ಮಡಿಕೇರಿ: ವಿಯೇಟ್ನಾಂನಿಂದ ಅತ್ಯಂತ ಕಳಪೆ ಗುಣಮಟ್ಟದ ಮೆಣಸು ಆಮದಾಗುತ್ತಿದ್ದು, ಉತ್ತಮ ಗುಣಮಟ್ಟದ ಕೊಡಗಿನ ಕಾಳುಮೆಣಸಿನೊಂದಿಗೆ ಕಲಬೆರಕೆಯಾಗಿ ಮಾರಾಟವಾಗುತ್ತಿದ್ದೆ. ಇದರಿಂದ ಕೊಡಗಿನ ಹೈ ಕ್ವಾಲಿಟಿ ಪೆಪ್ಪರ್ ತನ್ನ ಕ್ವಾಲಿಟಿ ಕಳೆದುಕೊಳ್ಳುತ್ತಿರೋದರಿಂದ ಮೆಣಸಿನ ಬೆಲೆ ಗಣನೀಯವಾಗಿ ಕುಸಿತ ಕಂಡಿದೆ.
ಕಲಬೆರಕೆ ಮಾಡೋ ಕಾರ್ಯ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ರೋಸ್‍ಮೇರಿ ಇಂಟರ್ ನ್ಯಾಷನಲ್ ಕಂಪೆನಿಗೆ ನೀಡುತ್ತಿರೋ ಗೋಣಿಕೊಪ್ಪ ಎಪಿಎಂಸಿ ಗೋಡೌನ್ ನಲ್ಲಿ ಕಲಬೆರಕೆ ಹುಡಿಗಳು, ಯಂತ್ರಗಳು ಹಾಗೂ ವಿಯೆಟ್ನಾಂ ಪೆಪ್ಪರ್ ಪತ್ತೆಯಾಗಿದೆ.
ಎಪಿಎಂಸಿಗೆ ಸೇರಿದ ಗೋಡೌನ್ ಒಳಗೆ ಕಲಬೆರಕೆ ನಡೆಯುತ್ತಿರೋದ್ರಲ್ಲಿ ಆಡಳಿತ ಮಂಡಳಿ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದ್ದು, ಇದನ್ನು ಖಂಡಿಸಿ ಕೊಡಗು ಜಿಲ್ಲಾ ರೈತ ಸಂಘ ಬೃಹತ್ ಟ್ರ್ಯಾಕ್ಟರ್ ಜಾಥಾ ನಡೆಸಿ ವಿಯೆಟ್ನಾಂ ಪೆಪ್ಪರ್ ಆಮದು ನಿಷೇಧಕ್ಕೆ ಆಗ್ರಹಿಸಿದ್ರು.
ಇದಕ್ಕೆಲ್ಲಾ ಎಪಿಎಂಸಿಯ ಬಿಜೆಪಿ ಹಿಡಿತದ ಆಡಳಿತ ಮಂಡಳಿಯೇ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ಕೊಡಗು ಜಿಲ್ಲಾ ಪಂಚಾಯಿತಿ ಸಭೆಯಲ್ಲೂ ಪ್ರಸ್ತಾಪವಾಗಿ ಕೋಲಾಹಲಕ್ಕೆ ಕಾರಣವಾಯಿತು. ಎಪಿಎಂಸಿ ವಿಯೆಟ್ನಾಂ ಕಾಳುಮೆಣಸು ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಸಭೆಯಲ್ಲಿ ಪ್ರತಿಭಟನೆ ನಡೆಸಿದರು.
ಒಟ್ಟಿನಲ್ಲಿ ವಿಯೇಟ್ನಾಂ ಕಾಳುಮೆಣಸು ಈಗ ಕೊಡಗಿನ ರೈತರನ್ನು ಕಂಗೆಡುವಂತೆ ಮಾಡಿದೆ.