನನಗೆ ಕಂದಾಯ ಹಾಗೂ ಜಲಸಂಪನ್ಮೂಲ ಖಾತೆ ಸಿಗಬೇಕೆಂದು ಆಸೆ ಪಟ್ಟಿದ್ದೆ, ಆದರೆ ಅದು ಕಾಂಗ್ರೆಸ್ ಪಕ್ಷದವರ ಪಾಲಾದ ಹಿನ್ನೆಲೆಯಲ್ಲಿ ನನಗೆ ಉನ್ನತ ಶಿಕ್ಷಣ ಖಾತೆ ಸಚಿವ ಸ್ಥಾನ ಕೊಟ್ಟಿದ್ದರು. ಆದರೆ 8ನೇ ತರಗತಿ ಓದಿದ ನನಗೆ ಉನ್ನತ ಶಿಕ್ಷಣ ಇಲಾಖೆ ಬೇಡವೆಂದು ಮುನಿಸಿಕೊಂಡಿದ್ದು ನಿಜ ಎಂದು ಈ ವೇಳೆ ಹೇಳಿದರು. ಇದನ್ನೂ ಓದಿ: ಪ್ಲೀಸ್ ನನ್ನ ಹತ್ರ ಬರ್ಬೇಡಿ ಫೈಲ್ ನೋಡಲ್ಲ, ನೀವು ಅವರ ಹತ್ರನೇ ಹೋಗಿ ಪ್ಲೀಸ್- ಜಿ.ಟಿ ದೇವೇಗೌಡ
ರಾಷ್ಟ್ರದಲ್ಲಿಯೇ ಕರ್ನಾಟಕ ರಾಜ್ಯ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಗುರಿಯಾಗಿದೆ. ಇಂದು ಉನ್ನತ ಶಿಕ್ಷಣ ವಿಭಾಗದಲ್ಲಿ ಹೆಣ್ಣುಮಕ್ಕಳು ಕೇವಲ 25%ರಷ್ಟು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಹೊರದೇಶಗಳಲ್ಲಿ 75% ಪಾಲ್ಗೋಳ್ಳುತ್ತಾರೆ. ನಮ್ಮ ಹಳ್ಳಿಗಳಲ್ಲಿನ ಹೆಣ್ಣು ಮಕ್ಕಳು ಉನ್ನತ ಶಿಕ್ಷಣದ ಪ್ರಯೋಜನ ಪಡೆಯಬೇಕು. ಗುಣಮಟ್ಟದ ಶಿಕ್ಷಣಕ್ಕಾಗಿ ರಾಜ್ಯದಲ್ಲಿರುವ ಎಲ್ಲಾ ಶಿಕ್ಷಣ ತಜ್ಞರ ಸಲಹೆ, ಸಹಕಾರದೊಂದಿಗೆ ಉತ್ತಮ ವ್ಯವಸ್ಥೆ ಜಾರಿಗೊಳಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಜಿ.ಟಿ ದೇವೇಗೌಡರಿಗೆ ಯಾವ ಖಾತೆ ಅನ್ನೋದು ಇನ್ನೆರಡು ದಿನಗಳಲ್ಲಿ ನಿರ್ಧಾರ: ಸಚಿವ ಸಾರಾ ಮಹೇಶ್
ನಾನು ಕೇವಲ 8ನೇ ತರಗತಿ ಓದಿದರೂ ನನ್ನ ಮಕ್ಕಳಿಗೆ ಉನ್ನತ ವ್ಯಾಸಂಗ ಕಲ್ಪಿಸಿದ್ದೇನೆ. ಆದ್ದರಿಂದ ರಾಜ್ಯದ ಎಲ್ಲಾ ಮಕ್ಕಳಿಗೂ ಉನ್ನತ ಶಿಕ್ಷಣ ಕಲ್ಪಿಸುವ ಜವಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
https://www.youtube.com/watch?v=adScMxvbYeo