ವಾಹನ ಕಂಪನಿಯೇ ನೀಡಲಿದೆ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್: ವಿಶೇಷತೆ ಏನು? ಕಡ್ಡಾಯ ಯಾಕೆ?

Public TV
2 Min Read
NUMBER PLATE

ನವದೆಹಲಿ: 2019ರ ಏಪ್ರಿಲ್ ತಿಂಗಳಿನಿಂದ ರಸ್ತೆಗಿಳಿಯುವ ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿ ತಯಾರಿಕಾ ಸಂಸ್ಥೆಗಳೇ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ಆಳವಡಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರ ಬುಧವಾರ ಕೇಂದ್ರೀಯ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದು, ನೂತನ ಅಧಿಸೂಚನೆಯನ್ನು ಹೊರಡಿಸಿದೆ. ಹೀಗಾಗಿ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್‍ಗಳನ್ನು ವಾಹನ ತಯಾರಿಕಾ ಸಂಸ್ಥೆಗಳೇ ಖುದ್ದು ಅಳವಡಿಸಬೇಕು. ಅಲ್ಲದೇ ವಾಹನದ ಶುಲ್ಕದಲ್ಲಿಯೇ ಇದನ್ನು ತಯಾರಿಕಾ ಸಂಸ್ಥೆಗಳು ಭರಿಸಬೇಕೆಂದು ಸೂಚಿಸಿದೆ.

high security number

ಸದ್ಯ ದೇಶಾದ್ಯಂತ ಏಕರೂಪದ ನಂಬರ್ ಪ್ಲೇಟ್‍ಗಳು ಇಲ್ಲ. ಇದರಿಂದಾಗಿ ವಾಹನಗಳನ್ನು ಕಳ್ಳತನ ಮಾಡಿದ ಕಳ್ಳರು ಸುಲಭವಾಗಿ ನಂಬರ್ ಪ್ಲೇಟ್‍ಗಳನ್ನು ಬದಲಾಯಿಸುತ್ತಾರೆ. ಅಲ್ಲದೇ ಇಂತಹ ವಾಹನಗಳು ಹೆಚ್ಚಾಗಿ ಅಪರಾಧ ಪ್ರಕರಣದಲ್ಲಿ ಬಳಕೆಯಾಗುತ್ತಿವೆ. ಇಂತಹ ಕೃತ್ಯಗಳನ್ನು ತಡೆಯಲು ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್‍ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಕಟ್ಟು-ನಿಟ್ಟಿನ ಆದೇಶವನ್ನು ಹೊರಡಿಸಿದೆ.

ಹೈ-ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್(ಹೆಚ್‍ಎಸ್‍ಆರ್‌ಪಿ)ಗಳನ್ನು ಭದ್ರತೆಯ ದೃಷ್ಟಿಯಿಂದ 2005ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಬಳಿಕ 2012ರಿಂದ ಇದನ್ನು ಕಡ್ಡಾಯಗೊಳಿಸಿತ್ತು. ಆದರೂ ದೇಶಾದ್ಯಂತ ಇದು ಕಡ್ಡಾಯವಾಗಿರಲಿಲ್ಲ. ಸದ್ಯದ ನಿಯಮಗಳ ಪ್ರಕಾರ ಈ ನಂಬರ್ ಪ್ಲೇಟ್‍ಗಳನ್ನು ವಾಹನ ಮಾಲೀಕರು ಅಧಿಕೃತ ವ್ಯಾಪಾರಿಗಳು ಅಥವಾ ಡೀಲರ್‍ಗಳಿಂದ ಖರೀದಿಸಬೇಕಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರ ಉತ್ಪಾದಕ ಸಂಸ್ಥೆಗಳಿಗೆ ಕಡ್ಡಾಯವಾಗಿ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್‍ಗಳನ್ನು ಪೂರೈಸುವಂತೆ ಸೂಚಿಸಿದೆ.

