ಬೆಂಗಳೂರು: ರಾಜ್ಯ ಚುನಾವಣೆ ಗೆಲ್ಲಲು ಜೆಡಿಎಸ್ ಭರದ ಸಿದ್ಧತೆ ಕೈಗೊಂಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಅವರ ಚುನಾವಣಾ ಪ್ರಚಾರಕ್ಕಾಗಿ ಹೈಟೆಕ್ ಬಸ್ ನಿರ್ಮಾಣವಾಗಿದೆ.
2018ರ ಚುನಾವಣಾ ಪ್ರಚಾರಕ್ಕೆ ಹೆಚ್ಚು ಕಡಿಮೆ ಒಂದು ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಹೈಟೆಕ್ ಬಸ್ ಸಿದ್ಧವಾಗಿದೆ. ತಮಿಳುನಾಡಿನಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಅಶೋಕ ಲೈಲೆಂಡ್ ಬಸ್ಸನ್ನು ಮಾಡಿಫೈ ಮಾಡಲಾಗಿದೆ. ಈ ಹೈಟೆಕ್ ಬಸ್ ತಯಾರಿಕೆ ಜುಲೈನಲ್ಲಿಯೇ ಆರಂಭವಾಗಿದ್ದು, ಮುಂದಿನ ತಿಂಗಳು ನವೆಂಬರ್‍ನಲ್ಲಿ ಈ ಬಸ್‍ಗೆ ಚಾಲನೆ ನೀಡಲಾಗುತ್ತದೆ.
ಬಸ್‍ನಲ್ಲಿದೆ ಹೈಟೆಕ್ ವ್ಯವಸ್ಥೆ: ಈ ಬಸ್‍ನಲ್ಲಿ ಏನುಂಟು, ಏನಿಲ್ಲ. ಇದನ್ನು ಚಲಿಸುವ ಅರಮನೆ ಎಂದರೂ ತಪ್ಪಿಲ್ಲ. ಈ ಬಸ್‍ನಲ್ಲಿ ಐಷಾರಾಮಿ ಬೆಡ್ ರೂಮ್ ಇದೆ. ಒಂದು ಚಿಕ್ಕ ಮೀಟಿಂಗ್ ಹಾಲ್, ಅಡುಗೆ ರೂಮ್, ಶೌಚಾಲಯವಿದೆ. ಅಲ್ಲದೆ ಹೈಡ್ರೋಲಿಕ್ ಲಿಫ್ಟ್, ಸನ್ ರೂಫ್, ಎಸಿ, ಟಿವಿ ಮತ್ತು ಕುಳಿತುಕೊಳ್ಳಲು ಸೋಫಾ ಇತ್ಯಾದಿ ವ್ಯವಸ್ಥೆಗಳಿವೆ. ಪ್ರಚಾರದ ಸಮಯದಲ್ಲಿ ನಾಲ್ಕು ಮಂದಿ ಬಸ್ ಒಳಗೆ ನಿಲ್ಲಬಹುದಾಗಿದೆ. ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೋಹಿತ್ ಅಲ್ತಾಫ್ ನೇತೃತ್ವದಲ್ಲಿ ಈ ಬಸ್ ತಯಾರಾಗುತ್ತಿದೆ.
ಈ ಬಸ್‍ನಲ್ಲಿ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರವನ್ನು ಮಾಡಲಿದ್ದು, ಗ್ರಾಮ ವಾಸ್ತವ್ಯ ಸೇರಿದಂತೆ ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದಾರೆ. ಮೊದಲಿಗೆ ಮೈಸೂರಿನ ಚಾಮುಂಡೇಶ್ವರಿ ತಾಯಿಗೆ ನಮಿಸಿ ನಂತರ ಪ್ರಚಾರವನ್ನು ಆರಂಭಿಸುತ್ತಾರೆ ಎನ್ನಲಾಗಿದೆ.
https://www.youtube.com/watch?v=kgc3R7fTvW4