ಇದಲ್ಲದೇ ರಾಜ್ಯ ಸರ್ಕಾರ ಅನುಮತಿ ನೀಡಿದರೆ ವಾಹನ ಡೀಲ್‍ರಗಳು, ಹಳೆಯ ವಾಹನಗಳಿಗೂ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಬಹುದೆಂದು ಹೇಳಿದೆ.  ಇದನ್ನೂ ಓದಿ: ದೇಶಾದ್ಯಂತ ಏಕರೂಪದ ಡಿಎಲ್, ಆರ್‌ಸಿ: ಏನೇನು ಮಾಹಿತಿ ಇರುತ್ತೆ? ಯಾವಾಗ ಬರುತ್ತೆ? ದರ ಎಷ್ಟು?

ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ವಿಶೇಷತೆ ಏನು?
ದೇಶಾದ್ಯಂತ ಒಂದೇ ವಿನ್ಯಾಸ ಹೊಂದಿರುವ ಅಲ್ಯುಮಿನಿಯಂನಿಂದ ತಯಾರಿಸಿದ ಪ್ಲೇಟ್ ಇದಾಗಿದ್ದು, ವಾಹನಗ ನೋಂದಣಿ ಸಂಖ್ಯೆ ಜೊತೆಗೆ ಪ್ರತಿ ಪ್ಲೇಟ್‍ನಲ್ಲಿಯೂ 7 ಅಂಕಿಗಳ ವಿಶಿಷ್ಟ ಲೇಸರ್ ಕೋಡ್ ಇರುತ್ತದೆ. ಈ ಕೋಡ್ ಸಾರಿಗೆ ಇಲಾಖೆಯ ವಾಹನ್ ಡೇಟಾಬೇಸ್‍ನಲ್ಲಿ ದಾಖಲಾಗಿರುತ್ತದೆ.

ನಂಬರ್ ಪ್ಲೇಟ್‍ನಲ್ಲಿ ಕ್ರೋಮಿಯಂನಿಂದ ಮಾಡಲಾಗಿರುವ ಚಕ್ರದ ಗುರುತು, ಎಂಜಿನ್, ಚಾಸಿ ನಂಬರ್ ಸೇರಿದಂತೆ ಐನ್‍ಡಿ ಎಂಬ ಅಕ್ಷರಗಳನ್ನು ಮುದ್ರಿಸಿರಲಾಗಿರುತ್ತದೆ. ಅಲ್ಲದೇ ವಾಹನ ಸಂಖ್ಯೆಯ ಮೇಲೆ 45 ಡಿಗ್ರಿ ಕೋನದಲ್ಲಿ ಇಂಡಿಯಾ ಎಂದು ಬರೆದಿರಲಾಗಿರುತ್ತದೆ.

6812712cf416f8a2d5c64d3faf460889 555X416 1 1

ಈ ನಂಬರ್ ಪ್ಲೇಟ್‍ನಲ್ಲಿ ಸ್ನ್ಯಾಪ್ ಲಾಕ್ ಅಳವಡಿಸಲಾಗಿತ್ತು. ಇದನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ. ಒಂದುವೇಳೆ ತೆಗೆಯಲು ಹೋಗಿ ಏನಾದರೂ ಆದರೆ, ನೇರವಾಗಿ ಆರ್‍ಟಿಓ ಕಚೇರಿಗೆ ಹೋಗಿ ಹೊಸ ಪ್ಲೇಟ್ ಅನ್ನು ಬದಲಾಯಿಸಬೇಕಾಗುತ್ತದೆ.

ಇದರಲ್ಲಿರುವ ಲೇಸರ್ ಕೋಡ್‍ಗಳನ್ನು ಪೊಲೀಸರು, ಲೇಸರ್ ಉಪಕರಣದಿಂದ ಸ್ಕ್ಯಾನ್ ಮಾಡಿದಾಗ, ವಾಹನದ ನಂಬರ್ ಪ್ಲೇಟ್ ಆ ವಾಹನದ್ದೋ ಅಥವಾ ಬೇರೆ ವಾಹನದ್ದೋ ಎನ್ನುವುದನ್ನು ಪತ್ತೆಹಚ್ಚಲು ಸುಲಭವಾಗುತ್ತದೆ.

ap n south in pic dec 11 set 2 1

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *